ADVERTISEMENT

ಮೇವು ಕೊರತೆಯಾಗದಂತೆ ಎಚ್ಚರ ವಹಿಸಿ

ಮೇವು ಪಡೆಯುವುದಕ್ಕಾಗಿ ರೈತರಲ್ಲಿ ಗೊಂದಲ: ಶಾಸಕ ಶಿವಲಿಂಗೇಗೌಡ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:46 IST
Last Updated 11 ಮಾರ್ಚ್ 2017, 7:46 IST
ಅರಸೀಕೆರೆ: ತಾಲ್ಲೂಕಿನಲ್ಲಿ ಮಳೆಯ ಅಭಾವದಿಂದ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಶುಕ್ರವಾರ ತಹಶೀಲ್ದಾರ್‌ ನಟೇಶ್‌ ಮತ್ತು ಅಧಿಕಾರಿಗಳಿಗೆ ಸೂಚಿಸಿದರು.
 
ತಾಲ್ಲೂಕಿನ ಕಣಕಟ್ಟೆ ಹೋಬಳಿ ಜೆ.ಸಿ.ಪುರ ಗ್ರಾಮದ ಎಪಿಎಂಸಿ ಆವರಣದಲ್ಲಿ ದಾಸ್ತಾನು ಮಾಡಲಾಗಿದ್ದ ಮೇವು ಬ್ಯಾಂಕ್‌ನಲ್ಲಿ ರೈತರಿಗೆ ಮೇವು ವಿತರಿಸಿ ಅವರು ಮಾತನಾಡಿದರು.
 
ತಾಲ್ಲೂಕಿನಲ್ಲಿ  ಮೇವಿನ ಅಭಾವ ತೀವ್ರವಾಗಿ ಕಾಡುತ್ತಿದ್ದು, ಈಗ ಹೊರ ಜಿಲ್ಲೆಗಳಿಂದ ತರುತ್ತಿರುವ ಮೇವನ್ನೇ ರೈತರಿಗೆ ಸಮಾನವಾಗಿ ಹಂಚಿಕೆ ಮಾಡುತ್ತಿದ್ದು, ಯಾವುದೇ ಗದ್ದಲ, ಗಲಾಟೆಗೆ ಅವಕಾಶ ನೀಡದಂತೆ ತಮಗೆ ನೀಡಿದ ಮೇವನ್ನು ರೈತರು ಪಡೆದು ಕೊಳ್ಳಬೇಕು ಎಂದು ಕೋರಿದರು.
 
ಜೆ.ಸಿ.ಪುರ ಗ್ರಾಮದ ಎ.ಪಿ.ಎಂ.ಸಿ ಆವರಣದಲ್ಲಿ ಹೋಬಳಿಯ ರೈತರ ಹಿತದೃಷ್ಟಿಯಿಂದ ಮೇವನ್ನು ದಾಸ್ತಾನು ಮಾಡಲಾಗಿದೆ. ರೈತರು ಯಾರೂ ಕೂಡ ಆತಂಕ ಪಡಬೇಡಿ. ಮೇವು ವಿತರಣೆ ಮಾಡಲು ಸ್ವಲ್ಪ ಅಡಚಣೆ ಇರುವುದಾಗಿ ಒಪ್ಪಿಕೊಂಡ ಶಾಸಕರು, ಪರಿಸ್ಥಿತಿ ಅರಿತು ರೈತರೂ ಸಹ ತಾಲ್ಲೂಕು ಆಡಳಿತ ದೊಂದಿಗೆ ಕೈಜೋಡಿಸಿದರೆ ಮಾತ್ರ ಪರಿಸ್ಥಿತಿ ನಿಭಾಯಿಸಬಹುದು ಎಂದು ರೈತರಿಗೆ ತಿಳಿ ಹೇಳಿದರು.
 
ತಾಲ್ಲೂಕಿನಲ್ಲಿ ಆರಂಭಿಸಲಾಗಿದ್ದ ಗೋಶಾಲೆಗಳು ಉತ್ತಮವಾಗಿ ನಡೆಯು ತ್ತಿದ್ದವು. ಬೋರನಕೊಪ್ಪಲು ಬಳಿ ತೆರೆಯಲಾಗಿದ್ದ ಗೋಶಾಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಶು ವೈದ್ಯರು ಇದು ಸಾಂಕ್ರಾಮಿಕ ರೋಗವಾ ದ್ದರಿಂದ ಎಲ್ಲೆಡೆ ಹರಡುತ್ತದೆ. ಗೋಶಾಲೆ ಸ್ಥಗಿತಗೊಳಿಸಿ ಎಂದು ವರದಿ ನೀಡಿದ್ದರಿಂದ ಗೋಶಾಲೆ ಸ್ಥಗಿತಗೊಳಿಸ ಲಾಗಿದೆ ಎಂದು ಅವರು ಹೇಳಿದರು.
 
ಹಳ್ಳಿಗಳಲ್ಲಿ ಜನರಿಗೆ ಕುಡಿಯುವ ನೀರು ಜಾನುವಾರುಗಳಿಗೆ ಮೇವು ಎರಡು ದೊರೆಯುತ್ತಿಲ್ಲ. ಇದರಿಂದಾಗಿ ಜಾನುವಾರು ರಕ್ಷಣೆ ರೈತರಿಗೆ ದೊಡ್ಡ ಸವಾಲಾಗಿರುವ ಬಗ್ಗೆ ತಮಗೆ ಅರಿವಿದೆ ಎಂದರು.
 
ತಹಶೀಲ್ದಾರ್‌ ನಟೇಶ್‌ ಮಾತನಾಡಿ, ತಾಲ್ಲೂಕು ಆಡಳಿತ ಜಾನುವಾರು ಪರಿಸ್ಥಿತಿ ಅರಿತು ಹೊರ ಜಿಲ್ಲೆಗಳಲ್ಲಿ ಮೇವು ಹುಡುಕಿ ದಾಸ್ತಾನು ಮಾಡಿ ದಂಥ ಮೇವನ್ನು ರೈತರು ಮೊನ್ನೆ ರಾತ್ರಿ  ಅತಿಕ್ರಮಿಸಿ ಕದ್ದುತೆಗೆದುಕೊಂಡ ಕ್ರಮ ಸರಿಯಲ್ಲ.
 
ಇದರಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿದೆ. ಮುಂದೆ ಈ ರೀತಿ ಆದರೆ ಕಾನೂನು ಕ್ರಮ ಕೈಗೊಳ್ಳುವು ದಾಗಿ ಅವರು ಎಚ್ಚರಿಕೆ ನೀಡಿದರು. ಅರಸೀಕೆರೆ ಪಶು ಆಸ್ಪತ್ರೆ ವೈದ್ಯ ಡಾ.ರಂಗನಾಥ್‌, ತಾಲ್ಲೂಕ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ವರಪ್ಪ, ಕಂದಾಯ ಇಲಾಖೆ ಅಧಿಕಾರಿಗಳು ಅರಸೀಕೆರೆ ಗ್ರಾಮಾಂತರ ಪಿ.ಎಸ್‌.ಐ ಪುರುಷೋತ್ತಮ್‌ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.