ADVERTISEMENT

ದೊಡ್ಡ ಸವಾಲಿದೆ, ನಿಭಾಯಿಸುತ್ತೇನೆ– ಎಚ್‌ಡಿಕೆ

ಹೊಳೆನರಸೀಪುರದ ಲಕ್ಷ್ಮಿ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಎಚ್‌ಡಿಕೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 11:36 IST
Last Updated 22 ಮೇ 2018, 11:36 IST

ಹೊಳೆನರಸೀಪುರ: ‘ಜನರ ಆಶೀರ್ವಾದ ಇಲ್ಲದಿದ್ದರೂ ದೇವರ ಅನುಗ್ರಹ ಮತ್ತು ತಂದೆಯ ಆಶೀರ್ವಾದದಿಂದ ಮುಖ್ಯಮಂತ್ರಿ ಪದವಿ ಅಲಂಕರಿಸಲಿದ್ದೇನೆ. ಆಡಳಿತ ಸುಲಭವಲ್ಲ ಎಂಬುದು ಗೊತ್ತಿದೆ. ಆದರೂ 5 ವರ್ಷ ಆಡಳಿತ ನಡೆಸುವ ಶಕ್ತಿ ಹಾಗೂ ಅನುಭವ ಇದೆ’ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸೋಮವಾರ ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ನಮ್ಮ ಮುಂದೆ ದೊಡ್ಡ ಸವಾಲಿದೆ. ನಮ್ಮ ನಿರ್ಧಾರದ ಬಗ್ಗೆ ಜನರ ಅಭಿಪ್ರಾಯಗಳು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅನಿಸಿಕೆಗಳನ್ನು ಗಮನಿಸುತ್ತಿದ್ದೇನೆ. ಎಲ್ಲದಕ್ಕೂ ಸಕಾಲದಲ್ಲಿ ಉತ್ತರ ನೀಡುತ್ತೇನೆ’ ಎಂದರು.

ADVERTISEMENT

‘ಉತ್ತಮ ಆಡಳಿತಕ್ಕೆ ಕಾಂಗ್ರೆಸ್‌ ವರಿಷ್ಠರು ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. 5 ವರ್ಷ ಪೂರ್ಣ ಆಡಳಿತ ನೀಡುತ್ತೇನೆ’ ಎಂದು ಆಶಯ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ಶ್ರೀರಾಮುಲು ‘ನಿದ್ದೆ ಗೆಡಿಸುತ್ತೇನೆ’ ಎಂದು ಹೇಳಿದ್ದಾರೆ ಎಂದು ಗಮನಸೆಳೆದಾಗ ‘ಕುಮಾರಸ್ವಾಮಿ ನಿದ್ದೆ ಗೆಡಿಸಲು ಯಾರಿಗೂ ಸಾಧ್ಯ ಇಲ್ಲ. ನನ್ನ ನೆನೆದು ಅವರೇ ನಿದ್ದೆ ಗೆಡಿಸಿಕೊಳ್ಳುತ್ತಿರಬೇಕು’ ಎಂದರು.

ವಿಶೇಷ ಪೂಜೆ: ದೇವಾಯಲಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ದಂಪತಿಗೆ ಅರ್ಚಕರು ಹಸಿರು ಬಣ್ಣದ ರುಮಾಲು ತೋಡಿಸಿ ಆಹ್ವಾನಿಸಿದರು. ಶಾಸಕ ರೇವಣ್ಣ ಅವರು ಕುಮಾರಸ್ವಾಮಿ ದಂಪತಿಗೆ ದೇವಾಲಯದ ಪ್ರದಕ್ಷಿಣೆ ಹಾಕಲು, ಅರಳಿಕಟ್ಟೆ ಸುತ್ತಲು ಸಲಹೆ ನೀಡಿದರು.

ಮೊದಲಿಗೆ ಗಣೇಶನಿಗೆ ಅರ್ಚನೆ ಮಾಡಿಸಿ ನಂತರ ಲಕ್ಷ್ಮಿನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಶಾಸಕ ರೇವಣ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಪುರ್‌ವಾಡ್‌ ಇದ್ದರು.

ದೇವಾಲಯದ ಬಳಿ ನಿಯೋಜಿತ ಮುಖ್ಯಮಂತ್ರಿ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.