ADVERTISEMENT

ಬರ: ಬಿಡಿಗಾಸೂ ನೀಡದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 5:45 IST
Last Updated 31 ಡಿಸೆಂಬರ್ 2016, 5:45 IST

ಹಾಸನ: ಭೀಕರ ಬರದಿಂದ ತತ್ತರಿಸಿರುವ ರಾಜ್ಯದ ಸಮಸ್ಯೆಗೆ ಸ್ಪಂದಿಸಬೇಕಿದ್ದ ಕೇಂದ್ರ ಸರ್ಕಾರ 2016–17ನೇ ಸಾಲಿನಲ್ಲಿ ಬರ ಪರಿಹಾರ ಕಾಮಗಾರಿಗೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ ಎಂದು ಉಸ್ತುವಾರಿ ಸಚಿವ ಎ.ಮಂಜು ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ₹ 4,702 ಕೋಟಿ ಬರ ಪರಿಹಾರಕ್ಕೆ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರ ಅಧ್ಯಯನ ತಂಡವು ರಾಜ್ಯದಾದ್ಯಂತ ಪ್ರವಾಸ ಮಾಡಿ ಪರಿಸ್ಥಿತಿ ಅರಿತಿದೆ. ಆದರೆ, ಇದುವರೆಗೆ ಹಣ ನೀಡಿಲ್ಲ ಎಂದರು.

2015–16ನೇ ಸಾಲಿನಲ್ಲಿ ₹ 3 ಸಾವಿರ ಕೋಟಿ ಪ್ರಸ್ತಾವ ಸಲ್ಲಿಸಿದರೆ ಕೇವಲ ₹ 1,580 ಕೋಟಿ ಮಾತ್ರ ನೀಡಿದರು. ಆ ಹಣ ಸಂಪೂರ್ಣ ಬಳಕೆಯಾಗಿದ್ದು, ಮಾಜಿ ಮಂತ್ರಿ ಆರ್. ಅಶೋಕ್ ಅವರು ಮಾಹಿತಿ ಕೊರತೆಯಿಂದ ತಪ್ಪು ಹೇಳಿಕೆ ನೀಡಿದ್ದಾರೆ ಎಂದರು.

ಬೇರೆ ಎಲ್ಲ ರಾಜ್ಯಗಳಿಗೆ ಅಧಿಕ ಅನುದಾನ ನೀಡುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕವನ್ನು ಕಡೆಗಣಿಸು ತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ತಲೆದೋರಿರುವ ಬರ ನಿಭಾಯಿಸಲು ಜಿಲ್ಲಾಡಳಿತ ಎಲ್ಲ ಕ್ರಮ ಕೈಗೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಕೆಗೆ ₹ 35 ಲಕ್ಷ ಹಾಗೂ ₹ 60 ಲಕ್ಷ ಬಿಡುಗಡೆ ಮಾಡಿದೆ. ಶಾಸಕರ ಶಾಶ್ವತ ಪರಿಹಾರ ನಿಧಿಯಡಿ ₹ 50 ಲಕ್ಷ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡಲು ರಾಜ್ಯ ಸರ್ಕಾರ ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.

ಅರಸೀಕೆರೆ ತಾಲ್ಲೂಕಿನ 68, ಚನ್ನರಾಯಪಟ್ಟಣದ 17, ಬೇಲೂರಿನ 1 ಹಾಗೂ ಅರಕಲಗೂಡು ತಾಲ್ಲೂಕಿನ 14 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 103 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮುನ್ಸೂಚನೆ ಇದ್ದು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ  ಎಂದು ಹೇಳಿದರು.

ಜಿಲ್ಲೆಯಾದ್ಯಂತ 244 ಟ್ಯಾಂಕ ರ್‌ಗಳು ನೀರು ಸರಬರಾಜು ಪ್ರಕ್ರಿ ಯೆಯಲ್ಲಿ ತೊಡಗಿವೆ. ಅರಸೀಕೆರೆ ತಾಲ್ಲೂಕಿನಲ್ಲಿ 6 ಗೋಶಾಲೆ ತೆರೆಯ ಲಾಗಿದೆ. ಮುಂದಿನ 90 ದಿನಗಳ ತನಕ ಯಾವ ತಾಲ್ಲೂಕಿನಲ್ಲೂ ಜಾನುವಾರುಗಳಿಗೆ ಮೇವಿನ ಕೊರತೆ ಕಾಡುವುದಿಲ್ಲ. ಮೇವು ಪೂರೈಕೆಗಾಗಿ ಪ್ರತಿ ತಾಲ್ಲೂಕಿಗೆ ₹ 10 ಲಕ್ಷ ಅನುದಾನ ನೀಡಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 1,66,176 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದೆ. ಬೆಳೆ ಪರಿಹಾರಕ್ಕಾಗಿ ₹ 44 ಕೋಟಿ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದರು.

ಕಣ್ಣೊರೆಸುವ ತಂತ್ರ: ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್‌ ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಪಾವತಿಸಲಾಗುವುದು ಎಂದು ಹೇಳಿದ್ದ ಪ್ರಧಾನಿ ಮೋದಿ ಈಗ ಗರಿಷ್ಠ ಮೌಲ್ಯದ ನೋಟುಗಳ ಚಲಾವಣೆ ರದ್ದು ಮಾಡುವ ಮೂಲಕ ಕೋಟ್ಯಂತರ ಜನರ ಭಾವನೆಗಳಿಗೆ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಮಂಜು ಟೀಕಿಸಿದರು.

ಭ್ರಷ್ಟಾಚಾರ ನಿಯಂತ್ರಣವೇ ಕೇಂದ್ರ ಸರ್ಕಾರ ಉದ್ದೇಶವಾಗಿದ್ದರೆ ಉದ್ಯಮಿಗಳ ವಿರುದ್ಧ ಕ್ರಮ ಜರುಗಿಸಬೇಕು. ವಿದೇಶದಲ್ಲಿ ಸಂಗ್ರಹವಾಗಿರುವ ಹಣ ವಾಪಸ್ ತರಬೇಕಿತ್ತು ಎಂದರು.

ಆದರೆ ನರೇಂದ್ರ ಮೋದಿ ಅವರಿಗೆ ದೇಶದ ಅಭಿವೃದ್ಧಿಗಿಂತ ಬಂಡವಾಳ ಶಾಹಿಗಳ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ಟೀಕಿಸಿದೆ.

ಹಿಟ್‌ ಅಂಡ್‌ ರನ್‌ ಗೊತ್ತಿಲ್ಲ
ಹಾಸನ: ‘ಶಾಸಕ ಎಚ್.ಎಸ್. ಪ್ರಕಾಶ್ ಸಹೋದರರು ಹುಣಸಿನಕೆರೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಮಾತಿಗೆ ನಾನು ಇಂದಿಗೂ ಬದ್ಧನಾಗಿದ್ದೇನೆ, ಎರಡು ದಿನಗಳಲ್ಲಿ ಎಲ್ಲವನ್ನು ಬಹಿರಂಗ ಪಡಿಸುತ್ತೇನೆ. ಇತರರಂತೆ ಹಿಟ್‌ ಅಂಡ್‌ ರನ್ ತಂತ್ರ ನನಗೆ ಗೊತ್ತಿಲ್ಲ’ ಎಂದು ಉಸ್ತುವಾರಿ ಸಚಿವ ಎ. ಮಂಜು ಹೇಳಿದರು.

ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ತಮ್ಮ ಮೇಲೆ ಬಂದಿರುವ ಆರೋಪದ ತನಿಖೆಗೆ ಆಗ್ರಹಿಸಿ ಶಾಸಕ ಪ್ರಕಾಶ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೆ, ಆ ಪ್ರತಿ ನನಗೆ ಕೊಡಿ, ಕೇವಲ ಕೆರೆ ಒತ್ತುವರಿ ಮಾತ್ರವಲ್ಲ, ಇನ್ನು ಸಾಕಷ್ಟು ಹಗರಣಗಳಿವೆ. ಕೆಲವೇ ದಿನಗಳಲ್ಲಿ ಎಲ್ಲವನ್ನು ಬಹಿರಂಗಪಡಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT