ADVERTISEMENT

ಗೌಡರ ಕೋಟೆ ಭೇದಿಸಲು ರಣತಂತ್ರ

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ: ರಂಗೇರಿದ ಕಣ, ರೇವಣ್ಣ–ಮಂಜೇಗೌಡ ಜಿದ್ದಾಜಿದ್ದಿ

ಕೆ.ಎಸ್.ಸುನಿಲ್
Published 9 ಮೇ 2018, 12:13 IST
Last Updated 9 ಮೇ 2018, 12:13 IST

ಹಾಸನ: 'ಹೊಳೆನರಸೀಪುರದಲ್ಲಿ ದೇವೇಗೌಡರ ಮಕ್ಕಳು ಗೆದ್ದಿದ್ದು ಸಾಕು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯಿಂದ ರಾಜ್ಯದ ಗಮನ ಸೆಳೆದಿರುವ ಹೊಳೆನರಸೀಪುರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ವಹಿಸಿ ಕಣಕ್ಕಿಳಿಸಿರುವ ಸರ್ಕಾರಿ ನಿವೃತ್ತ ಅಧಿಕಾರಿ, ಕಾಂಗ್ರೆಸ್ ಅಭ್ಯರ್ಥಿ ಬಿ.ಪಿ.ಮಂಜೇಗೌಡರಿಗೆ ಕ್ಷೇತ್ರದಲ್ಲಿ ಬಲವಾಗಿ ಬೇರು ಬಿಟ್ಟಿರುವ ಜೆಡಿಎಸ್ ಅಭ್ಯರ್ಥಿ ರೇವಣ್ಣ ದೊಡ್ಡ ಸವಾಲಾಗಿದ್ದಾರೆ. ಬಿಜೆಪಿಯಿಂದ ಹೊಸ ಮುಖ ಎಂ.ಎನ್.ರಾಜು ಕಣಕ್ಕಿಳಿದಿದ್ದಾರೆ.

ಈ ವರೆಗೂ ನಡೆದಿರುವ 13 ಚುನಾವಣೆಗಳಲ್ಲಿ ದೇವೇಗೌಡರು ಆರು ಹಾಗೂ ಅವರ ಪುತ್ರ ಎಚ್.ಡಿ.ರೇವಣ್ಣ ನಾಲ್ಕು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಕ್ಷೇತ್ರದಲ್ಲಿ ಕೈ ಗೊಂಡ ಅಭಿವೃದ್ಧಿ, ಕೊಡಿಸಿದ ಉದ್ಯೋಗ ರೇವಣ್ಣ ಗೆಲುವಿಗೆ ನೆರವು ಎನ್ನಲಾಗುತ್ತಿದೆ. ಜತೆಗೆ ಪತ್ನಿ ಭವಾನಿ ರೇವಣ್ಣ ಇದೇ ಕ್ಷೇತ್ರದ ಹಳೆಕೋಟೆ ಜಿಲ್ಲಾ ಪಂಚಾಯಿತಿ ಸದಸ್ಯೆ ಆಗಿರುವುದು ಪ್ಲಸ್‌ ಪಾಯಿಂಟ್‌. ಪುತ್ರರಾದ ಸೂರಜ್‌ ರೇವಣ್ಣ, ಪ್ರಜ್ವಲ್‌ ರೇವಣ್ಣ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪ್ರಚಾರದಲ್ಲಿ ತೊಡಗಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.

ADVERTISEMENT

ಕ್ಷೇತ್ರದ ಸಮಗ್ರ ಪರಿಚಯ ಇಲ್ಲ. ಹೊರಗಿವನರು ಎಂಬ ಭಾವನೆ, ಸ್ಥಳೀಯ ಮುಖಂಡರ ವಿರೋಧ ಮಂಜೇಗೌಡರಿಗೆ ತೊಡಕಾಗುವ ಸಾಧ್ಯತೆ ಹೆಚ್ಚು. ಸಂಪನ್ಮೂಲ ಕ್ರೋಡೀಕರಣ ಹಾಗೂ ವೆಚ್ಚದಲ್ಲಿ ಗಟ್ಟಿಗರಾಗಿರುವುದೇ ಅವರ ಪಾಲಿಗೆ ಧನಾತ್ಮಕ ಅಂಶ. ಸಿದ್ದರಾಮಯ್ಯ ಕ್ಷೇತ್ರದತ್ತ ಆಸಕ್ತಿ ವಹಿಸಿರುವುದು ನೆರವಾಗಬಹುದು ಎಂಬ ಆಶಾಭಾವ ಇದೆ.
ಕಳೆದ ಬಾರಿ ಸೋತಿರುವ ಅನುಪಮಾ ಹಾಗೂ ಅವರ ಪುತ್ರ ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೇಯಸ್‌ ಪಟೇಲ್‌ ಪ್ರಚಾರ ನಡೆಸುತ್ತಿದ್ದಾರೆ. 'ಕ್ಷೇತ್ರದ ಜನರಿಗೆ ಸ್ವಾತಂತ್ರ್ಯ ಕೊಡಿಸುತ್ತೇನೆ' ಎಂದು ಮಂಜೇಗೌಡರು ಪ್ರಚಾರ ನಡೆಸುತ್ತಿದ್ದಾರೆ.

ಹಾಸನ ತಾಲ್ಲೂಕಿನ ಶಾಂತಿಗ್ರಾಮ, ದುದ್ದ, ಹೊಳೆನರಸೀಪುರ ತಾಲ್ಲೂಕಿನ ಕಸಬಾ, ಹಳೇಕೋಟೆಯೊಂದಿಗೆ ಚನ್ನರಾಯ ಪಟ್ಟಣ ತಾಲ್ಲೂಕಿನ ದಂಡಿನ ಹಳ್ಳಿ ಹೋಬಳಿ ಒಳಗೊಂಡಿರುವ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯವೇ ನಿರ್ಣಾಯಕ ಎನ್ನುವಷ್ಟು ದೊಡ್ಡ ಸಂಖ್ಯೆಯ ಮತದಾರರನ್ನು ಹೊಂದಿದೆ. ದಲಿತ, ಕುರುಬ ಹಾಗೂ ಲಿಂಗಾಯತ ಮತದಾರರ ಪ್ರಾಬಲ್ಯವೂ ಇದೆ.

ಕಣದಲ್ಲಿರುವ ಪ್ರಬಲ ಅಭ್ಯರ್ಥಿ ಗಳಿಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಇದರಲ್ಲೂ ಉಪಜಾತಿಗಳ ನಡುವೆ ರಾಜಕೀಯ ಕಾದಾಟ ನಡೆಯುತ್ತಿದೆ. ಮಂಜೇಗೌಡ ದಾಸಗೌಡ ಹಾಗೂ ರೇವಣ್ಣ ಮುಳ್ಳುಗೌಡ ಸಮುದಾಯದವರು.
ದಾಸಗೌಡ ಸಮುದಾಯ ಮುಂಚೆ ಹಾಸನ ತಾಲ್ಲೂಕಿಗಷ್ಟೇ ಸೀಮಿತ ವಾಗಿತ್ತು. ಆದರೆ, ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿದ ನಂತರ ಅವರಿಗೆ ಜಿಲ್ಲೆಯ ಬೇರೆ ಬೇರೆ ಕಡೆ ಪುನರ್ವಸತಿ ಕಲ್ಪಿಸಲಾಗಿದೆ. ಹೀಗಾಗಿ ಹೊಳೆನರಸೀಪುರ ತಾಲ್ಲೂಕಿ ನಲ್ಲೂ ಅಲ್ಪ ಪ್ರಮಾಣದಲ್ಲಿ ನೆಲೆಸಿದ್ದಾರೆ.

ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿದೆ. ಮೊದಲಿನಿಂದಲೂ ಕ್ಷೇತ್ರದಲ್ಲಿ ಅಸ್ತಿತ್ವ ತೋರಿಸಲು ವಿಫಲವಾಗಿರುವ ಬಿಜೆಪಿ ಈ ಬಾರಿಯೂ ಸೋಲು–ಗೆಲುವು ನಿರ್ಧರಿಸುವ ಮಟ್ಟಿನ ಸ್ಪರ್ಧೆ ನೀಡುವುದು ಕಷ್ಟ.

ಬಿಜೆಪಿ ಅಭ್ಯರ್ಥಿಯೂ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದವರಾಗಿದ್ದು, ಅಲ್ಪ ಪ್ರಮಾಣದಲ್ಲಿ ಒಕ್ಕಲಿಗ ಹಾಗೂ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಗಳಿಸಬಹುದು.

ಇಲ್ಲಿ ಪಕ್ಷಗಳ ಬದಲಿಗೆ ಅಭ್ಯರ್ಥಿಗಳ ಪ್ರತಿಷ್ಠೆ ಪಣಕ್ಕಿಟ್ಟಂತಿದ್ದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನೇರ ಹಣಾಹಣಿ ಕಂಡು ಬಂದಿದೆ. ಇಬ್ಬರು ಪರಸ್ಪರ ಆರೋಪ, ವಾಗ್ದಾಳಿಗಳಲ್ಲಿ ನಿರತರಾಗಿದ್ದಾರೆ.

‘ಹೊಳೆನರಸೀಪುರ ಕ್ಷೇತ್ರದಲ್ಲಿ ಜನರಿಗೆ ಸ್ವಾತಂತ್ರ್ಯವಿಲ್ಲ’ ಎಂದು ಮಂಜೇಗೌಡ ರೇವಣ್ಣ ವಿರುದ್ಧ ಹರಿಹಾಯ್ದಿದ್ದರೆ, ‘ಮಂಜೇಗೌಡ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿವೆ’ ಎಂದು ರೇವಣ್ಣ ವಾಗ್ದಾಳಿ ನಡೆಸುತ್ತಿದ್ದಾರೆ.

ರಸ್ತೆ, ಕುಡಿಯುವ ನೀರು, ಕೈಗಾರಿಕಾ ಸ್ಥಾಪನೆ, ಅಕ್ರಮ ಮರಳು ಗಣಿಗಾರಿಕೆ, ಕೆರೆ, ಕಟ್ಟೆ ಒತ್ತುವರಿ, ಏತ ನೀರಾವರಿ ಯೋಜನೆ, ಉದ್ಯೋಗ ಸಮಸ್ಯೆ.. ಇವು ಚುನಾವಣೆಯಲ್ಲಿ ಪರಿಣಾಮ ಬೀರಲಿವೆ.

2008ರ ಕ್ಷೇತ್ರ ಮರುವಿಂಗಡಣೆ ಯಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ದುದ್ದ, ಶಾಂತಿ ಗ್ರಾಮ ಹೋಬಳಿಗಳು ಹೊಳೆನರಸೀಪುರ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದರೆ, ಕುರುಬ ಹಾಗೂ ವೀರಶೈವ ಸಮಾಜ ದವರು ಹೆಚ್ಚಿರುವ ಹಳ್ಳಿ ಮೈಸೂರು ಹೋಬಳಿ ಅರಕಲಗೂಡಿಗೆ ಸ್ಥಳಾಂತರ ಗೊಂಡಿರುವುದು ರೇವಣ್ಣ ಅವರಿಗೆ ಅನುಕೂಲವಾಗಿದೆ ಎನ್ನಲಾಗಿದೆ.

ಮಂಜೇಗೌಡರ ಬೆನ್ನಿಗೆ ಮುಖ್ಯಮಂತ್ರಿ ನಿಂತಿರುವುದರಿಂದ ಜಿದ್ದಾಜಿದ್ದಿನ ಹೋರಾಟದ ಕಣವಾಗಿದೆ.

ಕಣದಲ್ಲಿ ಸ್ಪರ್ಧಿಗಳು

ಎಚ್.ಡಿ.ರೇವಣ್ಣ (ಜೆಡಿಎಸ್)

ಬಿ.ಪಿ.ಮಂಜೇಗೌಡ (ಕಾಂಗ್ರೆಸ್)

ಎಂ.ಎನ್.ರಾಜು (ಬಿಜೆಪಿ)

ಮಹಮ್ಮದ್ ಹನೀಫ್ (ಎಐಎಂಇಪಿ)

ಪಿ.ಕೆ.ನಾಗರಾಜ (ರಿಪಬ್ಲಿಕ್ ಸೇನೆ)

ಎಚ್.ಡಿ.ರೇವಣ್ಣ, ಎ.ಮಹೇಶ್, ನಾಗೇಶ್ (ಸ್ವತಂತ್ರ ಅಭ್ಯರ್ಥಿಗಳು)

ಹಿಂದಿನ ಎರಡು ಚುನಾವಣೆಗಳ ಫಲಿತಾಂಶ

ವರ್ಷ ಗೆದ್ದವರು  ಪಕ್ಷ ಸಮೀಪ ಸ್ಪರ್ಧಿ ಪಕ್ಷ

2008 ಎಚ್‌.ಡಿ.ರೇವಣ್ಣ ಜೆಡಿಎಸ್‌ ಎಸ್‌.ಜಿ.ಅನುಪಮಾ ಕಾಂಗ್ರೆಸ್‌

2013 ಎಚ್‌.ಡಿ.ರೇವಣ್ಣ ಜೆಡಿಎಸ್‌ ಎಸ್‌.ಜಿ.ಅನುಪಮಾ ಕಾಂಗ್ರೆಸ್‌

ದೇವೇಗೌಡರಿಗೆ ಆರು ಬಾರಿ, ರೇವಣ್ಣಗೆ ನಾಲ್ಕು ಬಾರಿ ಗೆಲುವು

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು 1962 ರಿಂದ 1985ರ ವರೆಗೆ ಸತತ ಆರು ಬಾರಿ ಹೊಳೆನರಸೀಪುರ ಕ್ಷೇತ್ರದಿಂದ ಗೆದ್ದು ಬಂದಿದ್ದರು.

1989ರ ಚುನಾವಣೆಯಲ್ಲಿ ರಾಮನಗರದಿಂದ ದೇವೇಗೌಡರು ಸ್ಪರ್ಧೆ ಮಾಡಿದ ಹಿನ್ನಲೆಯಲ್ಲಿ ಹೊಳೆನರಸೀಪುರದಿಂದ ರೇವಣ್ಣ ಕಣಕ್ಕಿಳಿದು ಜಯಶಾಲಿಯಾದರು. ಅಂದಿನಿಂದ ಈ ಕ್ಷೇತ್ರ ರೇವಣ್ಣ ಅವರ ಸ್ವಕ್ಷೇತ್ರವಾಗಿದ್ದು, ನಾಲ್ಕು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.