ADVERTISEMENT

ಮಳೆಗಾಗಿ ಲಿಂಗಕ್ಕೆ ‘ಗುಟುಕು ನೀರು’

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 9:41 IST
Last Updated 22 ಜುಲೈ 2017, 9:41 IST

ಬೇಲೂರು: ಮಳೆಗಾಗಿ ಪ್ರಾರ್ಥಿಸಿ ಇಲ್ಲಿನ ಪುರಾತನ ಶಂಕರಲಿಂಗೇಶ್ವರ ದೇಗುಲದಲ್ಲಿ ಶುಕ್ರವಾರ ಶಿವಲಿಂಗವನ್ನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸಿ ಲಿಂಗಕ್ಕೆ ಗುಟುಕು ನೀರು ಕುಡಿಸಲಾಯಿತು. ಬಳಿಕ ನೆರೆದಿದ್ದ ಭಕ್ತರು ವರುಣನ ಜಲಾಧಿಪತಿಯಾದ ಪರ್ಜನ್ಯನನ್ನು ಜಪಿಸಿದರು.

ಮೂರು ವರ್ಷ ಸತತ ಬರಗಾಲ ಬಂದಿರುವುದರಿಂದ ಇಲ್ಲಿನ ಶಂಕರಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿ ಸೋಮವಾರದಿಂದ ಶುಕ್ರವಾರದವರೆಗೆ ಪರ್ಜನ್ಯ ಜಪ ಮತ್ತು ಶಂಕರಲಿಂಗನಿಗೆ ಗುಟುಕು ನೀರು ಕುಡಿಸುವ ಧಾರ್ಮಿಕ ಕಾರ್ಯವನ್ನು ಹಮ್ಮಿಕೊಂಡಿತ್ತು.

ಧಾರ್ಮಿಕ ಕಾರ್ಯದಲ್ಲಿ 25 ಅರ್ಚಕರು ಪಾಲ್ಗೊಂಡಿದ್ದರು. ಅಂತಿಮ ದಿನವಾದ ಶುಕ್ರವಾರ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹನ್ಯಾಸ ಪಾರಾಯಣಗಳು ನಡೆದವು. ಬಳಿಕ ಶಿವಲಿಂಗದ ಸುತ್ತ ಕಟ್ಟೆಯನ್ನು ಕಟ್ಟಿ ನೀರು ತುಂಬಿಸಿ ಗುಟುಕು ನೀರು ಕುಡಿಸಲಾಯಿತು.

ADVERTISEMENT

‘ಗರ್ಭಗೃಹದಲ್ಲಿ ನೀರು ತುಂಬಿಸಿ ಶಿವಲಿಂಗವನ್ನು ಅದರಲ್ಲಿ ಮುಳುಗಿಸಿ ಉಸಿರುಕಟ್ಟಿಸಿ ಮೂಗಿನಲ್ಲಿ ನೀರು ಕುಡಿಸುವುದಕ್ಕೆ ಗುಟುಕು ನೀರು ಕುಡಿಸುವುದು ಎನ್ನಲಾಗುತ್ತದೆ. ಮಳೆ ಬರುವವರೆಗೆ ಲಿಂಗವನ್ನು ನೀರಿನಲ್ಲಿ ಮುಳುಗಿಸಿ ಉಸಿರು ಕಟ್ಟಿಸಿದಾಗ ಈಶ್ವರ ಮಳೆ ಸುರಿಸುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ’ ಎಂದು ಸಂಶೋಧಕ ಶ್ರೀವತ್ಸ ಎಸ್‌.ವಟಿ ತಿಳಿಸಿದರು.

ಶಿವಲಿಂಗಕ್ಕೆ ಗುಟುಕು ನೀರು ಕುಡಿಸಿದ ಬಳಿಕ ಭಕ್ತರು ಪೂರ್ವಾಭಿ ಮುಖವಾಗಿ ನಿಂತು ವರುಣನ ಜಲಾಧಿಪತಿಯಾದ ಪರ್ಜನ್ಯನನ್ನು 11 ಬಾರಿ ಕೂಗುವ ಮೂಲಕ ಪರ್ಜನ್ಯ ಜಪ ಮಾಡಿದರು. ಪೂಜಾ ಕಾರ್ಯಗಳ ಬಳಿಕ ಮಾತನಾಡಿದ ವೇ.ಬ್ರ. ಕೆ.ಆರ್‌. ಮಂಜು ನಾಥ್‌, ‘ಐದು ವರ್ಷಗಳ ಹಿಂದೆ ಇದೇ ರೀತಿ ಬರಗಾಲದ ಸ್ಥಿತಿ ನಿರ್ಮಾಣ ವಾದಾಗ ಶಂಕರಲಿಂಗಕ್ಕೆ ಗುಟುಕು ನೀರು ಕುಡಿಸಲಾಗಿತ್ತು. ಆಗ ಮಳೆ ಸುರಿದು ಭೂಮಿ ತಂಪಾಗಿತ್ತು’ ಎಂದರು.

ಸಮಿತಿಯ ನಿಂಗೇಗೌಡ, ಆನಂದ್‌, ಇಂದಿರಮ್ಮ, ಬಿ.ಆರ್‌.ರುದ್ರಶೆಟ್ಟಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಪುರಸಭೆ ಅಧ್ಯಕ್ಷೆ ಕೆ.ಎಸ್‌.ಉಮಾ (ಮುದ್ದಮ್ಮ), ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.