ADVERTISEMENT

ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 8:48 IST
Last Updated 15 ಸೆಪ್ಟೆಂಬರ್ 2017, 8:48 IST
ಸಚಿನ್‌ ಮಿಗಾ
ಸಚಿನ್‌ ಮಿಗಾ   

ಹಾಸನ: ‘ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ರೈತರನ್ನು ವಂಚಿಸುವ ಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಪ್ತ ಗೌತಮ್‌ ಅದಾನಿಗೆ ಹಣ ಮಾಡಲು ನೆರವಾಗಿದ್ದಾರೆ’ ಎಂದು ಕೆಪಿಸಿಸಿ ಕಿಸಾನ್‌ ರಾಜ್ಯ ಘಟಕದ ಅಧ್ಯಕ್ಷ ಸಚಿನ್‌ ಮಿಗಾ ಆರೋಪಿಸಿದರು.

‘ಫಸಲ್‌ ಬಿಮಾ ಯೋಜನೆ ಅವೈಜ್ಞಾನಿಕವಾಗಿದ್ದು, ರೈತರಿಂದ ಬಲವಂತವಾಗಿ ಬೆಳೆ ವಿಮೆ ಕಟ್ಟಿಸಿಕೊಳ್ಳಲಾಗುತ್ತಿದೆ. ಬೆಳೆನಷ್ಟಕ್ಕೊಳಗಾದ ರೈತ ಸಂಬಂಧಪಟ್ಟ ಏಜೆನ್ಸಿ ಬಳಿ ಪರಿಹಾರ ಕೇಳಲು ಹೋದರೆ ಒಬ್ಬರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮೂಹಿಕವಾಗಿ ಎಲ್ಲಾ ಬೆಳೆನಷ್ಟ ಆಗಿರಬೇಕೆಂದು ಪ್ರತಿನಿಧಿಗಳು ಹೇಳುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ದೂರಿದರು.

‘ರೈತರ ಹಿತ ಕಾಪಾಡುವ ಬದಲು, ಕೈಗಾರಿಕೋದ್ಯಮಿಗಳನ್ನು ಮತ್ತಷ್ಟು ಆರ್ಥಿಕವಾಗಿ ಬಲಪಡಿಸುವ ಯೋಜನೆ ಆಗಿದೆ. ಗೌತಮ್‌ ಅದಾನಿ ಒಡೆತನದ ‘ಯೂನಿವರ್ಸಲ್‌ ಸುಮೊ’ ಬೆಳೆ ವಿಮೆ ಕಂಪೆನಿಗೆ ಹಣ ಮಾಡಿಕೊಡುವ ಷಡ್ಯಂತ್ರ ಅಡಗಿದ್ದು, ಕೋಟ್ಯಂತರ ರೂಪಾಯಿ ರೈತರಿಗೆ ವಂಚನೆ ಮಾಡಲಾಗಿದೆ. ಶೀಘ್ರದಲ್ಲೇ ಇತರೆ ವಿಮಾ ಕಂಪೆನಿಗಳಂತೆ ಪರಿಹಾರ ಪಾವತಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಬರ ಆವರಿಸಿದೆ. ಸಾಲಬಾಧೆ, ಬೆಳೆನಷ್ಟದಿಂದ ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ರೈತರು, ಕೂಲಿ ಕಾರ್ಮಿಕರು, ಮಹಿಳೆಯರು ತಮ್ಮ ಚಿನ್ನಾಭರಣಗಳನ್ನು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಗಿರವಿ ಇಟ್ಟಿದ್ದು, ಶೇ 15 ರಿಂದ 18 ರಷ್ಟು ಬಡ್ಡಿಗೆ ಸಾಲ ನೀಡಿ ಸುಲಿಗೆ ಮಾಡುತ್ತಿದ್ದಾರೆ. ಲಕ್ಷಾಂತರ ಬೆಲೆ ಬಾಳುವ ಆಭರಣಗಳನ್ನು ಹರಾಜು ಹಾಕಲಾಗುತ್ತಿದೆ. ಸರ್ಕಾರ ಚಿನ್ನಾಭರಣಗಳ ಮೇಲೆ ಸಹಕಾರ ಸಂಘಗಳಲ್ಲಿ ಹೆಚ್ಚಿನ ಹಣ ಕೊಡಿಸಬೇಕು. ಅಲ್ಲದೆ, ಮುಂದಿನ ಬಜೆಟ್‌ನಲ್ಲಿ ₹5 ಸಾವಿರ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕೆಪಿಸಿಸಿ ಕಿಸಾನ್‌ ಘಟಕದ ರೈತ ವಿಭಾಗದ ರಾಜ್ಯ ಸಂಚಾಲಕ ತುಳಸೀದಾಸ್‌, ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌, ಉಪಾಧ್ಯಕ್ಷ ಧರ್ಮಪಾಲ್‌, ಬೇಲೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಾಸಪ್ಪ, ಸಕಲೇಶಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಶ್‌ ಇದ್ದರು.

ವಿಮಾ ಕಂಪೆನಿಗಳಿಂದ ರೈತರಿಗೆ ವಂಚನೆ

ಬಜೆಟ್‌ನಲ್ಲಿ ₹ 5 ಸಾವಿರ ಕೋಟಿ ಮೀಸಲಿಡಿ

ಅದಾನಿಗೆ ಹಣ ಮಾಡಲು ಪ್ರಧಾನಿ ನೆರವು: ಆರೋಪ

* * 

ಬಿ.ಎಸ್‌.ಯಡಿಯೂರಪ್ಪ, ಪಕ್ಷದ ಸಂಸದರು ಹಾಗೂ ಕಾರ್ಯಕರ್ತರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಸಂಸತ್‌ಗೆ ಮುತ್ತಿಗೆ ಹಾಕಲಿ.
 ಸಚಿನ್‌ ಮಿಗಾ,
ಕೆಪಿಸಿಸಿ ಕಿಸಾನ್‌ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.