ADVERTISEMENT

ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 6:19 IST
Last Updated 2 ಅಕ್ಟೋಬರ್ 2014, 6:19 IST

ಕುಶಾಲನಗರ: ಜಿಲ್ಲೆಯು ಕೇರಳ ರಾಜ್ಯದ ಗಡಿಯನ್ನು ಹೊಂದಿದೆ. ಅಲ್ಲದೆ, ಪ್ರವಾಸಿತಾಣಗಳು ಇರುವುದರಿಂದ ದೇಶದ ಬೇರೆ ರಾಜ್ಯಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ವೇಳೆ ಬೇರೆ ಯಾವುದೇ ಅವಘಡಗಳಿಗೆ ಅವಕಾಶಗಳು ಒದಗದ ರೀತಿಯಲ್ಲಿ ಕುಟ್ಟ ಸೇರಿದಂತೆ ಗಡಿಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾವಹಿಸುವಂತೆ ಸೂಚಿಸಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್‌ ಮಹಾನಿರ್ದೇಶಕ ಬಿಜಯ್‌ಕುಮಾರ್ ಸಿಂಹ ತಿಳಿಸಿದರು.

ಎರಡು ದಿನಗಳಿಂದ ಕುಶಾಲನಗರ ಪೊಲೀಸ್‌ ಠಾಣೆ ಪರಿಶೀಲನೆ ನಡೆಸಿದ ಬಿಜಯಕುಮಾರ್‌ ಸಿಂಹ ಅವರು, ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮರಳು ಮತ್ತು ಕಲ್ಲುಗಣಿಗಾರಿಕೆ ನಿಷೇಧದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರದ ನೀತಿ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದರು.

ಇನ್ನು ಕುಶಾಲನಗರ ಗ್ರಾಮಾಂತರ ಪೊಲೀಸ್‌ ಠಾಣೆಗೆ ಸಂಬಂಧಿಸಿದಂತೆ ಮಾತನಾಡಿ, ಗ್ರಾಮಾಂತರ ಠಾಣೆ ಈಗಾಗಲೇ ಸರ್ಕಾರದಿಂದ ಮಂಜೂರಾಗಿರುವುದಾಗಿ ತಿಳಿದು ಬಂದಿದೆ. ಇನ್ನೆರಡು  ತಿಂಗಳಲ್ಲಿ ಕಾರ್ಯರೂಪಕ್ಕೆ ಬರಬಹುದು ಎಂದರು.

ಸಂಚಾರಿ ಪೊಲೀಸ್‌ ಠಾಣೆ ಆರಂಭವಾಗಬೇಕಾದರೆ ವಾಹನ ಸಂಚಾರದ ದಟ್ಟಣೆ ಮತ್ತಿತರೆ ವಿಷಯಗಳ ಅಂಕಿ ಸಂಖ್ಯೆಗಳನ್ನು ಆಧರಿಸಿ ಸ್ಥಾಪನೆಯಾಗುತ್ತದೆ. ಜಿಲ್ಲೆಯಲ್ಲಿ ಮಡಿಕೇರಿ ನಂತರ ಕುಶಾಲನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವುದು ತಿಳಿದು ಬಂದಿದೆ.

ಆದರೆ, ಇದು ಸರ್ಕಾರದ ಚಿಂತನೆಗೆ ಬಿಟ್ಟ ವಿಷಯ. ಸರ್ಕಾರವೇ ನಿರ್ಧರಿಸಬೇಕು ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಸೋಮವಾರಪೇಟೆ ಡಿವೈಎಸ್‌ಪಿ ನಾಗಪ್ಪ, ಸಿಪಿಐ ಸಂದೇಶ್‌ಕುಮಾರ್‌, ಪಿಎಸ್‌ಐ ಅನೂಪ್‌ ಮಾದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.