ADVERTISEMENT

ಬಿರುಕು ಬಿಟ್ಟ ಕೆರೆ–ಕಟ್ಟೆಗಳು

ಎಲ್ಲೆಲ್ಲೂ ಬರದ ಛಾಯೆ, ನೀರಿಗಾಗಿ ಪರದಾಡುತ್ತಿವೆ ಪ್ರಾಣಿ ಪಕ್ಷಿಗಳು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 9:49 IST
Last Updated 28 ಫೆಬ್ರುವರಿ 2017, 9:49 IST
ಅರಸೀಕೆರೆ ನಗರದ ಹೊರ ಭಾಗದಲ್ಲಿರುವ ಕಂತೇನಹಳ್ಳಿ ದೊಡ್ಡಕೆರೆಯ ಅಂಗಳದಲ್ಲಿ ನೀರಿಲ್ಲದೆ ನೆಲ ಬಿರುಕು ಬಿಟ್ಟಿರುವ ದೃಶ್ಯ
ಅರಸೀಕೆರೆ ನಗರದ ಹೊರ ಭಾಗದಲ್ಲಿರುವ ಕಂತೇನಹಳ್ಳಿ ದೊಡ್ಡಕೆರೆಯ ಅಂಗಳದಲ್ಲಿ ನೀರಿಲ್ಲದೆ ನೆಲ ಬಿರುಕು ಬಿಟ್ಟಿರುವ ದೃಶ್ಯ   

ಅರಸೀಕೆರೆ: ಬಿರುಕು ಬಿಟ್ಟು ಭಣಗುಡುವ ಕೆರೆ–ಕಟ್ಟೆಗಳು, ಬಾಯಾರಿದ ಪ್ರಾಣಿ, ಪಕ್ಷಿಗಳು, ಹನಿ ನೀರಿಗಾಗಿ ಜನತೆ ಪರದಾಡುತ್ತಿರುವ ಘೋರ ಸನ್ನಿವೇಶ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತಿದೆ.

ತಾಲ್ಲೂಕಿನ ಕಣಕಟ್ಟೆ, ಗಂಡಸಿ, ಕಸಬಾ ಬಾಣಾವರ ಹಾಗೂ ಜಾವಗಲ್‌ ಹೋಬಳಿಯ ಯಾವ ಕೆರೆ–ಕಟ್ಟೆಗಳ ಒಡಲಲ್ಲೂ ನೀರಿಲ್ಲ. ದನ, ಕರುಗಳಿಗೆ ಕುಡಿಯುವ ನೀರನ್ನು ಮನೆಯಲ್ಲಿಯೇ ಸಂಗ್ರಹಿಸಿ ಪೂರೈಸಬೇಕು, ಉಳಿದ ಪ್ರಾಣಿ–ಪಕ್ಷಿಗಳ ಸ್ಥಿತಿ ಶೋಚನೀಯವಾಗಿದೆ.

ಮರೆಯಾದ ವೈಭವ: ಎರಡು ದಶಕಗಳ ಹಿಂದೆ ಪೂರ್ಣ ಪ್ರಮಾಣದ ಮಳೆ ಬೀಳುತ್ತಿದ್ದ ಕಾಲದಲ್ಲಿ ಕೆರೆಗಳ ಸುತ್ತಲಿನ ಸೌಂದರ್ಯ ಅವರ್ಣನೀಯವಾಗಿತ್ತು. ಧುತ್ತೆಂದು ಸುರಿದ ಹಿಂಗಾರು ಮಳೆಗೆ ರಾತ್ರಿ ಬೆಳಗಾಗುವಷ್ಟರಲ್ಲಿ ಕೆರೆಗಳು ಭರ್ತಿಯಾಗಿರುತ್ತಿದ್ದವು.

ADVERTISEMENT

ಹೆಚ್ಚುವರಿ ನೀರು ಕೆರೆ ಕೋಡಿಗಳಲ್ಲಿ ಹರಿವ ದೃಶ್ಯ ನಯನ ಮನೋಹರವಾಗಿರುತ್ತಿತ್ತು. ಮೊಳಕಾಲು ಉದ್ದದ ನೀರಿನಲ್ಲಿ ನಡೆದಾಡುವ ಖುಷಿ, ಕೆರೆ ದಂಡೆಯಲ್ಲಿ ಹಾರಾಡುವ ವೈವಿಧ್ಯಮಯ ಹಕ್ಕಿ, ಪಕ್ಷಿಗಳು ನೀರ ಮೇಲೆ ಹಾರಿ ಮೀನು ಹೆಕ್ಕುವ ನೋಟ, ತಂಗಾಳಿಗೆ ಕೆರೆ ಅಲೆಗಳ ನವಿರಾದ ಚಲನೆ. ಅಲ್ಲದೆ ಕೆರೆ ನೀರಿನಲ್ಲಿ ದನಕರುಗಳ ಮೈತೊಳೆಯುವ ದೃಶ್ಯ ಕಂಡು ಬರುತ್ತಿತ್ತು.

ದೃಷ್ಟಿ ಹಾಯಿಸಿದಷ್ಟು ದೂರದವರೆಗೆ ಹಸಿರು ಹೊದ್ದಂತಿರುತ್ತಿತ್ತು. ಹಳ್ಳಿ ಹೈಕಳು ಹರಿಯುವ ನೀರಿನಲ್ಲಿನ ಆಟವಾಡುತ್ತಿದ್ದ ದೃಶ್ಯಗಳು ಈಗ ನೆನಪಿಗಷ್ಟೇ ಸೀಮಿತವಾಗಿದೆ ಎನ್ನುತ್ತಾರೆ ಡಿ.ಎಂ.ಕುರ್ಕೆ ಗ್ರಾಮದ ವೃದ್ಧ ರೈತರಾದ ರುದ್ರಪ್ಪ ಹಾಗೂ ಡಿ.ಸಿ.ಮಲ್ಲಪ್ಪ.

ರೈತರ ಸಂಕಷ್ಟ: ಇಂದು ಕೆರೆಗಳಲ್ಲಿ ಜೆಸಿಬಿ ಇಳಿಸಿ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ತುಂಬಿಸುವುದನ್ನಷ್ಟೇ ನೋಡಲು ಸಾಧ್ಯ. ಕೆರೆಗಳಲ್ಲಿ ಬಿರುಕು ಬಿಟ್ಟ ನೆಲವೇ ಸಧ್ಯದ ಚಿತ್ರಣ. ಅಂತರ್ಜಲ ಕುಸಿತದಿಂದಾಗಿ ಕೊಳವೆ ಬಾವಿಗಳು ಕೈಕೊಟ್ಟಿವೆ. ರೈತರು ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಈಗಷ್ಟೇ ಬಿಸಿಲಿನ ತಾಪ ಏರುಗತಿಯಲ್ಲಿದೆ. ಮಾರ್ಚ್‌–ಏಪ್ರಿಲ್‌ ವೇಳೆಗೆ ಇನ್ನೇನು ಕಾದಿದೆಯೋ ಎಂಬ ಆತಂಕದ ಮಾತುಗಳು ಎಲ್ಲೆಲ್ಲಿಯೂ ಕೇಳಿ ಬರುತ್ತಿವೆ.

ಎತ್ತಿನ ಹೊಳೆ ಯೋಜನೆಯತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ತಾಲ್ಲೂಕಿನ ಗ್ರಾಮೀಣ ಭಾಗದ ಕೆರೆ ತುಂಬಿಸುವ ಯೋಜನೆ ಇದಾಗಿದ್ದು, ಈ ಯೋಜನೆ ಯಾವಾಗ ಕಾರ್ಯರೂಪಕ್ಕೆ ಬರುತ್ತಿದೆ ಎನ್ನುವ ತವಕ ಎಲ್ಲರಲ್ಲಿದೆ.

ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವ ಮಳೆಯ ಮೇಲೆ ಭರವಸೆ ಕುಸಿದಿದೆ. ಸರ್ಕಾರ ಅಥವಾ ಗುತ್ತಿಗೆದಾರರು ವಿಳಂಬ ನೀತಿ ಅನುಸರಿಸದೇ ಶೀಘ್ರವಾಗಿ ಕಾಮಗಾರಿ ಮುಗಿಸಿದರೆ ಜನರಲ್ಲಿ ತುಸು ನಿರಾಳತೆ ಮೂಡಲು ಸಾಧ್ಯ ಎನ್ನುತ್ತಾರೆ ಶಾಸಕ ಕೆ.ಎಂ.ಶಿವಲಿಂಗೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.