ADVERTISEMENT

ರೈತರ ಹಿತ ಕಾಯಲು ದೇವೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 6:06 IST
Last Updated 2 ಅಕ್ಟೋಬರ್ 2014, 6:06 IST

ಹೊಳೆನರಸೀಪುರ: ಭಾರತದಲ್ಲಿ ಕೃಷಿ ನೀತಿಯನ್ನು ಮೊದಲ ಬಾರಿಗೆ ಜಾರಿಗೆ ತಂದ್ದದ್ದು ಕರ್ನಾಟಕ. ನಾನು ಮುಖ್ಯಮಂತ್ರಿ ಆಗಿದ್ದಾಗ, ನನ್ನ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಬೈರೇಗೌಡರೊಂದಿಗೆ ಚರ್ಚಿಸಿ ಹೊಸ ಕೃಷಿ ನೀತಿಯನ್ನು ಜಾರಿಗೆ ತಂದೆವು.

ಅಂದು ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದ ಬಲರಾಂ ಜಾಕಡ್‌ ನಮ್ಮ ಕ್ರಮವನ್ನು ಶ್ಲಾಘಿಸಿದ್ದರು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದರು.

ತಾಲ್ಲೂಕಿನ ಬಿಟ್ಟಗೋಡನಹಳ್ಳಿಯಲ್ಲಿ ಕಾರೆಕೆರೆ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿಗಾಗಿ ಕೃಷಿಭೂಮಿಯನ್ನು ಬಳಸಿಕೊಳ್ಳುತ್ತಿರುವುದರಿಂದ ಕೃಷಿಭೂಮಿಯ ಪ್ರಮಾಣ ಕಡಿಮೆ ಆಗುತ್ತಿದೆ. ರೈತರ ಬೆಳೆಗೆ ಬೆಲೆ ಸಿಗುತ್ತಿಲ್ಲ. ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ರೈತ ಬೆಳೆದ ಈರುಳ್ಳಿಗೆ ಬೆಲೆ ಇಲ್ಲದಂತಾಗಿದೆ. ಇದನ್ನೆಲ್ಲಾ ಕೇಳುವವರು ಯಾರೂ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಪ್ರಧಾನಿ ಆದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ. ಪ್ರಧಾನಿ ಅವರಿಗೆ ರಾಜಿನಾಮೆಯನ್ನೂ ನೀಡಲು ಹೋಗಿದ್ದೆ. ಅವರು ರಾಜಿನಾಮೆ ಪಡೆಯಲು ಒಪ್ಪಲಿಲ್ಲ. ಆಗ ಕರ್ನಾಟಕ ರಾಜ್ಯದ ಜನರಿಗೆ ನೀರಿನ ತೊಂದರೆ ಆಗಬಾರದು. ಹಾಸನ– ಬೆಂಗಳೂರು ರೈಲು ಮಾರ್ಗ ಬೇಗ ಪೂರ್ಣಗೊಳ್ಳಬೇಕು ಎನ್ನುವ ಷರತ್ತನ್ನು ವಿಧಿಸಿ ನಾನು ರಾಜೀನಾಮೆ ನೀಡಲಿಲ್ಲ ಎಂದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ನಾರಾಯಣಗೌಡ ಮಾತನಾಡಿ, 1990ರ ದಶಕದಲ್ಲಿ 50 ದಶಲಕ್ಷ ಟನ್‌ ಆಹಾರ ಪದಾರ್ಥಗಳ ಉತ್ಪಾದನೆ ಇತ್ತು. ಇಂದು 210 ದಶಲಕ್ಷ ಟನ್‌ ಆಹಾರ ಉತ್ಪಾದನೆ ಆಗುತ್ತಿದೆ. ಆದರೂ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲಿಲ್ಲ ಎಂದರು.

ರಾಜ್ಯದಲ್ಲಿ ರೈತರ ಬೆಳೆಗಳ ಉತ್ಪಾದಕರ ಸಂಘ ಪ್ರಾರಂಭವಾಗಬೇಕು. ಇದರಿಂದ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದರು.

ಶಾಸಕ ಎಚ್‌.ಡಿ. ರೇವಣ್ಣ, ಡಾ.ಡಿ.ಪಿ. ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಪಟೇಲ್‌ ಶಿವರಾಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಗೋವಿಂದೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿ.ಆರ್‌. ಮಂಜುನಾಥ್‌, ಎಚ್‌.ಡಿ. ರಾಮೇಗೌಡ, ಕೃಷ್ಣಪ್ಪ, ಅನಂತ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.