ADVERTISEMENT

ಪರ್ಯೂಷಣ ಪರ್ವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 8:16 IST
Last Updated 9 ಸೆಪ್ಟೆಂಬರ್ 2017, 8:16 IST

ಶ್ರವಣಬೆಳಗೊಳ: ಈಚೆಗೆ ನಡೆದ ದಶಲಕ್ಷಣ ಮಹಾಪರ್ವದಲ್ಲಿ ದೇಶದ ವಿವಿಧೆಡೆಯಿಂದ ತ್ಯಾಗಿಗಳು ಸಾವಿರಾರು ಕಿ.ಮೀ. ನಡೆದು ಬಂದಿದ್ದರು. ಪ್ರತಿನಿತ್ಯ 24 ತೀರ್ಥಂಕರರಿಗೆ ಎಕಕಾಲದಲ್ಲಿ ಜಲ, ಎಳನೀರು, ಈಕ್ಷುರಸ, ಕ್ಷೀರ, ಅರಿಸಿನ, ಮಲಯಾದ್ರಿ ಚಂದನ, ಚಂದನ, ಪುಷ್ಪವೃಷ್ಟಿ, ಕನಕವೃಷ್ಟಿ, ಅರ್ಘ್ಯ, ಶಾಂತಿಧಾರಾ ಮತ್ತು ಮಹಾಮಂಗಳಾರತಿ, ಛತ್ರಿ, ಚಾಮರಸೇವೆಯೊಂದಿಗೆ ಕಲ್ಪಧ್ರುಮ ಮಹಾಪೂಜೆಯು ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನೆರವೇರಿತು.

ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಪ್ರತಿ ಮಧ್ಯಾಹ್ನ ಚಂದ್ರಗುಪ್ತ ಮಹಾರಾಜರು ತತ್ವಾರ್ಥಸೂತ್ರದ ವಾಚನ ಮಾಡಿದರೆ, ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಅರ್ಥ ವಿವರಣೆ ನೀಡಿದರು.

ವಾಸುಪೂಜ್ಯ ಸಾಗರ ಮಹಾರಾಜರು, ಪಂಚಕಲ್ಯಾಣಕ ಸಾಗರ ಮಹಾರಾಜರು, ಚಂದ್ರಪ್ರಭ ಸಾಗರ ಮಹಾರಾಜರು, ಅಮಿತ ಸಾಗರ ಮಹಾರಾಜರು ದಶಲಕ್ಷಣ ಮಹಾಪರ್ವದಲ್ಲಿ ಆಚರಿಸುವ 10 ಧರ್ಮಗಳಾದ ಉತ್ತಮ ಕ್ಷಮಾ, ಮಾರ್ಧವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ, ಬ್ರಹ್ಮಚರ್ಯದ ಬಗ್ಗೆ ವಿವರಿಸಿದರು.

ADVERTISEMENT

ಮುನಿಗಳು, ಶ್ರಾವಕರು, ಕನಿಷ್ಟ ಒಂದು ದಿನದಿಂದ, 17 ದಿನಗಳವರೆಗೆ ದಿನ ಬಿಟ್ಟು ದಿನ ಉಪವಾಸ ವ್ರತ ಕೈಗೊಂಡಿದ್ದರು. ಉಪವಾಸ ಕೈಗೊಂಡವರನ್ನು ಕ್ಷೇತ್ರದಿಂದ ಭವ್ಯ ಮೆರವಣಿಗೆ ನಡೆಸಲಾಯಿತು. ಅನಂತ ನೋಂಪಿ ವ್ರತಿಕರಿಂದ ಮಾತಾಜಿಯವರಿಗೆ, ಕ್ಷುಲ್ಲಕರಿಗೆ, ಬ್ರಹ್ಮಚಾರಿಗಳಿಗೆ ವಸ್ತ್ರದಾನ ಮಾಡಲಾಯಿತು. ಕೊನೆಯಲ್ಲಿ ಪರಸ್ಪರ ಕ್ಷಮೆ ಯಾಚಿಸಿ ಕ್ಷಮಾವಾಣಿ ಆಚರಿಸಲಾಯಿತು.

ಪ್ರತಿ ಸಂಜೆ ಧಾರ್ಮಿಕ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಸಾಂಗ್ಲಿಯ ಕುಬೇರ್‌ಚೌಗಲೆ ಅವರ ಸಂಗೀತದೊಂದಿಗೆ ಆರತಿ ಕಾರ್ಯಕ್ರಮವು ಪುರುಷರು, ಮಹಿಳೆಯರು, ಮಕ್ಕಳು, ವೃದ್ಧರ ನರ್ತನದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.