ADVERTISEMENT

ಕೋರಂ ಕೊರತೆ: 3ಕೆħ ಚುನಾವಣೆ ನಿಗದಿ

ಜಿ.ಪಂ ಅಧ್ಯಕ್ಷರ ಆಯ್ಕೆಗೆ ಜೆಡಿಎಸ್ ಸದಸ್ಯರು ಮತ್ತೆ ಗೈರು

​ಪ್ರಜಾವಾಣಿ ವಾರ್ತೆ
Published 31 ಮೇ 2016, 5:32 IST
Last Updated 31 ಮೇ 2016, 5:32 IST

ಹಾಸನ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸೋಮವಾರ ನಡೆಯಬೇಕಿದ್ದ ಚುನಾವಣೆಯನ್ನು ಮೂರನೇ ಬಾರಿಯೂ ಮುಂದೂಡಲಾಗಿದೆ.
ಸ್ಪಷ್ಟ ಬಹುಮತ ಹೊಂದಿರುವ ಜೆಡಿಎಸ್‌ನ ಎಲ್ಲ 23 ಸದಸ್ಯರು ಹಾಗೂ ಬಿಜೆಪಿಯ ಒಬ್ಬ ಸದಸ್ಯೆ ಸೋಮವಾರ ನಡೆದ ಸಭೆಗೆ ಗೈರು ಹಾಜರಾಗಿದ್ದರಿಂದ ಕೋರಂ ಇಲ್ಲದೆ ಜೂನ್‌ 3ಕ್ಕೆ ಮುಂದೂಡಲಾಯಿತು.

ಚುನಾವಣೆ ವೇಳೆ ಜೆಡಿಎಸ್ ಸದಸ್ಯರು ಈ ರೀತಿ ಗೈರು ಆಗುತ್ತಿರುವುದು ಇದು ಮೂರನೇ ಬಾರಿ.

ಮೇ 5 ಮತ್ತು 16ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಕರೆದಿದ್ದ ಸಭೆ ಕೂಡ ಕೋರಂ ಇಲ್ಲದೆ ಮುಂದೂಡಲಾಗಿತ್ತು. ಈ ಬಾರಿ ಜೆಡಿಎಸ್‌ ಸದಸ್ಯರು ಸಭೆಗೆ ಗೈರು ಹಾಜರಾದ ಕಾರಣ ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಎ.ಎಂ.ಕುಂಜಪ್ಪ ಅವರು ಸಭೆಯನ್ನು ಜೂನ್‌ 3ಕ್ಕೆ ಮುಂದೂಡುತ್ತಿರುವುದಾಗಿ ಘೋಷಿಸಿ ದರು. ಸಭೆಯ ಕೋರಂಗೆ 21 ಸದಸ್ಯರು ಹಾಜರಾಗಲೇಬೇಕಿತ್ತು.

‘ಮೂರು ಸಭೆಗೆ ಗೈರು ಹಾಜರಾಗಲು ಸದಸ್ಯರಿಗೆ ಅವಕಾಶ ಇದೆ. ನಾಲ್ಕನೇ ಸಭೆಗೂ ಗೈರು ಹಾಜರಾದರೆ ಸದಸ್ಯತ್ವ ರದ್ದತಿಗೆ ಶಿಫಾರಸು ಮಾಡಲಾಗುವುದು’ ಎಂದು  ಕುಂಜಪ್ಪ ತಿಳಿಸಿದರು.

ಚುನಾವಣೆ ಮುಂದೂಡುತ್ತಿರು ವುದಕ್ಕೆ ಕಾಂಗ್ರೆಸ್‌ ಸದಸ್ಯರು ಜೆಡಿಎಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶ್ವೇತಾ ದೇವರಾಜ್‌, ‘ಜಾತ್ಯತೀತ ಜನತಾ ದಳ ಎಂದು ಹೆಸರಿಟ್ಟುಕೊಂಡು ಜನರಿಗೆ ಮರ್ಯಾದೆ ನೀಡುತ್ತಿಲ್ಲ. ಕಾನೂನಿನ ಮೇಲೆ ಗೌರವವಿದ್ದರೆ ಸದಸ್ಯರು ಬರಬೇಕಿತ್ತು. ಆದರೆ ಮೂರನೇ ಸಭೆಗೂ ಗೈರು ಆಗಿದ್ದಾರೆ. ಜೂನ್‌ 3ರಂದು ನಡೆಯುವ ಸಭೆಗೆ ಸದಸ್ಯರು ಹಾಜರಾಗದಿದ್ದರೆ ಸದಸ್ಯತ್ವ ಅನರ್ಹಗೊಳ್ಳಲಿದೆ. ಸದಸ್ಯತ್ವ ಉಳಿಸಿಕೊಳ್ಳಲು ಬಂದೇ ಬರುತ್ತಾರೆ. ಚುನಾವಣೆಯಲ್ಲಿ ಜಾತಿ ರಾಜಕೀಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.