ADVERTISEMENT

‘ಪಾಪ ತೊಳೆದುಕೊಳ್ಳಲು ಪರಿವರ್ತನಾ ರ‍್ಯಾಲಿ’

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2017, 8:50 IST
Last Updated 2 ನವೆಂಬರ್ 2017, 8:50 IST

ಬೇಲೂರು: ‘ಬಿಜೆಪಿಯವರು ಹಿಂದಿನ ಐದು ವರ್ಷಗಳ ಆಡಳಿತದಲ್ಲಿ ಮಾಡಿದ ಪಾಪವನ್ನು ತೊಳೆದುಕೊಳ್ಳಲು ಪರಿವರ್ತನಾ ರ‍್ಯಾಲಿ ನಡೆಸುತ್ತಿದ್ದಾರೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಬುಧವಾರ ಇಲ್ಲಿ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಹಾಸನ ಮತ್ತು ಬೇಲೂರು ತಾಲ್ಲೂಕಿನ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಕಾಂಗ್ರೆಸ್‌ ಹಾಸನ ಜಿಲ್ಲೆಯಲ್ಲಿ ಕಳೆದ 4 ವರ್ಷಗಳ ಕಾಲ ಬರಗಾಲ ಎಂದು ಘೋಷಿಸಿದ್ದು ಬಿಟ್ಟರೆ, ರೈತರಿಗೆ, ಜನರಿಗೆ ಯಾವುದೇ ಪರಿಹಾರ ನೀಡಲಿಲ್ಲ. ಹೇಮಾವತಿ ಮತ್ತು ಯಗಚಿ ಜಲಾಶಯದಿಂದ 23 ಟಿ.ಎಂ.ಸಿ ಅಡಿ ನೀರನ್ನು ಹರಿಸಿದ್ದೇ ಇವರ ಸಾಧನೆ’ ಎಂದು ವ್ಯಂಗ್ಯವಾಡಿದರು.

ಬೇಲೂರಿನ ಯಗಚಿ ಜಲಾಶಯದಿಂದ ಹೊಳೆನರಸೀಪುರ ತಾಲ್ಲೂಕಿಗೆ ಒಂದೇ ಒಂದು ಹನಿ ನೀರು ತೆಗೆದುಕೊಂಡು ಹೋಗಿದ್ದರೂ ಅದಕ್ಕೆ ಅಡ್ಡಗಟ್ಟೆ ಹಾಕಲು ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಶಾಸಕ ಸಿ.ಟಿ.ರವಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರೆ ನಾವು ಪೊಳ್ಳಾಗುತ್ತೇವೆ. ಅವರ ಯಾವುದೇ ಆರೋಪಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.

ADVERTISEMENT

ಹಾಸನ ಜಿಲ್ಲೆಯಲ್ಲಿ ನಡೆಸುತ್ತಿರುವ ಬೆಳೆ ಸಮೀಕ್ಷೆಯನ್ನು ಜಿಲ್ಲಾಧಿಕಾರಿ ಕೂಡಲೇ ನಿಲ್ಲಿಸಬೇಕು. ಇದು ಅವೈಜ್ಞಾನಿಕ. ಮುಂಗಾರು ಬೆಳೆ ಸಂಪೂರ್ಣ ನಾಶವಾಗಿದೆ. ಆಲೂಗೆಡ್ಡೆಯನ್ನು ಕಿತ್ತಿದ್ದು, ಇಂತಹ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ನಡೆಸುವುದು ಎಷ್ಟು ಸರಿ. ಈ ಕುರಿತು ದೇವೇಗೌಡರು ಮುಖ್ಯಮಂತ್ರಿಗೆ ಪತ್ರ ಬರೆದು ‘ಬೆಳೆ ಸಮೀಕ್ಷೆ ನಡೆಸಬೇಡಿ’ ಎಂದು ಕೋರಿದ್ದಾರೆ. ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ರಾಜೀವ್‌ ಚಾವ್ಲಾ ಎಂಬು ವ್ಯಕ್ತಿಯನ್ನು ಉದ್ಧಾರ ಮಾಡಲು ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಯಕರ್ತರು ಹೇಳಿದವರಿಗೆ ಟಿಕೆಟ್‌: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾಲ್ಲೂಕಿನ ಜನತೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೂಚಿಸಿದವರಿಗೆ ಟಿಕೆಟ್‌ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ ಶಾಸಕ ರೇವಣ್ಣ ಪತ್ನಿ ಭವಾನಿ ಅಥವಾ ಪುತ್ರ ಪ್ರಜ್ವಲ್‌ ಸ್ಪರ್ಧಿಸುವ ಬಗ್ಗೆ ಯಾವುದೇ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಲಿಂಗೇಶ್‌, ತಾಲ್ಲೂಕು ಘಟಕದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯಾಧ್ಯಕ್ಷ ಬಿ.ಸಿ.ಮಂಜುನಾಥ್‌, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಎ.ನಾಗರಾಜ್‌, ಮುಖಂಡರಾದ ಗ್ರಾನೈಟ್‌ ರಾಜಶೇಖರ್‌, ವಿಷ್ಣುಕುಮಾರ್ ಇದ್ದರು.

**

600 ಬೈಕ್‌ಗಳು

ಬೇಲೂರು: ‘ಬೆಂಗಳೂರಿನಲ್ಲಿ ನ. 2ರಂದು ನಡೆಯುವ ಬಿಜೆಪಿಯ ಪರಿವರ್ತನಾ ರ‍್ಯಾಲಿಗೆ ಬೇಲೂರು ತಾಲ್ಲೂಕಿನಿಂದ 600 ಬೈಕ್‌ಗಳಲ್ಲಿ ತೆರಳಲಾಗುವುದು’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್‌ ಹೇಳಿದರು.

ಬಿಜೆಪಿ ಪರಿವರ್ತನಾ ರ‍್ಯಾಲಿಯು ಬೇಲೂರು ತಾಲ್ಲೂಕಿಗೆ ನ. 6ರಂದು ಪ್ರವೇಶಿಸಲಿದ್ದು ಅಂದು ಮಧ್ಯಾಹ್ನ 2 ಕ್ಕೆ ಹಳೇಬೀಡಿನಲ್ಲಿ ಬೃಹತ್‌ ಸಾರ್ವಜನಿಕ ಸಭೆ ನಡೆಯಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರು ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳುವುರು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬೆಣ್ಣೂರು ರೇಣುಕುಮಾರ್‌ ಮಾತನಾಡಿ ‘ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪರಿವರ್ತನಾ ರ‍್ಯಾಲಿ ನಡೆಯಲಿದೆ. ನಾಲ್ಕೂವರೆ ವರ್ಷಗಳ ಕಾಲ ರಾಜ್ಯವನ್ನಾಳಿದ ಕಾಂಗ್ರೆಸ್‌ ಪಕ್ಷದ ಲೋಪ–ದೋಷಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಪರಿವರ್ತನಾ ರ್‌್ಯಾಲಿಯನ್ನು ನಡೆಸಲಾಗುತ್ತಿದೆ’ ಎಂದರು.

ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಇ.ಎಚ್‌.ಲಕ್ಷ್ಮಣ್, ಮುಖಂಡರಾದ ಎಚ್‌.ಎಂ.ಗೋವಿಂದಪ್ಪ, ಪರ್ವತಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.