ADVERTISEMENT

ದೊಡ್ಡಕೆರೆ ತುಂಬ ಹೂಳು, ಜಾಲಿ ಮುಳ್ಳು

ಜಾವಗಲ್‌: ಅಂತರ್ಜಲ ಬತ್ತಿದ ಪರಿಣಾಮ ಒಣಗಿದ ತೆಂಗು, ಅಡಿಕೆ ತೋಟ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 8:35 IST
Last Updated 17 ಏಪ್ರಿಲ್ 2017, 8:35 IST
ದೊಡ್ಡಕೆರೆ ತುಂಬ ಹೂಳು, ಜಾಲಿ ಮುಳ್ಳು
ದೊಡ್ಡಕೆರೆ ತುಂಬ ಹೂಳು, ಜಾಲಿ ಮುಳ್ಳು   
ಜಾವಗಲ್‌: ಸಮರ್ಪಕ ಮಳೆ ಇಲ್ಲದೆ ಹೋಬಳಿಯಲ್ಲಿ ಅಂತರ್ಜಲ ಕುಸಿದು ಕುಡಿಯುವ ನೀರಿಗೆ ಜನ, ಜಾನು ವಾರುಗಳು ಪರದಾಡುವಂತಾಗಿದೆ. ಇಲ್ಲಿನ ದೊಡ್ಡಕೆರೆ ತುಂಬ ಹೂಳು ಮತ್ತು ಜಾಲಿ ಗಿಡಗಳು ಬೆಳೆದು ನಿಂತಿವೆ. 
 
ಜಾವಗಲ್‌ ಹಾಗೂ ಸುತ್ತಮುತ್ತಲ ಜನರ ಅನುಕೂಲಕ್ಕಾಗಿ ಕಟ್ಟಿಸಿದ್ದ ಸುಮಾರು 200 ಎಕರೆ ಪ್ರದೇಶದ ಕೆರೆಯಲ್ಲಿ ಹನಿ ನೀರಿಲ್ಲ. ನೀರಿನ ಬದಲು ಜಾಲಿ ಗಿಡಗಳು ಕೆರೆಯನ್ನು ಆವರಿಸಿ ಕೊಂಡಿದೆ. 
 
10–15 ವರ್ಷಗಳಿಂದ ಮಳೆಯಾಗದ ಕಾರಣ ಈ ಕೆರೆ ಸಂಪೂರ್ಣ ಬತ್ತಿ ಹೋಗಿ ಸುತ್ತಲಿನ ಜಮೀನು ಹಾಗೂ ಕೆರೆಯ ಹಿಂಭಾಗದ ತೋಟಗಳು ಒಣಗಿ ಜನರ ಬದುಕು ಮೂರಾಬಟ್ಟೆಯಾಗಿದೆ. ಕೆರೆ ತುಂಬಿದ್ದಾಗ ಮಲೆನಾಡನ್ನು ಮೀರಿಸುವಷ್ಟರ ಮಟ್ಟಿಗೆ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು.

ಆದರೆ ಇಂದು ನೀರಿಲ್ಲದೆ ತೆಂಗು, ಅಡಿಕೆ ತೋಟಗಳು ಒಣಗಿ ಹೋಗಿವೆ. ಕರಗಡ, ರಣಗಟ್ಟ ಮತ್ತು ಎತ್ತಿನಹೊಳೆ ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾಗಿಲ್ಲ. 
 
ಸುತ್ತಮುತ್ತಲಿನ ಗ್ರಾಮಸ್ಥರು 900–1000 ಅಡಿ ಆಳ ಕೊಳವೆ ಬಾವಿ ಕೊರೆಸಿದರೂ ಹನಿ ನೀರು ಸಿಗುತ್ತಿಲ್ಲ. ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ. ಕೆಲವು ರೈತರು ಒಣಗಿರುವ ತೆಂಗು ಮತ್ತು ಅಡಿಕೆ ಮರಗಳನ್ನು ಕಡಿದು ಹಾಕಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.  
 
‘ದೊಡ್ಡ ಕೆರೆ ಹೂಳೆತ್ತುವ ಕಾರ್ಯ ಮೊದಲು ಆಗಬೇಕು. ನಂತರ ಕೆರೆಗೆ ನೀರು ತುಂಬಿಸಬೇಕು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ. ಕಿಲೋ ಮೀಟರ್‌ ದೂರದಿಂದ ಹೆಂಗಸರು, ಮಕ್ಕಳು ಸೈಕಲ್‌ಗಳಲ್ಲಿ ನೀರು ತರುತ್ತಿದ್ದಾರೆ. ಸರ್ಕಾರ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು’ ಎಂದು ರೈತ ಹರೀಶ್‌ ಮನವಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.