ADVERTISEMENT

ಪ್ರಜಾಪ್ರಭುತ್ವದಲ್ಲಿ ಮತದಾರರೇ ಮಹಾಪ್ರಭು

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 9:25 IST
Last Updated 11 ಜನವರಿ 2017, 9:25 IST

ಹಾಸನ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ಪ್ರಕ್ರಿಯೆ ದೊಡ್ಡ ಶಕ್ತಿ. ಇಲ್ಲಿ ಮತದಾರರೇ ಮಹಾಪ್ರಭುಗಳಾಗಿ ರುತ್ತಾರೆ ಹಾಗೂ ಪ್ರತಿಯೊಂದು ಆಗುಹೋಗುಗಳಲ್ಲಿ ನಾಗರಿಕರು ಸಕ್ರಿಯರಾಗಿ  ಪಾಲ್ಗೊಳ್ಳುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ. ಚೈತ್ರಾ ಅಭಿಪ್ರಾಯಪಟ್ಟರು.

ಭಾರತ ಚುನಾವಣಾ ಆಯೋಗ ವತಿಯಿಂದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳ ವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂತಿಮ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು.

18 ವರ್ಷ ಮೇಲಿನ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳ ಬೇಕು. ಚುನಾವಣೆಗಳಲ್ಲಿ ತಮ್ಮ ಹಕ್ಕು ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸ ಬೇಕು. ಜಿಲ್ಲೆಯ ಮತದಾರರ ಕರಡು ಪಟ್ಟಿಯನ್ನು ಡಿ. 10 ರಂದು ಪ್ರಕಟಿಸಲಾಗಿತ್ತು. ಆ ದಿನದಿಂದ ಬಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ಸರಿಪಡಿ ಸಲಾಗಿದೆ.

ಮತದಾನದ ವ್ಯವಸ್ಥೆ ಅತ್ಯಂತ ಶ್ರೇಷ್ಠವಾದದ್ದು, ಚುನಾವಣಾ ಆಯೋಗ ಪ್ರತಿ ವರ್ಷ ಜ. 25 ರಂದು ರಾಷ್ಟ್ರೀಯ ಮತದಾರರ ದಿನವೆಂದು ಆಚರಿಸಲಾ ಗುತ್ತಿದೆ. ಅದು ಮತದಾರರಿಗೆ ನೀಡುತ್ತಿರುವ ವಿಶೇಷ ಮನ್ನಣೆ ಹಾಗೂ ಚುನಾವಣಾ ವ್ಯವಸ್ಥೆಗೆ ಸಂದ ಗೌರವ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕರಿಯಪ್ಪ ಮಾತನಾಡಿ, ಮತದಾರರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಭಾರತ ಚುನಾವಣಾ ಆಯೋಗ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಆದರೆ ಇದಕ್ಕೆ ಮತದಾರರಿಂದ ಇನ್ನಷ್ಟು ಪ್ರೋತ್ಸಾಹ ಬೇಕಿದೆ ಎಂದರು.

ನಗರ ಪ್ರದೇಶಗಳ ಸುಶಿಕ್ಷಿತರು ಮತದಾರರ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದಾರೆ. ಈ ಮನೋಭಾವ ಬದಲಾಗಬೇಕು. ಈ ಬಗ್ಗೆ ಸರ್ಕಾರಿ ಇಲಾಖೆ, ಸಂಘ ಸಂಸ್ಥೆ, ರಾಜಕೀಯ ಪಕ್ಷಗಳು ಅರಿವು ಕಾರ್ಯಕ್ರಮ ಏರ್ಪಡಿಸಬೇಕು ಎಂದು ನುಡಿದರು.

ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್ ಮಾತನಾಡಿ, ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿ ಪ್ರಕಟಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾ ಗುವುದು. ಅಂತಿಮ ಮತದಾರರ ಪಟ್ಟಿಯಲ್ಲಿಯೂ ಏನಾದರು ಲೋಪ ಗಳಿದ್ದರೆ ಬೂತ್ ಮಟ್ಟದ ಅಧಿಕಾರಿಗಳು ಆ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಯನ್ನು ಆಯಾ ತಾಲ್ಲೂಕು ಚುನಾವಣಾ ವಿಭಾಗಕ್ಕೆ ತಲುಪಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ವಿನೋದ್ ಚಂದ್ರ, ತಹಶಿೀಲ್ದಾರ್ ಶಿವಶಂಕರಪ್ಪ,
ಚುನಾವಣಾ ತಹಶಿೀಲ್ದಾರ್ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.