ADVERTISEMENT

ಜಿಲ್ಲೆಯ ನೀರಾವರಿ ಯೋಜನೆ ನನೆಗುದಿಗೆ

ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ: ಸಂಸದ ಎಚ್‌.ಡಿ. ದೇವೇಗೌಡ ಬೇಸರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 7:30 IST
Last Updated 30 ಏಪ್ರಿಲ್ 2016, 7:30 IST
ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಎಚ್‌.ಡಿ. ದೇವೇಗೌಡ ಮಾತನಾಡಿದರು
ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಎಚ್‌.ಡಿ. ದೇವೇಗೌಡ ಮಾತನಾಡಿದರು   

ಹಾಸನ: ‘ಸರ್ಕಾರದ ಕೆಲವು ಇಲಾಖೆಗಳೊಳಗೆ ಸಮನ್ವಯದ ಕೊರತೆಯಿಂದಾಗಿ ಜಿಲ್ಲೆಯ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಥ ಅಧಿಕಾರಿಗಳು ಹಾಗೂ ಪ್ರಗತಿಪರ ರೈತರ ಸಭೆ ಕರೆದು ಯೋಜನೆಗಳ ಅನುಷ್ಠಾನದ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕು’ ಎಂದು ಸಂಸದ ಎಚ್‌.ಡಿ. ದೇವೇಗೌಡ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆ ಬಗ್ಗೆ ಅಧಿಕಾರಿಗಳು ಮೌನವಾಗಿದ್ದಾರೆ. ಈ ಬಾರಿ ಎರಡು ಲಕ್ಷ ಎಕರೆ ಬೆಳೆ ನಷ್ಟವಾಗಿದೆ.ಜಲಾಶಯಗಳಿಂದ ಯಾವ್ಯಾವುದೋ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ. ಇದರ ಉಪಯೋಗವೇನಾಯ್ತು ? ಬೇಲೂರು ತಾಲ್ಲೂಕಿನ ರೈತರ ಸ್ಥಿತಿ ನೋಡಿದರೆ ತಲೆ ತಗ್ಗಿಸುವಂತಾಗುತ್ತದೆ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದರು.

‘ನೀರಾವರಿ ಇಲಾಖೆ, ಕಂದಾಯ ಇಲಾಖೆ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ಏರ್ಪಡಿಸಿ, ಇವುಗಳ ನಡುವೆ ಒಂದು ಸಮನ್ವಯ ಏರ್ಪಡುವಂತೆ ಮಾಡಬೇಕು ಎಂದು ಸೂಚಿಸಿದರು. ಇದರ ಜೊತೆಗೆ ಜಿಲ್ಲೆಯ ಸುಮಾರು 500 ಪ್ರಗತಿಪರ ರೈತರ ಸಭೆ ಆಯೋಜಿಸಬೇಕು. ಅಲ್ಲಿಗೆ ಕೃಷಿ ವಿ.ವಿ. ಕುಲಪತಿ ಡಾ. ನಾರಾಯಣ ರೆಡ್ಡಿ ಅವರನ್ನು ಆಹ್ವಾನಿಸಿ ಜಿಲ್ಲೆಯ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಏನೇನು ಮಾಡಬಹುದು ಎಂಬ ಬಗ್ಗೆ ಅಲ್ಲಿ ಚರ್ಚಿಸಬೇಕು ಎಂದು ಸೂಚಿಸಿದರು.

ಲಂಚ ಪಡೆದು ಅಧಿಕಾರಿ ಪರಾರಿ: ಹೊಳೆನರಸೀಪುರ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಟಿ.ಸಿ. ಬದಲಿಸಲು ಗ್ರಾಮಸ್ಥರಿಂದ ಅಧಿಕಾರಿಯೊಬ್ಬರು ಲಂಚ ಪಡೆದಿದ್ದಾರೆ. ಅಷ್ಟೇ ಅಲ್ಲ, ಹಣ ತೆಗೆದುಕೊಂಡು ಟಿ.ಸಿ. ಬದಲಿಸದೆ ಪರಾರಿಯಾಗಿದ್ದಾರೆ ಇವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಎಚ್‌.ಡಿ. ರೇವಣ್ಣ ಪ್ರಶ್ನಿಸಿದರು. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಸೆಸ್ಕ್‌ ಅಧಿಕಾರಿ ಭರವಸೆ ನೀಡಿದರು.

ಸದ್ಯದಲ್ಲೇ ಅನಿರೀಕ್ಷಿತ ಭೇಟಿ:  ಸಾಮಾಜಿಕ ಅರಣ್ಯ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳು ಬಂದಿವೆ. ಈ ಕಾರಣಕ್ಕೆ ನಾನು ಸದ್ಯದಲ್ಲೇ ಸ್ಥಳೀಯ ಶಾಸಕರ ಜೊತೆ ಕೆಲವು ಸ್ಥಳಗಳಲ್ಲಿ ಹಠಾತ್‌ ಪರಿಶೀಲನೆ ನಡೆಸುತ್ತೇನೆ ಎಂದು ದೇವೇಗೌಡ ತಿಳಿಸಿದರು.

ಸರ್ಕಾರದಂತೆ ಅಧಿಕಾರಿಗಳು: ಶಾಸಕ ಎಚ್‌.ಡಿ. ರೇವಣ್ಣ ಸಭೆಯಲ್ಲಿ ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಅದನ್ನು ತಡೆದ ದೇವೇಗೌಡರು, ‘ಇಲ್ಲಿ ಗುದ್ದಾಡಿ ಏನು ಪ್ರಯೋಜನ. ಸರ್ಕಾರ ಹೇಗಿರುತ್ತದೋ ಆಡಳಿತ ಹಾಗೂ ಅಧಿಕಾರಿಗಳೂ ಹಾಗೆಯೇ ಇರುತ್ತಾರೆ. ಆಡಳಿತ ಯಾವತ್ತೂ ಸರ್ಕಾರದ ಪ್ರತಿಬಿಂಬ. ಅಧಿಕಾರಿಗಳು ಯಾವ ಕಾರಣಕ್ಕೂ ಸಚಿವರನ್ನು ಬಿಟ್ಟುಕೊಡಲು ಸಾಧ್ಯವಿಲ್ಲ.

ಪ್ರತಿ  ಜಿಲ್ಲೆಗೂ ಒಬ್ಬ ಉಸ್ತುವಾರಿ ಸಚಿವರು ಇರುತ್ತಾರೆ. ಹೀಗಿರುವಾಗ ಬರ ಪರಿಸ್ಥಿತಿ ಅಧ್ಯಯನಕ್ಕೆ ಸ್ವತಃ ಮುಖ್ಯಮಂತ್ರಿಯೇ ಹೋಗುವ ಅಗತ್ಯ ಇದೆಯೇ ? ಕುಳಿತಲ್ಲಿಂದಲೇ ಎಲ್ಲ ಕೆಲಸ ಮಾಡುವ ಶಕ್ತಿ ಮುಖ್ಯಮಂತ್ರಿಗೆ ಇರಬೇಕು. ಅಂಥ ಸ್ಥಿತಿ ಈಗ ರಾಜ್ಯದಲ್ಲಿ ಇಲ್ಲ ಎಂದರು.

ಭೂಸ್ವಾಧೀನ ಬಹುತೇಕ ಪೂರ್ಣ:  ಹಾಸನದಿಂದ ಬಿ.ಸಿ. ರೋಡ್‌ ವರೆಗೆ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ವಿಸ್ತಿರಿಸುವುದಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಕೆಲಸ ಶೇ 99ರಷ್ಟು ಮುಗಿದಿದೆ. ಬನವಾಸೆಯಲ್ಲಿ 700 ಮೀ. ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಸ್ಥಳೀಯರಿಂದ ವಿರೋಧ ಬಂದಿರುವುದರಿಂದ ಪರ್ಯಾಯ ವಿನ್ಯಾಸ ಸಿದ್ಧಪಡಿಸಿದ್ದು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿಂದ ಸೂಚನೆ ಬರುತ್ತಿದ್ದಂತೆ ಇಲ್ಲಿಯೂ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಎಂಜಿನಿಯರ್‌ ಮಂಜುನಾಥ್‌ ತಿಳಿಸಿದರು.

ಬೇಲೂರು ಬಿಳಿಕೆರೆ ರಸ್ತೆ ಮೇಲ್ದರ್ಜೆಗೆ ಏರಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರ ಜೊತೆ ಮಾತನಾಡಿದ್ದೇನೆ. ಈ ವಾರದೊಳಗೆ ನೋಟಿಫಿಕೇಶನ್‌ ಆಗುವ ಸಾಧ್ಯತೆ ಇದೆ ಎಂದು ದೇವೇಗೌಡ ತಿಳಿಸಿದರು.

ಇದರ ಜೊತೆಗೆ ಎರಡು ಹೆದ್ದಾರಿಗಳನ್ನು ಬೆಸೆಯುವ ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು, ಮಡಿಕೇರಿ, ಪುತ್ತೂರು ರಸ್ತೆಯನ್ನೂ ಮೇಲ್ದರ್ಜೆಗೆ ಏರಿಸುವಂತೆ ಗಡ್ಕರಿ ಅವರಿಗೆ ಮನವಿ ಮಾಡಿದ್ದೇನೆ ಎಂದೂ ಅವರು ತಿಳಿಸಿದರು.

ಶಾಲಾ ಕಟ್ಟಡಗಳ ನಿರ್ಮಾಣದ ವಿಚಾರ ಬಂದಾಗ ರೇವಣ್ಣ, ‘ಕಟ್ಟಡ ನಿರ್ಮಾಣಕ್ಕೆ ಜಾಗ ಇಲ್ಲ ಎನ್ನುತ್ತೀರಿ ನಿಮಗೆ ಕೊಟ್ಟ ಜಾಗದಲ್ಲಿ ಕೋರ್ಟ್‌ ನಡೆಸಲು ಅನುಮತಿ ಯಾಕೆ ಕೊಟ್ಟಿದ್ದೀರಿ? ಹಾಸನಕ್ಕೆ ಇನ್ನೊಂದು ಮಹಿಳಾ ಕಾಲೇಜು ಮಂಜೂರಾಗಿದೆ. ಈ ವರ್ಷದಿಂದಲೇ ಕಾಲೇಜು ಆರಂಭ ಮಾಡಬೇಕಿದ್ದು ಅದರ ಕಟ್ಟಡ ಕಾಮಗಾರಿ ಆರಂಭಿಸಬೇಕು. ಆದರೆ ಇದ್ದ ಜಾಗವನ್ನು ಕೋರ್ಟ್‌ಗೆ ಕೊಟ್ಟಿದ್ದೀರಿ. ನ್ಯಾಯಾಲಯಕ್ಕೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಕೊಡಲಾಗಿದೆ.

ಬೇಕಿದ್ದರೆ ಅವರು ಅಲ್ಲಿಗೆ ಸ್ಥಳಾಂತರ ಹೊಂದಲಿ. ಕೂಡಲೇ ಅವರನ್ನು ಖಾಲಿ ಮಾಡಿಸದಿದ್ದರೆ ನಿಮ್ಮ ಮೇಲೆ ಮೊಕದ್ದಮೆ ದಾಖಲು ಮಾಡಬೇಕಾಗುತ್ತದೆ ಎಂದು ರೇವಣ್ಣ ಡಿಡಿಪಿಐ ಹಾಗೂ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ಗೆ ಎಚ್ಚರಿಕೆ ನೀಡಿದರು.

ಶಾಸಕರಾದ ಎಚ್‌.ಎಸ್‌. ಪ್ರಕಾಶ್‌, ಸಿ.ಎನ್‌. ಬಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್‌ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹಾಗೂ  ಇತರ ಅಧಿಕಾರಿಗಳು ಸಭೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.