ADVERTISEMENT

ಪರಿಹಾರ ಹಣ ರೈತರಿಗೆ ತಲುಪಿಲ್ಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 8:04 IST
Last Updated 16 ಜುಲೈ 2017, 8:04 IST

ಬೇಲೂರು: ಬರ ಪರಿಹಾರದ ಹಣವನ್ನು ರೈತರಿಗೆ ಸರಿಯಾಗಿ ನೀಡಿಲ್ಲ ಮತ್ತು ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಶನಿವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರು.

2015–16ನೇ ಸಾಲಿನಲ್ಲಿ ಬರ ಪರಿಹಾರವಾಗಿ ಬಿಡುಗಡೆಯಾಗಿರುವ ₹ 1 ಕೋಟಿಗೂ ಹೆಚ್ಚು ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದ್ದು ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ರೈತ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ದಿಢೀರ್‌ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಚೇರಿಯ ಬಾಗಿಲನ್ನು ಬಂದ್‌ ಮಾಡಿದರು. ಅಲ್ಲದೇ, ತಹಶೀಲ್ದಾರ್‌ ಸ್ಥಳಕ್ಕೆ ಬರುವವರೆಗೂ ಬಾಗಿಲು ತೆರೆಯುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ತಾಲ್ಲೂಕು ಕಚೇರಿಯ ಬಾಗಿಲನ್ನು ಬಂದ್‌ ಮಾಡಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರು ಒಳಗೆ ಹೋಗಲು ಮತ್ತು ಕಚೇರಿಯ ಸಿಬ್ಬಂದಿ ಹೊರ ಬರಲು ಸಾಧ್ಯವಾಗಲಿಲ್ಲ.

ADVERTISEMENT

ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್‌ ‘ಬೇಲೂರು ತಾಲ್ಲೂಕಿಗೆ 2015–16ನೇ ಸಾಲಿನಲ್ಲಿ ಬರ ಪರಿಹಾರದ ಹಣವಾಗಿ  ₹ 4.78 ಕೋಟಿ ಹಣ ಬಿಡುಗಡೆಯಾಗಿದೆ. ಈ ಹಣದಲ್ಲಿ ರೈತರ ಖಾತೆಗೆ ₹ 3.67 ಕೋಟಿ ಮಾತ್ರ ಸಂದಾಯವಾಗಿದೆ. 

₹ 9.82 ಲಕ್ಷವನ್ನು ಉಳಿಕೆ ಎಂದು ತೋರಿಸಲಾಗುತ್ತಿದೆ. ಆದರೆ, ಬಾಕಿ ₹ 1.9 ಕೋಟಿ ಹಣ ಎಲ್ಲಿ ಹೋಯಿತು? ಎಂಬ ಬಗ್ಗೆ ವಿವರ ನೀಡುತ್ತಿಲ್ಲ. ತಾಲ್ಲೂಕಿನಲ್ಲಿ 54,925 ರೈತರು ಬರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 28,843 ರೈತರ ಖಾತೆಗಳಿಗೆ ಮಾತ್ರ ಹಣ ಸಂದಾಯ ಮಾಡಿದ್ದಾರೆ.

ಳಿಕೆ 17,243 ರೈತರಿಗೆ  ಬರ ಪರಿಹಾರ ಹಣ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಅಧಿಕಾರಿಗಳು ಬರ ಪರಿಹಾರಕ್ಕೆ ನೀಡಲಾದ ಹಣದಲ್ಲಿ ₹ 1 ಕೋಟಿಯನ್ನು ಕುಡಿಯುವ ನೀರಿಗೆ ವೆಚ್ಚ ಮಾಡಲಾಗಿದೆ ಎನ್ನುತ್ತಾರೆ. ಮತ್ತೊಬ್ಬರು ಟ್ಯಾಂಕರ್‌ ಮೂಲಕ ನೀರು ಒದಗಿಸಲು ₹ 10 ಲಕ್ಷ ಖರ್ಚು ಮಾಡಲಾಗಿದೆ.

ಳಿಕೆ ಹಣ ಸರ್ಕಾರಕ್ಕೆ ವಾಪಸ್‌ ಆಗಿದೆ ಎನ್ನುತ್ತಾರೆ. ಅಧಿಕಾರಿಗಳ ಹೇಳಿಕೆಗಳಲ್ಲಿ ಗೊಂದಲವಿದ್ದು ಬರ ಪರಿಹಾರಕ್ಕೆ ಬಿಡುಗಡೆಯಾದ ಹಣ ದುರುಪಯೋಗವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಾಲ್ಲೂಕು ಆಡಳಿತ ಸಣ್ಣ ಮತ್ತು ದೊಡ್ಡ ರೈತರು ಎಂದು ವಿಂಗಡಣೆ ಮಾಡಿ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೋಗಮಲ್ಲೇಶ್‌, ಜಿಲ್ಲಾ ಕಾರ್ಯದರ್ಶಿ ಸ್ವಾಮಿಗೌಡ, ತಾಲ್ಲೂಕು ಕಾರ್ಯದರ್ಶಿ ಬಸವರಾಜು, ರೈತರ ಮುಖಂಡರಾದ ಬಸವೇಗೌಡ, ಮಲ್ಲಿಕಾರ್ಜುನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.