ADVERTISEMENT

ನಿತ್ಯ ಬಳಕೆಗೆ ಮಳೆ ನೀರು!

ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆ

ಕೆ.ಎಸ್.ಸುನಿಲ್
Published 22 ಮಾರ್ಚ್ 2017, 9:55 IST
Last Updated 22 ಮಾರ್ಚ್ 2017, 9:55 IST
ಹಾಸನದ ಕೃಷಿ ತಜ್ಞ ವಿಜಯ ಅಂಗಡಿ ಅವರು ತಮ್ಮ ಮನೆಯ ಪಕ್ಕದ ಕೈ ತೋಟದಲ್ಲಿ ಬೆಳೆದಿರುವ ತರಕಾರಿ, ಸೊಪ
ಹಾಸನದ ಕೃಷಿ ತಜ್ಞ ವಿಜಯ ಅಂಗಡಿ ಅವರು ತಮ್ಮ ಮನೆಯ ಪಕ್ಕದ ಕೈ ತೋಟದಲ್ಲಿ ಬೆಳೆದಿರುವ ತರಕಾರಿ, ಸೊಪ   

ಹಾಸನ: ಈ ಮನೆ ಹೆಸರು ‘ಹಸಿರು’. ಹೆಸರಿಗೆ ತಕ್ಕಂತೆ ಹಸಿರಿನಿಂದ ಕಂಗೊಳಿಸುತ್ತಿದೆ. ಮನೆ ಮುಂಭಾಗ, ತಾರಸಿ ಹಾಗೂ ಪಕ್ಕದ ಕೈ ತೋಟದಲ್ಲಿ ತರಹೇವಾರಿ ಹಣ್ಣು, ತರಕಾರಿ, ಹೂವುಗಳನ್ನು ನೋಡಬಹುದು. ಇದನ್ನು ಬೆಳೆಯಲು ಬಳಸಿರುವುದು ಮಳೆ ನೀರು.

ಹೌದು, ಮಳೆ ಇಲ್ಲದೆ ಜಲಾಶಯ ಗಳು ಬರಿದಾಗುತ್ತಿವೆ. ಮತ್ತೊಂದೆಡೆ ಅಂತರ್ಜಲ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಕೊರತೆ ನಿವಾರಣೆಗೆ ಪ್ರಮುಖ ಆಸರೆಯಾ ಗಿರುವುದು ಮಳೆ ನೀರು ಸಂಗ್ರಹ.

ಇಲ್ಲಿನ ಕೃಷಿ ನಗರ ನಿವಾಸಿ ಆಕಾಶವಾಣಿ ಕಾರ್ಯಕ್ರಮ ಸಂಯೋಜಕ, ಕೃಷಿ ತಜ್ಞರೂಆದ ವಿಜಯ ಅಂಗಡಿ ಅವರು 30X40 ಜಾಗದಲ್ಲಿ  ಮನೆ ಕಟ್ಟಿಕೊಂಡು ಪತ್ನಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸರಳ ಜೀವನ ನಡೆಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಕೃಷಿ ಕುಟುಂಬದಲ್ಲಿ ಜನಿಸಿದ ಅವರು, ಉದ್ಯೋಗ ಅರಸಿ ಬಂದು ಇಲ್ಲಿಯೇ ನೆಲೆ ಕಂಡು ಕೊಂಡಿದ್ದಾರೆ.

ಮನೆಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡು ತರಹೇವಾರಿ ತರಕಾರಿ, ಸೊಪ್ಪು, ಹಣ್ಣು ಬೆಳೆಯುವುದರ ಜತೆಗೆ ದಿನನಿತ್ಯದ ಬಳಕೆಗೂ ಅದೇ ನೀರನ್ನು ಬಳಸುತ್ತಿದ್ದಾರೆ. ವರ್ಷಕ್ಕೆ ₹ 50 ಸಾವಿರ ಆದಾಯವೂ ಬರುತ್ತಿದೆ.

ಇದು ತೀರಾ ಕಷ್ಟದ ತಂತ್ರವೇನಲ್ಲ, ಭಾರಿ ವೆಚ್ಚದ ಯೋಜನೆಯೂ ಅಲ್ಲ. ಅತ್ಯಂತ ಸರಳ ವಿಧಾನ, ನೀರಿನ ಕೊರತೆ ನೀಗಿಸಲು ಸುಲಭ ಸಾಧನ. 
₹ 15ರಿಂದ 20 ಸಾವಿರ ವೆಚ್ಚದಲ್ಲಿ ಸರಳ ವಿಧಾನದಲ್ಲಿ ಮಳೆ ನೀರು ಸಂಗ್ರಹ ಮಾಡಿಕೊಂಡಿದ್ದಾರೆ. ಆಗಸದಿಂದ ಬೀಳುವ ಶುದ್ಧ ಮಳೆ ನೀರು ಹರಿದು ಚರಂಡಿ ಸೇರುತ್ತದೆ.

ಇದರ ಬದಲಿಗೆ ಒಂದು ಸಾವಿರ ಲೀಟರ್‌ ಸಾಮರ್ಥ್ಯದ ಎರಡು ಡ್ರಮ್‌ಗಳಲ್ಲಿ ಮಳೆ ನೀರನ್ನು ಸಂಗ್ರಹಿಸಲಾಗಿದೆ. ಮನೆಯ ತಾರಸಿಯಿಂದ ಮಳೆ ನೀರು ಹೊರ ಹೋಗಲು ಪೈಪ್‌ ಅನ್ನು ಪ್ಲಾಸ್ಟಿಕ್‌ ಡ್ರಮ್‌ಗೆ ಜೋಡಿಸಲಾಗಿದೆ. ಕಿಟಕಿಗೆ ಹಾಕುವ ಪರದೆ ಹಾಗೂ ಸೊಳ್ಳೆ ಪರದೆಯನ್ನೇ ಅಳವಡಿಸುವ ಮೂಲಕ ಪೈಪ್‌ನಿಂದ ಬರುವ ನೀರಿನಲ್ಲಿರುವ ಕಸ ಕಡ್ಡಿ ಡ್ರಮ್‌ಗೆ ಸೇರುವುದನ್ನು ತಪ್ಪಿಸಿದ್ದಾರೆ.

ವಿಜಯ ಅವರದು ಸರಳ ಜೀವನ. ಅವರು ಚಪ್ಪಲಿ ಬಳಸುವುದು ತೀರಾ ಕಡಿಮೆ. ಕಾರು ಇದ್ದರೂ ಸೈಕಲ್‌ ಮೇಲೆಯೇ ಹೆಚ್ಚು ಸವಾರಿ. ಸ್ವತಃ ಹೇರ್‌ ಕಟ್‌ ಮಾಡಿಕೊಳ್ಳುತ್ತಾರೆ. ಶೇವಿಂಗ್‌ಗೆ ಕ್ರೀಂ ಬಳಸುವುದಿಲ್ಲ ಮತ್ತು ಸ್ನಾನಕ್ಕೂ ಸಾಬೂನು ಬಳಸಲ್ಲ.

ಸೋಪು ಬಳಸದಿರಲು ಕಾರಣವೇನು ಎಂಬ ಪ್ರಶ್ನೆಗೆ ‘ಸೋಪ್‌ ಬಳಸಿದರೆ ಎರಡು ಬಕೆಟ್‌ ನೀರು ಬೇಕು. ಹಿಂದೆ ಹುತ್ತದ ಮಣ್ಣು ಬಳಸುತ್ತಿದ್ದೆ. ಈಗ ಶೇವಿಂಗ್‌ ಕ್ರೀಂ ಬದಲು ಲೋಳೆ ರಸ ಬಳಸುತ್ತೇನೆ’ ಎನ್ನುತ್ತಾರೆ ಅಂಗಡಿ.

ಸಂಗ್ರಹಿಸಿದ ಮಳೆ ನೀರನ್ನು ಪ್ರತಿದಿನ ಕುಡಿಯಲು, ಅಡುಗೆ ಮಾಡಲು, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಮತ್ತು ತರಕಾರಿ, ಹಣ್ಣು ಬೆಳೆಯಲು ಬಳಸಿ ಕೊಳ್ಳಲಾಗುತ್ತಿದೆ. ಅಡುಗೆ ಮನೆ ನೀರನ್ನು ಮನೆಯ ಪಕ್ಕದಲ್ಲಿರುವ ಕೈ ತೋಟಕ್ಕೆ ಬಿಡಲಾಗುತ್ತದೆ. ಇಲ್ಲಿ ಟೊಮೆಟೊ, ಕರಿಬೇವು, ಶುಂಠಿ, ಅರಿಶಿಣ, ಚಕ್ರಮುನಿ, ಅಮೃತ ಬಳ್ಳಿ, ಬೆಳೆದಿದ್ದಾರೆ.

‘ಈಗ ನಗರ, ಹಳ್ಳಿಗಳಲ್ಲಿಯೂ ನೀರಿನ ಕೊರತೆ ಕಾಡುತ್ತಿದೆ. ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡುವ ಬದಲು ಈಗಲೇ ನೀರಿನ ಉಳಿತಾಯ ಕ್ಕಾಗಿ ಸಿದ್ಧತೆ ಮಾಡಿಕೊಂಡರೆ ಒಳ್ಳೆಯದು. ಭೂಮಿಯ ಒಡಲಿಗೆ ಕನ್ನ ಹಾಕುವ ತಂತ್ರಜ್ಞಾನದಿಂದಾಗಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ.

ಮಳೆ ನೀರು ಸಂಗ್ರಹದಿಂದ ನೀರಿನ ಕೊರತೆ ನೀಗಿಸುವ ಜತೆಗೆ ದಿನ ನಿತ್ಯದ ಬಳಕೆಗೆ ಬೇಕಾಗುವ ನೀರನ್ನು ಅಗತ್ಯ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು’ ಎನ್ನುತ್ತಾರೆ ವಿಜಯ ಅಂಗಡಿ.

‘ಪುಣ್ಯಭೂಮಿ’ಯಲ್ಲಿ ಜಲ ಪಾಠ
ಆಲೂರಿನಲ್ಲಿ ‘ಪುಣ್ಯಭೂಮಿ’ ಸ್ವಯಂ ಸೇವಾ ಸಂಸ್ಥೆ ಹುಟ್ಟು ಹಾಕಿ, ಕಡಿಮೆ ಜಮೀನಿನಲ್ಲೂ ನೀರನ್ನು ಮಿತವಾಗಿ ಬಳಸಿ ಹೇಗೆ ಲಾಭದಾಯಕ ಕೃಷಿ ಮಾಡಬಹುದು ಎಂಬ ಪಾಠವನ್ನು ವಿಜಯ ಅಂಗಡಿ ಹೇಳಿಕೊಡುತ್ತಿದ್ದಾರೆ.

‘ಪರಿಸರ ಪ್ರಿಯೆ’ ಕೃಷಿಕರ ಸಂಘಟನೆ ಹೆಸರಲ್ಲಿ ನೀರು ಮಿತ ಬಳಕೆ, ಸಾವಯವ ಕೃಷಿ ಮತ್ತು ಪರಿಸರ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. 560
ಮಂದಿ ಸದಸ್ಯತ್ವ ಪಡೆದುಕೊಂಡಿದ್ದು, ಮಳೆ ನೀರು ಸಂಗ್ರಹ, ಇಂಗು ಗುಂಡಿ, ಕೃಷಿ ಹೊಂಡ, ಅಂತರ್ಜಲ ಹೆಚ್ಚಳ ಕುರಿತು ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ನೂರಾರು ಜನರು ಕುಳಿತು ಚರ್ಚೆ, ಸಂವಾದ ನಡೆಸುತ್ತಾರೆ. ಕ್ಷೇತ್ರ ಪ್ರವಾಸಕ್ಕೂ ಕರೆದುಕೊಂಡು ಹೋಗಲಾಗುತ್ತಿದೆ.

ADVERTISEMENT

ತಾರಸಿಯಲ್ಲಿ ತರಕಾರಿ ಕೃಷಿ, ಜೇನು ಸಾಕಾಣಿಕೆ
ಮಳೆ ನೀರು ಬಳಸಿಕೊಂಡು ತಾರಸಿಯಲ್ಲೂ ತರಕಾರಿ ಕೃಷಿ ಮಾಡಲಾಗಿದೆ. 70 ದೊಡ್ಡ ಕುಂಡ ಹಾಗೂ 30 ಸಣ್ಣ ಡ್ರಮ್‌ಗಳಲ್ಲಿ ವಿವಿಧ ತರಕಾರಿ ಬೆಳೆದಿದ್ದಾರೆ. ನಾಟಿ ಈರುಳ್ಳಿ, ಮೆಂತೆ, ಪಾಲಕ್‌, ಕೊತ್ತಂಬರಿ, ಹಸಿ ಮೆಣಸಿನಕಾಯಿ, ಕ್ಯಾರೆಟ್‌, ಮೂಲಂಗಿ, ಬೀಟ್‌ರೂಟ್‌, ಬದನೆಕಾಯಿ ಬೆಳೆದಿದ್ದಾರೆ.

ಶುದ್ಧ , ತಾಜಾ ತರಕಾರಿಗಳನ್ನು ಮನೆಗೆ ಬಳಸಿಕೊಂಡು ಮಾರಾಟ ಮಾಡಲಾಗುತ್ತಿದೆ. ಖರ್ಚು ಕಳೆದು ವರ್ಷಕ್ಕೆ ₹ 50 ಸಾವಿರ ಆದಾಯ ಸಹ ಇವರ ಕೈ ಸೇರುತ್ತಿದೆ. ಅಡುಗೆ ಮನೆ ತ್ಯಾಜ್ಯವನ್ನು ಗಿಡಕ್ಕೆ ಗೊಬ್ಬರವಾಗಿ ಬಳಸಿಕೊಳ್ಳುತ್ತಿದ್ದಾರೆ.

ಜತೆಗೆ ಜೇನು ಸಾಕಾಣಿಕೆ ಮಾಡಿಕೊಂಡು ಆಸಕ್ತರಿಗೆ ತರಬೇತಿ ನೀಡುವುದರ ಜತೆಗೆ ವರ್ಷಕ್ಕೆ 15 ಕೆ.ಜಿ. ತುಪ್ಪ ಮಾರಾಟ ಮಾಡುತ್ತಿದ್ದಾರೆ.
‘ವರ್ಷದಲ್ಲಿ ಸಾಧಾರಣ ಮಳೆಗೆ 5 ಸಾವಿರ ಲೀಟರ್‌ ನೀರು ಸಿಗುತ್ತದೆ. ಮಳೆ ಬಂದಾಗ ಡ್ರಮ್‌, ಬಾಟಲ್‌, ಕ್ಯಾನ್‌ಗಳಲ್ಲಿ ನೀರು ಶೇಖರಣೆ ಮಾಡುತ್ತೇನೆ.

ಇದನ್ನು ಒಂದು ವರ್ಷ ಬಳಸಬಹುದು. ಮಳೆ ಬರುತ್ತಿರುವಾಗ ಅದರ ಪ್ರಾಮುಖ್ಯತೆ ತಿಳಿಯುವುದಿಲ್ಲ.  ನೀರು ಸಿಗದಿದ್ದಾಗ ಅದರ ಮಹತ್ವ ಗೊತ್ತಾಗುತ್ತದೆ. ಜನರು ದುಡ್ಡು ಕೊಟ್ಟು ನೀರು ವ್ಯರ್ಥ ಮಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

*
ಮಳೆ ನೀರನ್ನು ಎಷ್ಟು ದಿನ ಬೇಕಾದರೂ ಇಡಬಹುದು. ಗಾಳಿ, ಬೆಳಕು ಬೀಳದ ಜಾಗದಲ್ಲಿ ನೀರನ್ನು ಸಂಗ್ರಹಿಸಿಟ್ಟು, ಬೇಕಾದಾಗ ಬಳಸಿಕೊಳ್ಳಬಹುದು.
-ವಿಜಯ ಅಂಗಡಿ,
ಕೃಷಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.