ADVERTISEMENT

ಕೃಷಿ ಸಮಸ್ಯೆಗೆ ಪರಿಹಾರ: ಭರವಸೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 6:33 IST
Last Updated 17 ಜೂನ್ 2017, 6:33 IST

ಹಾಸನ: ತಾಲ್ಲೂಕು ಮಟ್ಟದ ಕೃಷಿ ಅಭಿಯಾನಕ್ಕೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಟಿ.ಸತೀಶ್ ಶುಕ್ರವಾರ ಚಾಲನೆ ನೀಡಿದರು. ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಹೋಬಳಿಯಾದ್ಯಂತ ಸಂಚರಿಸುವ ಕೃಷಿ ರಥದ ಸಂಚಾರಕ್ಕೆ  ಕೃಷಿ ಇಲಾಖೆ ಆವರಣದಲ್ಲಿ ಹಸಿರು ನಿಶಾನೆ ತೋರಲಾಯಿತು.

ಸತೀಶ್‌ ಮಾತನಾಡಿ, ‘ಸರ್ಕಾರದ  ಯೋಜನೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ಅಭಿಯಾನ ಉತ್ತಮ ಕಾರ್ಯಕ್ರಮವಾಗಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಭಾನು ಪ್ರಕಾಶ್  ಮಾತನಾಡಿ, ‘ಕೃಷಿ ಸಂಬಂಧಿತ ಇಲಾಖೆಗಳ ಕಾರ್ಯಕ್ರಮಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರ ಕೃಷಿ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಒದಗಿಸಲಾಗುವುದು’ ಎಂದು ಹೇಳಿದರು.

ADVERTISEMENT

ಕೃಷಿ ಮಾಹಿತಿ ರಥವು ಜೂನ್  29 ರವರೆಗೆ ಹಾಸನ ತಾಲ್ಲೂಕಿನಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಇಲಾಖೆಯ ಯೋಜನೆಗಳು, ಸವಲತ್ತುಗಳು, ರೈತರ ಸಮಸ್ಯೆಗಳು, ಕೃಷಿ ನೂತನ ತಂತ್ರಜ್ಞಾನಗಳು ಮತ್ತು ಹಲವು ಮಾಹಿತಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಿದೆ.

ಭೂ ಚೇತನ, ರಾಗಿ ಮತ್ತು ಜೋಳ ಅಭಿವೃದ್ಧಿ ಯೋಜನೆ, ಕೃಷಿ ಭಾಗ್ಯ ಯೋಜನೆ, ಸಮಗ್ರ ಜಲಾನಯನ ಯೋಜನೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಯೋಜನೆಗಳ ಸಮಗ್ರ ಮಾಹಿತಿಯನ್ನೊಳಗೊಂಡ ಕರ ಪತ್ರಗಳನ್ನು ವಿತರಿಸಲಾಗುವುದು ಎಂದರು.

17 ರಂದು ಗೊರೂರು ಗ್ರಾಮದಲ್ಲಿ ಕೃಷಿ ವಸ್ತು ಪ್ರದರ್ಶನ ಹಾಗೂ ರೈತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.  ಕಟ್ಟಾಯ ಹೋಬಳಿಯ ಬೆಳೆವಾರು ರೈತರ ಸಮಸ್ಯೆಗಳನ್ನು ಚರ್ಚಿಸಿ ಸ್ಥಳದಲ್ಲೇ ವಿಜ್ಞಾನಿಗಳಿಂದ ಪರಿಹಾರ ಸೂಚಿಸಲಾಗುವುದು. 

ಸಂಚಾರಿ ಮಣ್ಣು  ಪರೀಕ್ಷೆ ಘಟಕದಿಂದ ಸ್ಥಳದಲ್ಲಿಯೇ ಮಣ್ಣು ಮಾದರಿ ಪರೀಕ್ಷೆ ಮಾಡಿಸಲಾಗುವುದು ಎಂದು   ಅವರು ತಿಳಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಗದೀಶ್ ಮತ್ತು  ನಿಂಗೇಗೌಡ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.