ADVERTISEMENT

ನೈತಿಕ ಶಿಕ್ಷಣ ನೆಮ್ಮದಿಗೆ ಸಹಕಾರಿ

ಕನಕಗಿರಿ ಅತಿಶಯ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 9:37 IST
Last Updated 27 ಜನವರಿ 2017, 9:37 IST
ನೈತಿಕ ಶಿಕ್ಷಣ ನೆಮ್ಮದಿಗೆ ಸಹಕಾರಿ
ನೈತಿಕ ಶಿಕ್ಷಣ ನೆಮ್ಮದಿಗೆ ಸಹಕಾರಿ   

ಕನಕಗಿರಿ(ಮಹರ್ಷಿ ಪೂಜ್ಯಪಾದ ಸಭಾ ಮಂಟಪ): ‘ಪ್ರತಿಯೊಬ್ಬರು ಧಾರ್ಮಿಕ ಮತ್ತು ನೈತಿಕ ಶಿಕ್ಷಣದ ಮೌಲ್ಯ ಅರಿತರೆ ಜೀವನದಲ್ಲಿ ನೆಮ್ಮದಿ ನೆಲೆಸಲಿದೆ’ ಎಂದು ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್‌ ಸಲಹೆ ನೀಡಿದರು.

ತಾಲ್ಲೂಕಿನ ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿ ಗುರುವಾರ ಕನಕಗಿರಿ ಅತಿಶಯ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಹೇಗೆ ಜನಿಸುತ್ತೇವೆ ಎಂಬ ಆಯ್ಕೆ ನಮ್ಮ ಮುಂದಿಲ್ಲ. ದೇವರು ಸೃಷ್ಟಿಸಿದ ರೂಪದಲ್ಲಿ ನಾವು ಜನಿಸುತ್ತೇವೆ. ಎಲ್ಲರಿಗೂ ಸಮಸ್ಯೆಗಳಿರುತ್ತವೆ. ಶಾಂತಿಯಿಂದ ಕೂಡಿರುವ ಗ್ರಾಮ ದೇಶದಲ್ಲಿ ಎಲ್ಲಿಯೂ ಇಲ್ಲ. ಮನುಷ್ಯರು ಸದಾ ಒತ್ತಡದ ಜೀವನದಲ್ಲಿರುವುದು ಸಹಜ. ಹಾಗಾಗಿ, ಆಧ್ಯಾತ್ಮಿಕ ಹಾದಿಯಲ್ಲಿ ಸಾಗಿ ನೆಮ್ಮದಿ ಪಡೆಯಬೇಕಿದೆ’ ಎಂದು ಸಲಹೆ ನೀಡಿದರು.

ಶ್ರೀಮಂತಿಕೆಯು ಸಮಾಜದ ಆಸ್ತಿಯಲ್ಲ. ಹಿರಿಯರ ಧಾರ್ಮಿಕ ಚಿಂತನೆ, ಅವರ ಪ್ರೀತಿ, ವಿಶ್ವಾಸದ ವ್ಯಕ್ತಿತ್ವವೇ ಸಂಪತ್ತಾಗಿದೆ. ಅವರ ಮಾರ್ಗದರ್ಶನದಲ್ಲಿ ಯುವಜನರು ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ಯುವಜನರು ತಂದೆ–ತಾಯಿಯ ಮಾರ್ಗದರ್ಶನ ಪಡೆಯಬೇಕು. ಅವರ ಮಾರ್ಗದರ್ಶನದಡಿ ದೇಶದ ಸಂಪತ್ತಾಗಿ ಬೆಳೆಯಬೇಕು ಎಂದು ಆ ಶಿಸಿದರು.
ಮನುಷ್ಯನಿಗೆ ಜೀವನದಲ್ಲಿ ಆಯ್ಕೆಗಳು ಇಲ್ಲ. ಯಾವ ಧರ್ಮದಲ್ಲಿ ಜನಿಸಬೇಕು ಎಂಬ ಅಧಿಕಾರವಿಲ್ಲ. ತಂದೆ, ತಾಯಿ ಯಾರಾಗಬೇಕೆಂಬ ಅಧಿಕಾರವೂ ಇಲ್ಲ. ಹಾಗಾಗಿಯೇ, ಭಾರತದಲ್ಲಿ ವಿವಿಧ ಧರ್ಮಗಳನ್ನು ದೇವರು ಸೃಷ್ಟಿಸಿದ್ದಾನೆ. ತಮ್ಮ ಧರ್ಮದೊಂದಿಗೆ ಉಳಿದ ಧರ್ಮಗಳನ್ನು ಗೌರವಿಸಿ ಎಲ್ಲರ ಪ್ರೀತಿಗೂ ಪಾತ್ರರಾಗಬೇಕಿದೆ ಎಂದರು.

ಪ್ರಸನ್ನ ಸಾಗರ ಮಹಾರಾಜರು ಮತ್ತು ಪಿಯೂಷ ಸಾಗರ ಮಹಾರಾಜರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕನಕ ಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ, ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಜಿಲ್ಲಾ ಪಂಚಾಯಿತಿಯ ಸ್ಥಾಯಿಸಮಿತಿ ಅಧ್ಯಕ್ಷ ಕೆರೆಹಳ್ಳಿ           ನವೀನ್‌, ಮಲೆಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ, ಜಿಲ್ಲಾಧಿಕಾರಿ  ಬಿ. ರಾಮು, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಉಪವಿಭಾಗಾಧಿಕಾರಿ ನಳಿನಿ ಅತುಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.