ADVERTISEMENT

ಗ್ರಾಮೀಣ ಬಡ ಮಕ್ಕಳ ಕಲಿಕೆಗೆ ತೊಡಕು

ಶಿಥಿಲಾವಸ್ಥೆ ತಲುಪಿದ ಅಂಗನವಾಡಿ, ಶಾಲೆ ಕಟ್ಟಡ; ಇಲಿ, ಹೆಗ್ಗಣಗಳ ವಾಸಸ್ಥಾನವಾದ ಗೋದಾಮು

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 6:55 IST
Last Updated 12 ಜನವರಿ 2017, 6:55 IST
ಹಳೇಬೀಡು ಸಮೀಪದ ಕಳ್ಳಿಬೊರೆಕಾವಲು ಹೊಸೂರು ಗ್ರಾಮದಲ್ಲಿ ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಶಾಲೆ ಕಟ್ಟಡ
ಹಳೇಬೀಡು ಸಮೀಪದ ಕಳ್ಳಿಬೊರೆಕಾವಲು ಹೊಸೂರು ಗ್ರಾಮದಲ್ಲಿ ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಶಾಲೆ ಕಟ್ಟಡ   

ಹಳೇಬೀಡು: ದಲಿತ ಹಾಗೂ ಮುಸ್ಲಿಮರು ವಾಸವಾಗಿರುವ ಕಳ್ಳಿಬೋರೆ ಕಾವಲು ಹೊಸೂರು ಗ್ರಾಮದ ಪರಿಶಿಷ್ಟ ಕಾಲೊನಿಯಲ್ಲಿರುವ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಬಡ ಮಕ್ಕಳ ಕಲಿಕೆಗೆ ತೊಡಕಾಗಿದೆ.

ಕಟ್ಟಡದ ಛಾವಣಿ ಕುಸಿಯುವ ಸ್ಥಿತಿಗೆ ತಲುಪಿರುವುದರಿಂದ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ತರಗತಿ ನಡೆಸಲಾಗುತ್ತಿದೆ. ಊರಿನ ಶುಭಕಾರ್ಯ, ಸಭೆ, ಸಮಾರಂಭಗಳಿಗೆ ಸಮುದಾಯ ಭವನದ ಅಗತ್ಯ ಸಹ ಹೆಚ್ಚಾಗಿದೆ. ಹೀಗಾಗಿ, ಶಾಲೆಗೆ ವ್ಯವಸ್ಥಿತ ಕಟ್ಟಡ ಅತ್ಯಗತ್ಯ ಎಂದು ಗ್ರಾಮಸ್ಥ ಮಲ್ಲೇಶಪ್ಪ ಆಗ್ರಹಿಸಿದ್ದಾರೆ.

‘ಅಂಗನವಾಡಿ ಕಟ್ಟಡದ ಗೋಡೆ ಗಳಲ್ಲಿ ಬಿರುಕು ಕಾಣಿಸಿಕೊಂಡು ಕ್ರಿಮಿ– ಕೀಟ ವಾಸಮಾಡುವ ಸ್ಥಳವಾಗಿದೆ. ಆಹಾರ ಪದಾರ್ಥ ಸಂಗ್ರಹಿಸುವ ಕೊಠಡಿಯ ನೆಲದಲ್ಲಿ ಇಲಿ– ಹೆಗ್ಗಣಗಳು ಗುಂಡಿ ಮಾಡಿವೆ. ಕಾರ್ಯಕರ್ತೆ ಹಾಗೂ ಸಿಬ್ಬಂದಿ ಆಹಾರ ಪದಾರ್ಥ ಸಂರಕ್ಷಿಸಲು ಪರದಾಡುವ ಸ್ಥಿತಿ’ ಎಂದು ಗ್ರಾಮಸ್ಥ ಧರ್ಮಯ್ಯ ಹೇಳುತ್ತಾರೆ.

ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆ ಯಲ್ಲಿರುವುದರಿಂದ ಮಕ್ಕಳಿಗೆ ಸುರಕ್ಷತೆ ಇಲ್ಲವಾಗಿದೆ. ಕಟ್ಟಡ ದುರಸ್ತಿ ಮಾಡು ವುದಕ್ಕೂ ಯೋಗ್ಯವಾಗಿಲ್ಲ. ಹೊಸ ಕಟ್ಟಡ ನಿರ್ಮಿಸಿದರೆ ಮಾತ್ರ ಕಟ್ಟಡದಲ್ಲಿ ಮಕ್ಕಳ ಆಟೋಟ ನಡೆಸಲು ಸಾಧ್ಯವಾ ಗುತ್ತದೆ ಎಂಬ ಮಾತು ಗ್ರಾಮಸ್ಥರಿಂದ ಕೇಳಿಬಂತು.

ಸರ್ಕಾರಿ ಶಾಲೆಯಲ್ಲಿ 1ರಿಂದ 5 ನೇತರಗತಿವರೆಗೆ ಕಲಿಯಲು ಅವಕಾಶ ವಿದೆ. 5 ತರಗತಿಗಳಲ್ಲಿ 20ಕ್ಕಿಂತ ಕಡಿಮೆ ಮಕ್ಕಳು ಇರುವುದರಿಂದ ಶಾಲೆಗೆ ಹೊಸ ಕಟ್ಟಡದ ಭಾಗ್ಯ ದೊರಕಿಲ್ಲ. ಗ್ರಾಮದ ಬಡ ಜನತೆ ತಮ್ಮ ಮಕ್ಕಳನ್ನು ಪಟ್ಟಣದ ಖಾಸಗಿ ಶಾಲೆಯಲ್ಲಿ ಓದಿಸಲು ಶಕ್ತರಾಗಿಲ್ಲ. ಗ್ರಾಮದಲ್ಲಿ ಸರ್ಕಾರಿ ಶಾಲೆಯ ಅಗತ್ಯವಿದೆ ಎನ್ನುತ್ತಾರೆ ಗ್ರಾಮಸ್ಥ ಸೋಮಶೇಖರ್‌.

ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ  ಕಾರ್ಯಪ್ರವೃತ್ತರಾಗಬೇಕು. ಶಾಲೆ ಹಾಗೂ ಅಂಗನವಾಡಿ  ಹೊಸ ಕಟ್ಟಡಗಳನ್ನು ನಿರ್ಮಿಸಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
- ಎಚ್‌.ಎಸ್‌.ಅನಿಲ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.