ADVERTISEMENT

ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಬಂದ್‌ ಇಂದು

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 6:14 IST
Last Updated 16 ಜೂನ್ 2017, 6:14 IST

ಹಾಸನ: ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (2007)ಯ ತಿದ್ದುಪಡಿ ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ರಾಜ್ಯದಾದ್ಯಂತ ಬಂದ್‌ಗೆ ಕರೆ ನೀಡಿರುವ ಕಾರಣ, ಜೂನ್‌್ 16ರಂದು ಎಲ್ಲಾ ಖಾಸಗಿ ವೈದ್ಯಕೀಯ ಸೇವೆ ಬಂದ್‌ ಮಾಡಲಾಗುವುದು’ ಎಂದು ವೈದ್ಯಕೀಯ ಸಂಘದ ಸದಸ್ಯ ಆರ್‌.ಎನ್‌.ರಮೇಶ್‌ ತಿಳಿಸಿದರು.

‘ಮಸೂದೆಯ ಕರುಡು ತಿದ್ದುಪಡಿಗೂ ಮೊದಲು ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಂ ಜಿತ್‌ ಸೇನ್‌ ನೇತೃತ್ವದ ಸಮಿತಿ ನೀಡಿದ ವರದಿಯನ್ನು ನಿರ್ಲಕ್ಷಿಸಲಾಗಿದೆ. ಇದರಲ್ಲಿ ಕೇವಲ ಖಾಸಗಿ ಆಸ್ಪತ್ರೆಗಳು ಮಾತ್ರ ಬರುವುದರಿಂದ ಸಣ್ಣ  ಹಾಗೂ ಮಧ್ಯಮ ವರ್ಗದ ಆಸ್ಪತ್ರೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಇದರ ಹಿಂದೆ ಬಂಡವಾಳಶಾಹಿಗಳಿಗೆ ಬೆಂಬಲ ನೀಡುವ ಹುನ್ನಾರವಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಆರೋಗ್ಯ ಸಚಿವ ಆರ್‌.ರಮೇಶ್‌ಕುಮಾರ್‌ ಅವರು ವಿಕ್ರಂ ಜಿತ್‌ ಸೇನ್‌ ವರದಿಯ ಸಲಹೆಗಳನ್ನು ಪಾಲಿಸುವುದಾಗಿ ಪದೇಪದೇ ಹೇಳಿಕೆ ನೀಡಿದ್ದರು. ಈ ಸಂಬಂಧ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರೂ ಸಮಿತಿಯ ವರದಿಯನ್ನೂ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಹಾಗಾಗಿ, ಜೂನ್‌ 16ರಂದು ತುರ್ತು ಸೇವೆ ಹೊರತು ಪಡಿಸಿ, ಎಲ್ಲಾ ಖಾಸಗಿ ಆಸ್ಪತ್ರೆ ಬಂದ್‌ ಮಾಡಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಮಾಡಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ADVERTISEMENT

ಸೇನ್‌ ಅವರು ಸಲ್ಲಿಸಿರುವ ವರದಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಕಾಯ್ದೆ ವ್ಯಾಪ್ತಿಗೆ ಸೇರಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ವಲಯಗಳ ಆರೋಗ್ಯ ಸೇವೆಗಳು ಪರಸ್ಪರ ಪೂರಕವಾಗಿದ್ದು, ಸರ್ಕಾರಿ ವ್ಯವಸ್ಥೆ ದುರ್ಬಲ ಅಥವಾ ಮಾನದಂಡಗಳಿಗೆ ಹೊರತಾದರೆ ಖಾಸಗಿ ಆಸ್ಪತ್ರೆಗಳ ಮೇಲಿನ ಒತ್ತಡ ಹೆಚ್ಚುತ್ತದೆ.

ಸರ್ಕಾರಿ ಆಸ್ಪತ್ರೆಗಳನ್ನು ಕಾಯ್ದೆ ವ್ಯಾಪ್ತಿಗೆ ತಂದರೆ ಮೂಲ ಸೌಲಭ್ಯ ನೀಡುವಲ್ಲಿ ಸರ್ಕಾರಕ್ಕೆ ಕಾಳಜಿ ಇದೆ ಎಂದು ಅರ್ಥವಾಗುತ್ತದೆ. ಈ ಅಂಶವನ್ನು ಸೇನ್‌ ವರದಿಯಲ್ಲಿ ತಿಳಿಸಿದ್ದರೂ ಅನುಷ್ಠಾನಕ್ಕೆ ತರಲು ಸರ್ಕಾರ ಮಾತ್ರ ಮಿನ–ಮೀಷ ಎಣಿಸುತ್ತಿದೆ ಎಂದು ದೂರಿದರು.

ಕೇಂದ್ರದ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸೇರಿಸಲಾಗಿದೆ. ಹಾಗೆಯೇ ಆರೋಗ್ಯ ಸೇವೆಗಳಲ್ಲಿ ಹೆಸರು ಪಡೆದಿರುವ ಕೇರಳದಲ್ಲೂ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಲ್ಲಿ ಸರ್ಕಾರಿ ಆಸತ್ರೆಗಳನ್ನು ದಾಖಲಿಸಲಾಗಿದೆ ಎಂದು ವಿವರಿಸಿದರು. ಡಾ.ಅಶೋಕ್‌ಗೌಡ, ಡಾ.ಭಾರತಿ ರಾಜಶೇಖರ್‌, ಲೋಕೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.