ADVERTISEMENT

ವಾಹನ ದಟıಣೆ; ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2015, 8:58 IST
Last Updated 26 ಅಕ್ಟೋಬರ್ 2015, 8:58 IST

ಹಾಸನ: ನಾಲ್ಕು ದಿನಗಳ ರಜೆಯ ಪರಿಣಾಮ ಮಂಗಳೂರು– ಬೆಂಗಳೂರು ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನದ ನಂತರ ಎಂದೂ ಕಂಡರಿಯದಷ್ಟು ವಾಹನಗಳ ದಟ್ಟಣೆ ಕಾಣಿಸಿತ್ತು. ಸಂಜೆ 3 ಗಂಟೆಯ ನಂತರವಂತೂ ರಸ್ತೆ ದಾಟುವುದೇ ದೊಡ್ಡ ಸಾಹಸವಾಗಿತ್ತು.

ನಾಲ್ಕು ದಿನಗಳ ಸತತ ರಜೆ ಹಾಗೂ ಹಬ್ಬದ ಕಾರಣಕ್ಕೆ ಊರಿಗೆ ಹೋಗಿದ್ದವರೆಲ್ಲರೂ ಭಾನುವಾರ ಮತ್ತೆ ಬೆಂಗಳೂರಿನತ್ತ ಧಾವಿಸುತ್ತಿದ್ದರು. ಇದರಿಂದಾಗಿ ರಸ್ತೆಯ ತುಂಬ ಸಾಲುಸಾಲು ಕಾರುಗಳೇ ಕಾಣಿಸು ತ್ತಿದ್ದವು. ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಂತೂ ತುಂಬಿ ತುಳುಕುತ್ತಿದ್ದವು. ಬೆಂಗಳೂರಿಗೆ ಹೋಗಲು ಹಾಸನ ಬಸ್‌ ನಿಲ್ದಾಣಕ್ಕೆ ಬಂದ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿತ್ತು.

ಮಂಗಳೂರು ಕಡೆಯಿಂದ ಬರುವ ರಾಜಹಂಸ, ಐರಾವತ ಬಸ್ಸುಗಳ ಸೀಟುಗಳು ಅಲ್ಲಿಂದಲೇ ಭರ್ತಿ ಆಗುತ್ತಿದ್ದುದರಿಂದ ಹಚ್ಚಿನ ಬಸ್ಸುಗಳು ಹಾಸನ ಬಸ್‌ ನಿಲ್ದಾಣಕ್ಕೆ ಬರಲೇ ಇಲ್ಲ. ಚಿಕ್ಕಮಗಳೂರು ಕಡೆಯಿಂದ ಬರುವ ಬಸ್ಸುಗಳಲ್ಲಿ ಕೆಲವು ಬಸ್‌ ನಿಲ್ದಾಣಕ್ಕೆ ಬಂದರೂ, ಅದರಲ್ಲಿ ಖಾಲಿ ಇರುತ್ತಿದ್ದುದು ಎರಡು– ಮೂರು ಸೀಟುಗಳು ಮಾತ್ರ.

ಉಳಿದಂತೆ ತಡೆರಹಿತ ಬಸ್ಸುಗಳು ತುಂಬಿ ತುಳುಕುತ್ತಲೇ ಬಸ್‌ ನಿಲ್ದಾಣಕ್ಕೆ ಬರುತ್ತಿದ್ದವು. ಒಂದು ಬಸ್ಸು ಬರುತ್ತಿದ್ದಂತೆ ಕಾಯ್ದು ಕುಳಿತಿದ್ದ ನೂರಾರು ಜನರು ಬಸ್ಸಿನತ್ತ ಮುಗಿಬೀಳುತ್ತಿದ್ದರು. ಬಂದ ಬಸ್ಸಿನಲ್ಲಿ ಕಾಲಿಡಲೂ ಜಾಗವಿಲ್ಲದಿರುವುದನ್ನು ನೋಡಿ ಮತ್ತೆ ಬೆಂಚುಗಳ ಮೇಲೆ ಕುಳಿತು ಮುಂದಿನ ಬಸ್ಸಿಗಾಗಿ ಕಾಯುತ್ತಿದ್ದರು.

ಬಸ್‌ ನಿಲ್ದಾಣಕ್ಕೆ ಬಂದ ಕೆಎಸ್‌ಆರ್‌ಟಿಸಿ ಹಿರಿಯ ಸಿಬ್ಬಂದಿ ಜನರಿಗೆ ತೊಂದರೆ ಆಗದಂತೆ ಸ್ಥಳದಲ್ಲೇ ನಿಂತು ಸಾಧ್ಯವಾದ ವ್ಯವಸ್ಥೆ ಕಲ್ಪಿಸುತ್ತಿದ್ದರು. ಮಕ್ಕಳುಮರಿಗಳು, ಕೈತುಂಬ ಬ್ಯಾಗ್‌, ಲಗೇಜ್‌ ಹೊತ್ತುಕೊಂಡು ಬಂದವರ ಸ್ಥಿತಿ ಮಾತ್ರ ಹೇಳತೀರದಾಗಿತ್ತು.

ರಜಾ ಕಾಲದ ವಿಶೇಷವಾಗಿ ಕೆಎಸ್‌ಆರ್‌ಟಿಸಿಯವರು ಹೆಚ್ಚಿನ ಬಸ್‌ ಸೌಲಭ್ಯ ಕಲ್ಪಿಸಿದ್ದರೂ ಈ ಸ್ಥಿತಿ ಉಂಟಾಗಿದೆ. ಕೆಲವರಂತೂ ಹಲವು ಗಂಟೆಗಳ ಕಾಲ ಬಸ್‌ ನಿಲ್ದಾಣದಲ್ಲಿ ಕಾಯ್ದು ಕುಳಿತರು. ಇನ್ನೂ ಕೆಲವರು ನಗರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಟೆಂಪೊಗಳ ಆಶ್ರಯ ಪಡೆದರು. ಅವರೂ ಪ್ರಯಾಣಿಕರಿಂದ ಬಸ್‌ನಷ್ಟೇ ದರ ಪಡೆದು ಅವರನ್ನು ಕರೆದೊಯ್ಯುತ್ತಿದ್ದರು. ಬೆಂಗಳೂರಿನತ್ತ ಹೊರಟಿದ್ದ ಯಾವ ವಾಹನವೂ ಭಾನುವಾರ ಖಾಲಿಯಾಗಿ ಹೋಗಲಿಲ್ಲ. ಅತ್ತ ಟೋಲ್‌ ಕೇಂದ್ರಗಳಲ್ಲೂ ಭಾನುವಾರ ಸಂಜೆ ವಾಹನಗಳ ಉದ್ದನೆಯ ಸಾಲು ಕಾಣಿಸಿಕೊಂಡಿತು.

ಹಬ್ಬದ ಅಂಗವಾಗಿ ಅ. 22ರಿಂದ ಭಾನುವಾರದವರೆಗೂ ಸತತವಾಗಿ ಸರ್ಕಾರಿ ರಜೆ ಇದ್ದುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿಗೆ ಹೋಗುವವರಿಗೆ ಒಂದು ಚಿಂತೆಯಾದರೆ ಈ ಹೆದ್ದಾರಿಯ ಅಕ್ಕಪಕ್ಕದ ನಿವಾಸಿಗಳಿಗೆ ಭಾನುವಾರ ರಸ್ತೆ ದಾಟುವುದೇ ದೊಡ್ಡ ಸಮಸ್ಯೆಯಾಗಿತ್ತು. ಇಲ್ಲಿನ ಬೂವನಹಳ್ಳಿಯ ಜನರು ಇಂಥ ಕಷ್ಟ ಎದುರಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ರಸ್ತೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಹಲವು ನಿಮಿಷ ಕಾಯಬೇಕಾಗಿಬಂದಿದೆ.

‘ಶುಕ್ರವಾರ ಶನಿವಾರ ಹಾಗೂ ಭಾನುವಾರಗಳಂದು ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುತ್ತದೆ. ಶುಕ್ರವಾರ– ಶನಿವಾರಗಳಂದು ಮಂಗಳೂರು ಕಡೆ ಹೋಗುವ ವಾಹನಗಳು ಹೆಚ್ಚಾದರೆ ಭಾನುವಾರ ಬೆಂಗಳೂರು ಕಡೆಗೆ ಹೆಚ್ಚು ವಾಹನಗಳು ಓಡುತ್ತವೆ. ಆದರೆ ಇಂದು ಸಾಮಾನ್ಯ ಭಾನುವಾರಗಳಿಗಿಂತ ಎರಡು ಮೂರು ಪಟ್ಟು ಹೆಚ್ಚು ವಾಹನಗಳು ರಸ್ತೆಯಲ್ಲಿದ್ದವು’ ಎಂದು ಬೂವನಹಳ್ಳಿ ನಿವಾಸಿಗಳು ಹೇಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.