ADVERTISEMENT

ಕೃಷ್ಣಜನ್ಮಾಷ್ಟಮಿ; ಚನ್ನಕೇಶವ ದೇಗುಲದಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 8:50 IST
Last Updated 15 ಸೆಪ್ಟೆಂಬರ್ 2017, 8:50 IST

ಬೇಲೂರು: ಇಲ್ಲಿನ ಚನ್ನಕೇಶವ ದೇಗುಲದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಎರಡು ಹಂತದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಕಾರ್ಯಕ್ರಮ ನಡೆಯುತ್ತದೆ. ಮೊದಲ ಹಂತವಾಗಿ ಬುಧವಾರ ರಾತ್ರಿ ದೇವಾಲಯದ ನವರಂಗದ ದಕ್ಷಿಣ ಬದಿಯ ಬಾಗಿಲಿನ ಒಳ ಆವರಣದಲ್ಲಿ ಬಿದಿರು ಮತ್ತು ಬಾಳೆ ತಟ್ಟೆಗಳಿಂದ ಮಂಟಪ ನಿರ್ಮಿಸಲಾಗಿತ್ತು. ಇದು ಕಂಸ ನಿರ್ಮಿಸಿದ ಸೆರೆಮನೆಯ ಸಂಕೇತ.

ಇದರಲ್ಲಿ ಕೃಷ್ಣನು ಹುಟ್ಟಿದ ಸಂಕೇತವಾಗಿ ಬಾಲ ಕೃಷ್ಣನ ಕಂಚಿನ ವಿಗ್ರಹವನ್ನು ಮಾತೆಯರಾದ ದೇವಕಿ ಮತ್ತು ಯಶೋದಾ ಅನಂತಪೀಠ ವಾಹನದ ಮೇಲೆ ಇರಿಸಿ ಅಲಂಕರಿಸಲಾಗಿತ್ತು. ಕೃಷ್ಣನಿಗೆ ಜನ್ಮೋತ್ಸವದ ಸಂಕೇತವಾಗಿ ಹಾಲಿನ ಅರ್ಘ್ಯ, ಬಾಲಕೃಷ್ಣನಿಗೆ ಪ್ರಿಯವಾದ ಕಲ್ಲು ಸಕ್ಕರೆ ಬೆರೆಸಿದ ಎಣ್ಣೆ, ಚಕ್ಕುಲಿ, ಕರಿಗಡುಬು, ಪೊಂಗಲ್‌ಗಳನ್ನು ನಿವೇದಿಸಿ ಅವನ್ನು ತೀರ್ಥ ಪ್ರಸಾದವಾಗಿ ಭಕ್ತರಿಗೆ ವಿತರಿಲಾಯಿತು.

ಗುರುವಾರ ಬೆಳಿಗ್ಗೆ ಬಾಲ ವಿಗ್ರಹವನ್ನು ಪಲ್ಲಕ್ಕಿಯಲ್ಲಿರಿಸಿ ಅಲಂಕರಿಸಲಾಗಿತ್ತು. ಸಂಜೆ ಸೆರೆಮನೆಯ ಮಂಟಪದಲ್ಲಿ ತೊಟ್ಟಿಲು ಕಟ್ಟಿ ಅದರಲ್ಲಿ ಬಾಲ ಕೃಷ್ಣ ಮತ್ತು ಬಲರಾಮರ ಮೂರ್ತಿಗಳನ್ನು ಮಲಗಿಸಲಾಗಿತ್ತು. ಭಕ್ತರು ಈ ತೊಟ್ಟಿಲನ್ನು ತೂಗಿ ಸಂಭ್ರಮಿಸಿದರು. ಕೃಷ್ಣಜನ್ಮಾಷ್ಟಮಿ ಅಂಗವಾಗಿ ಚನ್ನಕೇಶವ ದೇಗುಲದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು.

ADVERTISEMENT

ಚನ್ನಕೇಶವ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್‌, ಕಾರ್ಯನಿರ್ವಾಹಕ ಅಧಿಕಾರ ಆರ್‌.ವಿದ್ಯುಲ್ಲತಾ, ಅರ್ಚಕರಾದ ಕೃಷ್ಣಸ್ವಾಮಿ ಭಟ್ಟರ್‌, ಶ್ರೀನಿವಾಸ ಭಟ್ಟರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.