ADVERTISEMENT

ಜೇನುಕಲ್‌ ಸಿದ್ದೇಶ್ವರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 7:04 IST
Last Updated 13 ಏಪ್ರಿಲ್ 2017, 7:04 IST
ಜೇನುಕಲ್‌ ಸಿದ್ದೇಶ್ವರಸ್ವಾಮಿ ರಥೋತ್ಸವ
ಜೇನುಕಲ್‌ ಸಿದ್ದೇಶ್ವರಸ್ವಾಮಿ ರಥೋತ್ಸವ   

ಅರಸೀಕೆರೆ: ತಾಲ್ಲೂಕಿನ ಯಾದಾಪುರದ ಜೇನುಕಲ್‌ ಸಿದ್ದೇಶ್ವರ ಸ್ವಾಮಿ ಮಹಾರಥೋತ್ಸವ ಬುಧವಾರ ಭಕ್ತರ ಸಡಗರದ ನಡುವೆ ಅದ್ಧೂರಿಯಾಗಿ ಜರುಗಿತು.
ಸ್ವಾಮಿಯ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನಡೆದವು.

ಮುಂಜಾನೆ ನಡೆ–ಮುಡಿ ಸೇವೆ ನಡೆಯುತ್ತಿದ್ದಂತೆ ಯಳವಾರೆ ಚಲುವರಾಯಸ್ವಾಮಿ ಸಮ್ಮುಖದಲ್ಲಿ ಪುಷ್ಪಾಲಂಕೃತ ಮಂಟಪದಲ್ಲಿ ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿರುವ ತೇರು ಮಂಟಪಕ್ಕೆ ಬಸವನ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು.ಗುಗ್ಗಳ ಸೇವೆ ಹಾಗೂ ಕೊಂಡೋತ್ಸವಗಳು ಸಿದ್ದೇಶ್ವರ ಸ್ವಾಮಿ ಸಮ್ಮುಖದಲ್ಲಿ ನಡೆದವು.

ಬಣ್ಣದ ಬಟ್ಟೆಗಳು, ಬಾವುಟಗಳು, ಎಳನೀರು ಗೊನೆ, ಭಾರಿ ಗಾತ್ರದ ಹೂಹಾರಗಳಿಂದ ರಥವನ್ನು ಸಿಂಗರಿಸಲಾಗಿತ್ತು. ಯಳವಾರೆ ಚಲುವರಾಯ ಸ್ವಾಮಿ ರಥಕ್ಕೆ ಮೂರು ಸುತ್ತು ಪ್ರದಕ್ಷಿಣಿ ಹಾಕಿದ ಮೇಲೆ ಸಿದ್ದೇ ಶ್ವರ ಸ್ವಾಮಿ ಮೂರ್ತಿಯನ್ನು ರಥದ ಮೇಲೆ ಕೂರಿಸಲಾಯಿತು. ಶಾಸಕ ಕೆ.ಎಂ. ಶಿವಲಿಂಗೇಗೌಡ ದೇವಾಲಯ ಟ್ರಸ್ಟ್‌ ಅಧ್ಯಕ್ಷ ಜಿ.ವಿ.ಬಸವರಾಜ್‌, ಸದಸ್ಯ ಗೀಜೀಹಳ್ಳಿ ಗುರುಸಿದ್ದಪ್ಪ ರಥಕ್ಕೆ ಪೂಜೆ ಸಲ್ಲಿಸಿ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಮಹಾಮಂಗಳಾರತಿ ಸಲ್ಲಿಸುತ್ತಿದ್ದಂತೆ ನೆರೆದಿದ್ದ  ಭಕ್ತರು ಜಯಘೋಷ ಹಾಕುತ್ತ ಥವನ್ನು ಪೂರ್ವಾಭಿಮುಖವಾಗಿ ದೇಗುಲದವರೆಗೆ ಎಳೆದು ತಂದು ನಿಲ್ಲಿಸಿದರು.

ADVERTISEMENT

ಜಿ.ಪಂ. ಸದಸ್ಯೆ ಲೀಲಾ ಧರ್ಮಶೇಖರ್‌, ತಾ.ಪಂ. ಅಧ್ಯಕ್ಷೆ ಮಂಜುಳಾಬಾಯಿ, ಮಾಜಿ ಶಾಸಕ ಜಿ.ಎಸ್‌.ಪರಮೇಶ್ವರಪ್ಪ, ಮುಖಂಡ ಯಾದಾಪುರ ವೀರಭದ್ರಪ್ಪ, ಇದ್ದರು. 
ರಾಜ್ಯದ ನಾನಾ ಭಾಗಗಳಿಂದ ಬಂದ ಭಕ್ತರು ಬೆಟ್ಟ ಏರಿ ಸ್ವಾಮಿಯ ಪಾದುಕೆಯ ದರ್ಶನ ಪಡೆದರು.

ಕೆಲವು ಭಕ್ತರು ತೇರು ಬೀದಿ ಬದಿಯಲ್ಲಿ ಟೆಂಟ್‌ ಹಾಕಿಕೊಂಡು ಭಕ್ತರಿಗೆ  ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿದರು. ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಮಂಗಳವಾರ ಸಂಜೆ 7 ರಿಂದ ಆರಂಭವಾದ ಬಸವೇಶ್ವರ ಉತ್ಸವ, ಉಪ್ಪರಿಗೆ ಗದ್ದುಗೆ ಮಂಟಪದಲ್ಲಿ ಸಾಮ್ರಾಜ್ಯೋತ್ಸವ, ಹುಲಿವಾಹನ ಹಾಗೂ ಸೂರ್ಯ ಮಂಡಲೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ಬಿಲ್ವವೃಕ್ಷೋತ್ಸವ, ಶ್ರೀಯವರ ಮೂಲ ಸನ್ನಿಧಿಯಲ್ಲಿ ಹರಕೆಯವರಿಗೆ ಬಾಯಿಬೀಗ ಧಾರಣೆ, ಚಂದ್ರಮಂಡಲೋತ್ಸವ ಮತ್ತು ಅಗ್ನಿಕುಂಡ ಸೇವೆ ನಿರಂತರವಾಗಿ ನಡೆದವು.ಡೊಳ್ಳು, ನಗಾರಿ, ತಮಟೆ, ಕರಡೇವು, ಚಿಟ್ಟಿಮೇಳ, ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.