ADVERTISEMENT

ತೆಂಗು, ಅಡಿಕೆಗೆ ಅಂತರ್‌ ಬೆಳೆ ‘ಪಚೌಲಿ’

ಚನ್ನರಾಯಪಟ್ಟಣ ತಾಲ್ಲೂಕು ಚೌಡುವಳ್ಳಿಯಲ್ಲಿ ಅನುಷ್ಠಾನ

ಕೆ.ಎಸ್.ಸುನಿಲ್
Published 21 ಡಿಸೆಂಬರ್ 2017, 7:14 IST
Last Updated 21 ಡಿಸೆಂಬರ್ 2017, 7:14 IST
ಚನ್ನರಾಯಪಟ್ಟಣ ತಾಲ್ಲೂಕಿನ ಚೌಡುವಳ್ಳಿಯಲ್ಲಿ ರೈತ ಪುಟ್ಟರಾಜು ಜಮೀನಿನಲ್ಲಿ ಬೆಳೆದಿರುವ ಪಚೌಲಿ
ಚನ್ನರಾಯಪಟ್ಟಣ ತಾಲ್ಲೂಕಿನ ಚೌಡುವಳ್ಳಿಯಲ್ಲಿ ರೈತ ಪುಟ್ಟರಾಜು ಜಮೀನಿನಲ್ಲಿ ಬೆಳೆದಿರುವ ಪಚೌಲಿ   

ಹಾಸನ: ತೆಂಗು ಮತ್ತು ಅಡಿಕೆ ಬೆಳೆ ನಾಶದಿಂದ ಕಂಗಾಲಾಗಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಲು ತೋಟಗಾರಿಕೆ ಇಲಾಖೆಯು ತೆಂಗಿನ ಜತೆ ಅಂತರ್ ಬೆಳೆಯಾಗಿ ಪಚೌಲಿ ಬೆಳೆ ಪರಿಚಯಿಸಿದೆ.

2017– 20ನೇ ಸಾಲಿಗೆ ಜಿಲ್ಲೆಯಲ್ಲಿ ಒಟ್ಟು 500 ಎಕರೆ ಪ್ರದೇಶದಲ್ಲಿ ಬೆಳೆಯಲು ಗುರಿ ನಿಗದಿ ಪಡಿಸಿದ್ದು, ಇದಕ್ಕಾಗಿ ₹ 10 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಚನ್ನರಾಯ ಪಟ್ಟಣ ತಾಲ್ಲೂಕಿನ ಚೌಡುವಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪಚೌಲಿ ಸಸಿ ಮಡಿಗಳನ್ನು ಮಾಡಲಾಗಿದೆ. ನೆರಳಿನಲ್ಲಿ ಬೆಳೆಯ ಬಹುದಾಗಿದ್ದು, ತೆಂಗು ಮತ್ತು ಅಡಿಕೆ ತೋಟದಲ್ಲಿ ಬೆಳೆಯಬಹುದು.

ಸಿಲ್ಮೋಡ್‌ ಎಕ್ಸ್‌ಟ್ರಾಕ್ಸ್‌ ಕಂಪೆನಿ, ತೋಟಗಾರಿಕೆ ಇಲಾಖೆ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಎರಡು ವರ್ಷದಲ್ಲಿ 500 ಎಕರೆ ತೆಂಗು, ಅಡಿಕೆ ಪ್ರದೇಶದಲ್ಲಿ ಅಂತರ್‌ ಬೆಳೆಯಾಗಿ ಪಚೌಲಿ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರೊಂದಿಗೆ ಕಂಪೆನಿಯೇ ಒಪ್ಪಂದ ಮಾಡಿಕೊಂಡು ಬೆಳೆದು ಒಣಗಿಸಿದ ಪಚೌಲಿ ಸೊಪ್ಪನ್ನು ಕೆ.ಜಿ.ಗೆ ₹ 35ರಂತೆ ನೇರವಾಗಿ ಖರೀದಿಸುತ್ತದೆ.

ADVERTISEMENT

ರಾಜ್ಯ ತೋಟಗಾರಿಕೆ ಇಲಾಖೆ ಎಕರೆಗೆ ₹ 16 ಸಾವಿರ ಸಹಾಯಧನ ನೀಡುತ್ತಿದೆ. ಪ್ಲಾಸ್ಟಿಕ್ ಹೊದಿಕೆ ಅಳವಡಿಸಲು ಎಕರೆಗೆ ₹ 6,400ರಂತೆ ಒಟ್ಟು ವೆಚ್ಚದ ಶೇ 50 ಸಹಾಯಧನ ಹಾಗೂ ಹನಿ ನೀರಾವರಿ ಅಳವಡಿಸಿಕೊಳ್ಳಲು ಎಕರೆಗೆ ಗರಿಷ್ಠ ₹ 40 ಸಾವಿರದಂತೆ ಶೇ 90ರಷ್ಟು ಸಹಾಯಧನ ನೀಡುತ್ತಿದೆ.

ಬೆಳೆ ಬಗ್ಗೆ ತರಬೇತಿ ಪಡೆಯಲು ಮತ್ತು ಶೈಕ್ಷಣಿಕ ಪ್ರವಾಸಕ್ಕೂ ಸಹಾಯಧನ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ಚೌಡುವಳ್ಳಿ ಸುತ್ತಲಿನ ಗ್ರಾಮಗಳಲ್ಲಿ ಬೇಸಾಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂಜಯ್‌, ‘ತೆಂಗು ಮತ್ತು ಅಡಿಕೆ ತೋಟದಲ್ಲಿ ಅಂತರ್‌ ಬೆಳೆಯಾಗಿ ಪಚೌಲಿ ಬೆಳೆಯಬಹುದು. ಇದಕ್ಕೆ ಸರ್ಕಾರ ಸಹಾಯಧನ ಸಹ ನೀಡಲಿದೆ. ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ. ಇದರ ತೈಲವನ್ನು ಸೌಂದರ್ಯವರ್ಧಕಗಳಲ್ಲಿ ಗುಣಮಟ್ಟ ಕಾಪಾಡಲು ಬಳಸಲಾಗುತ್ತದೆ. ದೇಶದಲ್ಲಿ ಶೇ 7ರಷ್ಟು ಮಾತ್ರ ಬೆಳೆಯಲಾಗುತ್ತಿದೆ. ರೈತರು ಶ್ರಮ ವಹಿಸಿ ಬೆಳೆ ಬೆಳೆದರೆ ಕೈ ಹಿಡಿಯುವುದು ನಿಶ್ಚಿತ. ಆಸಕ್ತ ರೈತರನ್ನು ಕ್ಷೇತ್ರ ಪ್ರವಾಸ ಕರೆದೊಯ್ದು ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

ಪಚೌಲಿ ವಿವರ...
ಪಚೌಲಿ ಅರೆಪೊದೆ ಸಸ್ಯವಾಗಿದ್ದು, 0.5 ಮೀ.ನಿಂದ 1.2 ಮೀ ಎತ್ತರ ಬೆಳೆಯುತ್ತದೆ. ಬಿಸಿಲಿನಲ್ಲಿ ಗಿಡ ಬೆಳೆಸಿದಾಗ ನೇರಳೆ ಮಿಶ್ರಿತ ಹಸಿರು ಬಣ್ಣದ ಎಲೆಗಳಿಂದ ಕೂಡಿರುತ್ತದೆ. ಅರೆ ನೆರಳಿನಲ್ಲಿ ಬೆಳೆದಾಗ ಹಸಿರು ಬಣ್ಣದಿಂದ ಕೂಡಿರುತ್ತದೆ. ನಾಟಿಯಾದ ಆರು ತಿಂಗಳ ಬಳಿಕ ಕಟಾವು ಮಾಡಿ ಒಣಗಿಸಿದ ಎಲೆಗಳನ್ನು ಮಾರಾಟ ಮಾಡಬೇಕು.

*
ಪ್ರಾಯೋಗಿಕವಾಗಿ ಚೌಡುವಳ್ಳಿ ಗ್ರಾಮದಲ್ಲಿ ಈ ಯೋಜನೆ ಅನುಷ್ಠಾನ ಮಾಡಲಾಗಿದ್ದು, ರೈತರು ವೀಕ್ಷಿಸಬಹುದು.
– ಸಂಜಯ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.