ADVERTISEMENT

ಭ್ರಷ್ಟಾಚಾರದ ಪಾಪ ತೊಳೆದುಕೊಳ್ಳಲು ಯಾತ್ರೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 6:54 IST
Last Updated 4 ನವೆಂಬರ್ 2017, 6:54 IST
ರೇವಣ್ಣ
ರೇವಣ್ಣ   

ಅರಸೀಕೆರೆ: ‘ಬಿಜೆಪಿ ಅಧಿಕಾರವಧಿಯಲ್ಲಿ ನಡೆಸಿದ ಭ್ರಷ್ಟಾಚಾರ ಪಾಪ ತೊಳೆದುಕೊಳ್ಳಲು ಪರಿವರ್ತನಾ ಯಾತ್ರೆ ನಡೆಸುತ್ತಿದೆ’ ಎಂದು ಶಾಸಕ ಎಚ್‌.ಡಿ ರೇವಣ್ಣ ವ್ಯಂಗ್ಯವಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಜನರು ಬಿ.ಜೆ.ಪಿ, ಕಾಂಗ್ರೆಸ್‌ ಆಡಳಿತಕ್ಕೆ ಬೇಸತ್ತಿದ್ದಾರೆ.

ಮೂರು ವರ್ಷಗಳಿಂದ ಬರಗಾಲ ಉಂಟಾಗಿ ಜನರು ಸಂಕಷ್ಟದಲ್ಲಿದ್ದಾರೆ. ಅರಸೀಕೆರೆ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಅಲೂಗೆಡ್ಡೆ ಮತ್ತು ಅಡಿಕೆ, ತೆಂಗಿನ ಮರಗಳು ನಾಶ ವಾಗಿವೆ’ ಎಂದರು. ರಾಗಿ ಹಾಗೂ ಮೆಕ್ಕೆ ಜೋಳ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸುವಲ್ಲಿ ಸಂಪೂರ್ಣ ವಿಫಲವಾಗಿವೆ’ ಎಂದು ಆರೋಪಿಸಿದರು.

ಬಿಜೆಪಿ, ಕಾಂಗ್ರೆಸ್‌ 150 ಸ್ಥಾನ ಗೆಲ್ಲುವುದಾಗಿ ಹೇಳುತ್ತಿವೆ. ಜೆಡಿಎಸ್‌ 113 ಸ್ಥಾನ ಪಡೆದು ಸರ್ಕಾರ ರಚಿಸಲಿದೆ.  ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

‘ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು.
ಈಗಾಗಲೇ 140 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದ್ದು, ವಾರದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದು ಅವರು ಹೇಳಿದರು.

‘ಕುಮಾರಸ್ವಾಮಿ ಮತ್ತು ನಾನು ಮಾತ್ರ ಕಣಕ್ಕೆ ಇಳಿಯುತ್ತಿದ್ದೇವೆ. ಪ್ರಜ್ವಲ್‌ಗೆ ಮುಂದೆ ಅವಕಾಶ ದೊರೆಯುತ್ತದೆ. ಆತ ತಾಳ್ಮೆಯಿಂದ ಕಾಯಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ, ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾಬಾಯಿ, ಉಪಾಧ್ಯಕ್ಷ ಬಸವಲಿಂಗಪ್ಪ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್‌, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಬಿಳಿಚೌಡಯ್ಯ, ಕಾರ್ಯದರ್ಶಿ ಸುಬ್ರಮಣ್ಯಬಾಬು, ಮುಖಂಡರಾದ ಧರ್ಮಶೇಖರ್‌, ಧರ್ಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.