ADVERTISEMENT

ಮಳೆ, ಗಾಳಿ: 291 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 7:21 IST
Last Updated 13 ಏಪ್ರಿಲ್ 2017, 7:21 IST
ಅರಕಲಗೂಡು ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಬಿದ್ದ ಮಳೆ, ಬಿರುಗಾಳಿಗೆ ಮನೆಯೊಂದರ ಚಾವಣಿ ಕುಸಿದು ಬಿದ್ದಿರುವುದು (ಚಿತ್ರ 1)
ಅರಕಲಗೂಡು ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಬಿದ್ದ ಮಳೆ, ಬಿರುಗಾಳಿಗೆ ಮನೆಯೊಂದರ ಚಾವಣಿ ಕುಸಿದು ಬಿದ್ದಿರುವುದು (ಚಿತ್ರ 1)   

ಅರಕಲಗೂಡು: ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಬಿದ್ದ ಮಳೆ ಮತ್ತು ಭಾರಿ ಬಿರುಗಾಳಿಗೆ ನೂರಾರು ಮನೆಗಳಿಗೆ ಹಾನಿಯಾಗಿದೆಯಲ್ಲದೆ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.ಬರಗಾಲದ ಬವಣೆಯಿಂದ ನರಳುತ್ತಿದ್ದ ರೈತರಿಗೆ ಈಗ ಸಂಭವಿಸಿರುವ ಹಾನಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಸಬಾ ಹೋಬಳಿಯೊಂದರಲ್ಲೇ 291 ಮನೆಗಳಿಗೆ ಹಾನಿ ಸಂಭವಿಸಿದ್ದು ಸುಮಾರು ₹ 14 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 51 ಎಕರೆ ಪ್ರದೇಶದಲ್ಲಿ ತೆಂಗು, ಅಡಿಕೆ, ಬಾಳೆ, ವೀಳ್ಯದೆಲೆ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿದ್ದು ₹ 17 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.ಕಸಬಾ ಹೋಬಳಿಯ ಬೈಚನಹಳ್ಳಿ ಭಾಗದಲ್ಲಿ ಅತ್ಯಂತ ಹೆಚ್ಚಿನ ಹಾನಿ ಸಂಭವಿಸಿದೆ.

ನೆಲಮನೆ ಗ್ರಾಮದಲ್ಲಿ 4ರಿಂದ 5ಮನೆಗಳ ಹೆಂಚು, ಶೀಟು ಹಾರಿ ಹೋಗಿವೆ. ಚಿಕ್ಕಗಾವನಹಳ್ಳಿ ಗ್ರಾಮದಲ್ಲಿ 6 ಮನೆಗಳಿಗೆ ಹಾನಿಯಾಗಿದೆ. ಅಶೋಕ ಎಂಬುವವರ ಮನೆಯ ಶೀಟುಗಳೆಲ್ಲವೂ ಹಾರಿ ಹೋಗಿವೆ. ಇದೇ ಗ್ರಾಮದ ಹೊನ್ನಗಿರಿಗೌಡ ಎಂಬುವವರ ಹಿಟ್ಟಿನ ಗಿರಣಿಯ ಶೀಟ್‌ಗಳು ಹಾರಿ ಹೋಗಿ ಯಂತ್ರಗಳಿಗೆ ಹಾನಿಯಾಗಿದೆ. ಪುಟ್ಟಸ್ವಾಮಿಗೌಡ ಅವರ ತೋಟದಲ್ಲಿ 40 ಅಡಿಕೆ ಮರಗಳು ಗಾಳಿಗೆ ಉರುಳಿ ಬಿದ್ದಿವೆ. ವೀಳ್ಯದೆಲೆ ಹಂಬುಗಳು ಹಾನಿಗೊಳಗಾಗಿವೆ.

ADVERTISEMENT

ಬೈಚನಹಳ್ಳಿ ಗ್ರಾಮದಲ್ಲಿ ಕುಮಾರ ಎಂಬುವವರ ಮನೆಯ ಎಲ್ಲ ಶೀಟ್‌ಗಳೂ ಗಾಳಿಗೆ ಹಾರಿ ಹೋಗಿವೆ. ಮಂಜೇಗೌಡ ಎಂಬುವವರ ತೋಟದಲ್ಲಿ 25 ಅಡಿಕೆಮರಗಳು ಉರುಳಿ ಬಿದ್ದಿವೆ. ಗ್ರಾಮದ ಹಲವು ಮನೆಗಳ ಹೆಂಚು, ಶೀಟುಗಳು ಹಾರಿ ಹೋಗಿವೆ. ಚಿಕ್ಕನಹಳ್ಳಿ ಗ್ರಾಮದಲ್ಲಿ ನಾಗರಾಜು ಎಂಬುವವರ 10 ತೆಂಗಿನ ಮರಗಳು ಉರುಳಿ ಬಿದ್ದಿವೆ. ಈ ಗ್ರಾಮದಲ್ಲಿ ಸುಮಾರು 25 ಮನೆಗಳ ಹೆಂಚುಗಳು, ಶೀಟುಗಳು ಹಾರಿ ಹೋಗಿವೆ. ಹುಲ್ಲಂಗಾಲ ಗ್ರಾಮದಲ್ಲಿ 10 ರಿಂದ 15 ಮನೆಗಳಿಗೆ ಹಾನಿಯಾಗಿದೆ. ಮರೀಗೌಡ ಅವರ ನರ್ಸರಿಯ ಟಾರ್ಪಲ್ ಹಾರಿ ಹೋಗಿ ಗಿಡಗಳಿಗೆ ಹಾನಿಯಾಗಿದೆ.  ಭಾರಿ ಗಾತ್ರದ ಮರಗಳು, 40 ರಿಂದ 50 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಮಲ್ಲಿಪಟ್ಟಣ ಹೋಬಳಿಯ ಎಬಿಎಂ ಹಳ್ಳಿ ಗ್ರಾಮದಲ್ಲಿ ನಾಸಿರ್‌ ಅಹಮದ್‌ ಎಂಬುವವರ ಜನತಾ ಮನೆಯ ಶೀಟುಗಳೆಲ್ಲ ಗಾಳಿಗೆ ಸಂಪೂರ್ಣ ಹಾರಿ ಹೋಗಿವೆ ಎಂದು ಕಂದಾಯ ನಿರೀಕ್ಷಕ ಸಣ್ಣೇಗೌಡ ತಿಳಿಸಿದರು.ತಾಲ್ಲೂಕಿನಲ್ಲಿ ಮಳೆ ಮತ್ತು ಗಾಳಿಯಿಂದ ಆಗಿರುವ ನಷ್ಟದ ಅಂದಾಜು ನಡೆಸಲಾಗುತ್ತಿದೆ ಎಂದು ತಹಶೀಲ್ದಾರ್ ಪ್ರಸನ್ನಮೂರ್ತಿ ತಿಳಿಸಿದರು.

ಸ್ಥಳಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದಲೇ ಹಾನಿ ಸಂಭವಿಸಿರುವ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಅವರು ತಿಳಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಯೋಗಾರಮೇಶ್, ಜಿ.ಪಂ.ಸದಸ್ಯೆ ರತ್ನಮ್ಮ ಲೋಕೇಶ್‌, ತಾ.ಪಂ. ಸದಸ್ಯ ಮರೀಗೌಡ ನಷ್ಟ ಎದುರಿಸಿದ ಜನರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.