ADVERTISEMENT

ಮುಸುಕಿನ ಜೋಳದ ಜೊತೆ ತೊಗರಿ ಬೆಳೆಯಿರಿ

​ಪ್ರಜಾವಾಣಿ ವಾರ್ತೆ
Published 21 ಮೇ 2018, 12:46 IST
Last Updated 21 ಮೇ 2018, 12:46 IST

ಹಾಸನ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 82 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಮುಸುಕಿನ ಜೋಳ ಬೆಳೆಯಲಿದ್ದು, ಈ ಬೆಳೆ 115–120 ದಿನಗಳಲ್ಲಿ ಕಟಾವಿಗೆ ಬರುತ್ತವೆ. ಹೆಕ್ಟೇರ್‌ಗೆ ಸರಾಸರಿ 35–40 ಕ್ವಿಂಟಲ್ ಇಳುವರಿ ಇರುತ್ತದೆ.

ಮುಸುಕಿನ ಜೋಳದ ಬಿತ್ತನೆ ಮೇ ತಿಂಗಳ ಕೊನೆಯಲ್ಲಿ ನಡೆಯಲಿದ್ದು, ಬಿತ್ತನೆ ಪೂರ್ವದಲ್ಲಿ ಕೆ.ಜಿ.ಗೆ 4 ಗ್ರಾಂನಂತೆ ‘ಟ್ರೈಕೊಡರ್ಮಾ ವಿರಿಡೆ’ ಎಂಬ ಪೀಡೆನಾಶಕದಿಂದ ಬೀಜೋಪಚಾರ ಮಾಡಿದ್ದಲ್ಲಿ ಬುಡ ಕೊಳೆ ರೋಗ ಮತ್ತು ಮಣ್ಣಿನಿಂದ ಬರುವ ರೋಗಗಳನ್ನು ನಿಯಂತ್ರಿಸಬಹುದು ಎಂದು ಕೃಷಿ ಇಲಾಖೆಯು ಸಲಹೆ ಮಾಡಿದೆ.

ಅಲ್ಲದೆ, ಅಜೋಸ್ಪೈರಿಲಂನಿಂದ (500 ಗ್ರಾಂ/6 ಕೆ.ಜಿ) ಬೀಜೋಪಚಾರ ಮಾಡಿದರೆ ಗೊಬ್ಬರದಲ್ಲಿ ಶೇ 25ರಷ್ಟು ಸಾರಜನಕ ಉಳಿಸಬಹುದು. ಮುಖ್ಯವಾಗಿ ತೊಗರಿಯನ್ನು 6:2 ಅಥವಾ 8:2 ಅನುಪಾತದ ಅಂತರದಲ್ಲಿ ಬೆಳೆದರೆ ಹೆಕ್ಟೇರ್‌ಗೆ ಸುಮಾರು 3–4 ಕ್ವಿಂಟಲ್‌ನಷ್ಟು ತೊಗರಿಯಲ್ಲಿ ಇಳುವರಿ ಪಡೆಯಬಹುದು.

ADVERTISEMENT

ತೊಗರಿಯನ್ನು ಅಂತರ ಬೆಳೆಯಾಗಿ ಮುಸುಕಿನ ಜೋಳ, ಆಲೂಗಡ್ಡೆ, ನೆಲಗಡಲೆ, ಉದ್ದು, ಹೆಸರು, ಅಲಸಂದೆ, ರಾಗಿ ಜೊತೆಗೆ ಬೆಳೆಯಬಹುದು. ಅಂತರ ಬೆಳೆ ಕ್ರಮ ಅನುಸರಿಸಲು ಪ್ರತ್ಯೇಕವಾದ ಬೇಸಾಯ ಕ್ರಮ ಗಳ, ರಸಗೊಬ್ಬರ ಅಗತ್ಯವಿಲ್ಲ.

ತೊಗರಿ ಜೊತೆ ಮಿಶ್ರ ಬೆಳೆಯಾಗಿ ಹಾಗೂ ಬೆಳೆ ಪರಿವರ್ತನೆ ಕ್ರಮ ಅನುಸರಿಸಿದರೆ ಆದಾಯದ ಜೊತೆಗೆ ಭೂಮಿ ಫಲವತ್ತತೆ ಹೆಚ್ಚಲಿದೆ. ಹವಾಮಾನ ವೈಪರೀತ್ಯದಿಂದಾಗಿ ಮುಖ್ಯ ಬೆಳೆಯಲ್ಲಿ ನಷ್ಟವಾದಲ್ಲಿ ಮತ್ತೊಂದು ಬೆಳೆಯಿಂದ ಆದಾಯ ಪಡೆಯಲು ಸಾಧ್ಯವಾಗುತ್ತದೆ.

ಬೇಳೆಕಾಳು ಬೆಳೆಯಲ್ಲಿ ಬೆಳೆ ಕೊಯ್ಲು ನಂತರ ದೊರಕುವ ಎಲೆ, ತರಗು, ಕೂಳೆ ಇತ್ಯಾದಿ ಮಣ್ಣಿನಲ್ಲಿ ಸೇರಿ ಸಾವಯವ ಇಂಗಾಲ ವೃದ್ಧಿಸುತ್ತದೆ. ಬೇಳೆಕಾಳುಗಳ ಬೆಳೆಯಲ್ಲಿ ತಾಯಿ ಬೇರುಗಳಿದ್ದು, ಇವು ತೇವಾಂಶದ ಜತೆಗೆ ಪೋಷಕಾಂಶ ಹೀರಿ ಬೆಳೆಯುವುದರಿಂದ ಶುಷ್ಕ ವಾತಾವರಣ ತಡೆದುಕೊಳ್ಳುವ ಶಕ್ತಿ ಇರುತ್ತದೆ.

ಅಂತರ ಬೆಳೆ ಪದ್ಧತಿ ಕುಟುಂಬದ ಆರ್ಥಿಕ ನಿರ್ವಹಣೆಗೆ ಸಹಕಾರಿ. ಅಂತರ ಬೆಳೆ ಪದ್ಧತಿಯಿಂದ ರೋಗ, ಕೀಟಗಳ ಹರಡುವಿಕೆ ಕಡಿಮೆಯಾಗುತ್ತದೆ.

ಈಚಿನ ದಿನಗಳಲ್ಲಿ ಸಾವಯವ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಕೆ ಮುಸುಕಿನ ಜೋಳಕ್ಕೆ ಕಡಿಮೆಯಾಗುತ್ತಿದೆ. ಅಲ್ಲದೆ ಜಿಂಕ್‌ನ ಕೊರತೆ ಕಾಣುತ್ತಿದ್ದು, ಮಣ್ಣು ಪರೀಕ್ಷೆ ಫಲಿತಾಂಶದ ಆಧಾರದಲ್ಲಿ ಎಕರೆಗೆ 5 ಕೆ.ಜಿ. ಯಂತೆ ಜಿಂಕ್ ಸಲ್ಫೇಟ್ ಬಳಸಬಹುದಾಗಿದೆ.

ಇವು ಶೇ 50ರ ರಿಯಾಯಿತಿ ದರದಲ್ಲಿ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. ರೈತರು ತೊಗರಿ ಹಾಗೂ ಜಿಂಕ್ ಸಲ್ಫೇಟ್‌ನ ಸದುಪಯೋಗ ಪಡೆಯಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.