ADVERTISEMENT

ಕೆರೆ ಪುನಶ್ಚೇತನದಿಂದ ಬದಲಾದ ಪರಿಸರ

ದೊಡ್ಡಕೊಂಡಗೊಳ ಗ್ರಾಮದ ಮುಖಂಡ ಧರಣಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 5 ಮೇ 2018, 11:59 IST
Last Updated 5 ಮೇ 2018, 11:59 IST

ಹಾಸನ : ‘ಕೆರೆ-ಕಲ್ಯಾಣಿಗಳ ಪುನಶ್ಚೇತನದ ನಂತರ ಹಳ್ಳಿಗಳ ಪರಿಸರದಲ್ಲಿ ಗಮನಾರ್ಹ ಬದಲಾವಣೆ ಆಗಿದೆ’ ಎಂದು ದೊಡ್ಡಕೊಂಡಗೊಳ ಗ್ರಾಮದ ಮುಖಂಡ ಧರಣಿ ಹರ್ಷ ವ್ಯಕ್ತಪಡಿಸಿದರು.

ಹಾಸನದ ಹಸಿರು ಭೂಮಿ ಪ್ರತಿಷ್ಠಾನ ಹಾಗೂ ದೊಡ್ಡಕೊಂಡಗೊಳ ಗ್ರಾಮದ ಗ್ರಾಮ ಸ್ವರಾಜ್ಯ ಸಮಿತಿ ಆಶ್ರಯದಲ್ಲಿ ದೊಡ್ಡಕೊಂಡಗೊಳ ಗ್ರಾಮದಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವ ‘ಹಸಿರುಭೂಮಿ ಸಮ್ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮೇ 1ರಂದು ಹಸಿರು ಭೂಮಿ ಪ್ರತಿಷ್ಠಾನದ ಪದಾಧಿಕಾರಿಗಳು ಗ್ರಾಮಕ್ಕೆ ಬಂದು ಕಲ್ಯಾಣಿ ಕೆಲಸ ಮಾಡುತ್ತಿದ್ದಾಗ ಏನೋ ನಾಟಕ ಮಾಡಿ ಹೋಗುತ್ತಾರೆ ಎಂದುಕೊಂಡಿದ್ದೆ. ಆದರೆ, ದಿನ ಕಳೆದಂತೆ ಎರಡು ಕಲ್ಯಾಣಿಗಳ ಕೆಲಸವನ್ನು ಮಾಡಿ ಮುಗಿಸಿ, ಊರ ಮುಂದಿನ ಕೆರೆಯ ಹೂಳು ತೆಗೆಸಿ, ಒಣಗಿ ಬರಗುಟ್ಟುತ್ತಿದ್ದ ಕೆರೆ, ಕಲ್ಯಾಣಿಗಳಲ್ಲಿ ನೀರು ತುಂಬಿ ಮೀನುಗಳ ಆಟ, ಕಪ್ಪೆಗಳ ವಟಗುಟ್ಟುವಿಕೆ ಕಂಡು ನನಗಾದ ಸಂತೋಷ ಅಷ್ಟಿಷ್ಟಲ್ಲ. ನಂತರದ ದಿನಗಳಲ್ಲಿ ಈ ಕೆಲಸಗಳಲ್ಲಿ ನಾನೂ ಕೈ ಜೋಡಿಸಿದೆ’ ಎಂದರು.

ADVERTISEMENT

ಪರಿಸರವಾದಿ ಚ.ನ.ಅಶೋಕ್ ಮಾತನಾಡಿ, ಹಸಿರುಭೂಮಿ ಪ್ರತಿಷ್ಠಾನವು ರಾಜ್ಯ ಮಾತ್ರವಲ್ಲದೆ ಇಡೀ ದೇಶಕ್ಕೆ ಮಾದರಿಯಾದ ಕೆಲಸ ಮಾಡುತ್ತಿದೆ ಎಂದರು.

ಅರಸೀಕೆರೆಯ ಹರಿಪ್ರಸಾದ್ ಹಾಗೂ ಆಲೂರಿನ ಆದಿಲ್ ಅವರು ತಮ್ಮ ಊರುಗಳಲ್ಲಿ ಆದ ಕೆಲಸಗಳ ಬಗ್ಗೆ ವಿವರಿಸಿದರು.

ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ರೂಪ ಹಾಸನ ಮಾತನಾಡಿ, ‘ಪ್ರತಿಷ್ಠಾನವು ಜಿಲ್ಲೆಯಲ್ಲಿ 34 ಕಲ್ಯಾಣಿಗಳು, 4 ಕೆರೆಗಳ ಪುನಶ್ಚೇತನ ಮಾಡಿದೆ ಮತ್ತು ಮಾಡಿಸಿದೆ. 5000ಕ್ಕೂ ಹೆಚ್ಚು ಗಿಡ ನೆಡಲಾಗಿದೆ. ಅರಣ್ಯ ಇಲಾಖೆಯ ಜೊತೆಗೂಡಿ ಬೀಜದುಂಡೆಗಳ ತಯಾರಿಸಲಾಗಿದೆ. ಕಾಲೇಜಿನ ಪರಿಸರ ಪ್ರಿಯ ಯುವಜನರ ನೆರವಿನೊಂದಿಗೆ ಬೃಹತ್ ಮಳೆ ನೀರು ಸಂಗ್ರಹ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಪುನಶ್ಚೇತನವಾದ ಹಲವಾರು ಕೆರೆ, ಕಲ್ಯಾಣಿಗಳಲ್ಲಿ ಈ ಬಿರು ಬೇಸಗೆಯಲ್ಲೂ ನೀರು ತುಂಬಿದೆ. ಅದರ ಸುತ್ತಲ ಪರಿಸರ ವ್ಯವಸ್ಥೆ ತನ್ನಷ್ಟಕ್ಕೇ ಯಥಾ ಸ್ಥಿತಿಗೆ ಹಿಂದಿರುಗುತ್ತಿದೆ. ಸುತ್ತಮುತ್ತಲ ಕೊಳವೆ ಬಾವಿಗಳು ತನ್ನಷ್ಟಕ್ಕೇ ಜೀವ ಪಡೆದಿವೆ. ಇದು ನಿಜಕ್ಕೂ ಬರವನ್ನೆದುರಿಸುವ ಮೊದಲ, ಪುಟ್ಟ ಹಾಗೂ ಪ್ರಾಮಾಣಿಕ ಪ್ರಯತ್ನ’ ಎಂದರು.

ವಾರ್ಷಿಕೋತ್ಸವದ ನೆನಪಿಗಾಗಿ ದೊಡ್ಡಕೊಂಡಗೊಳ ಪ್ರೌಢಶಾಲೆ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡಲಾಯಿತು. ಗ್ರಾಮಸ್ಥರಿಗೆ ತೋಟಗಾರಿಕೆ ಇಲಾಖೆಯವರು ನೀಡಿದ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಒಂದು ವರ್ಷದಿಂದ ಶ್ರಮದಾನದ ಮೂಲಕ ಪ್ರತಿಷ್ಠಾನದ ಜತೆಗೆ ಕೈ ಜೋಡಿಸಿರುವ ಎಲ್ಲಾ ಕಾರ್ಯಕರ್ತರಿಗೆ ಆಕರ್ಷಕ ಪ್ರಶಂಸಾ ಪತ್ರ ನೀಡಲಾಯಿತು.

ಪ್ರತಿಷ್ಠಾನದ ಉಪಾಧ್ಯಕ್ಷ ಎಸ್.ಎಸ್.ಪಾಷ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಸಂಚಾಲಕ ಬಿ.ಎಸ್. ದೇಸಾಯಿ, ಖಜಾಂಚಿ ತಿರುಪತಿಹಳ್ಳಿ ಶಿವಶಂಕರಪ್ಪ, ಸಂಘಟನಾ ಕಾರ್ಯದರ್ಶಿ ಹಾ.ನಾ.ಪ್ರಸನ್ನ, ದುದ್ದ ಹೋಬಳಿ ತಿರುಪತಿಹಳ್ಳಿ ರೈತ ರಮೇಶ್ ಇದ್ದರು.

‘ದೊಡ್ಡಕೊಂಡಗುಳ ಗ್ರಾಮಸ್ಥರು ಈ ವರ್ಷ ಇನ್ನೊಂದು ಕೆರೆಯ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಬೇಕು. ಇನ್ನು ಐದು ವರ್ಷಗಳಲ್ಲಿ ಗ್ರಾಮದ ದೊಡ್ಡ ಕೆರೆಯೂ ಸೇರಿದಂತೆ ಎಲ್ಲ ಕೆರೆಗಳ ಪುನಶ್ಚೇತನ ಆಗಬೇಕು. ಇಡೀ ಗ್ರಾಮವು ಗಿಡ,ಮರಗಳಿಂದ ತುಂಬಿ ಹೋಗಬೇಕು. ಗಾಂಧೀಜಿಯವರ ಕನಸಿನ ಗ್ರಾಮ ಸ್ವರಾಜ್ಯ ಈ ಗ್ರಾಮದಲ್ಲಿ ಒಂದು ರೂಪ ಪಡೆಯಬೇಕು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ.ವೆಂಕಟೇಶಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.