ADVERTISEMENT

ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ

ಹಾಸನ: ಹೊಸದಾಗಿ ಪಶುವೈದ್ಯಕೀಯ ಕಾಲೇಜು ಆರಂಭಿಸಲು ವಿದ್ಯಾರ್ಥಿಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:14 IST
Last Updated 16 ಫೆಬ್ರುವರಿ 2017, 9:14 IST
ಹಾಸನ:‘ರಾಜ್ಯದಲ್ಲಿ ಹೆಚ್ಚುವರಿ ಪಶು ವೈದ್ಯಕೀಯ ಮಹಾವಿದ್ಯಾಲಯಗಳನ್ನು ತೆರೆಯದಂತೆ ಆಗ್ರಹಿಸಿ ಹಾಸನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಬುಧವಾರದಿಂದ ಅನಿರ್ದಿಷ್ಟಾವಧಿ  ಧರಣಿ ಆರಂಭಿಸಿದರು.
 
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾಲೇಜು ಆವರಣದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 
 
ರಾಜ್ಯದಲ್ಲಿ ಬೀದರ್‌ ಜಿಲ್ಲೆಯ ಪಶು ವೈದ್ಯಕೀಯ ವಿಶ್ವವಿದ್ಯಾಲಯದಡಿಯಲ್ಲಿ 2006ರಲ್ಲಿ 2 ಪಶು ವೈದ್ಯಕೀಯ ಕಾಲೇಜುಗಳಿದ್ದವು. ಅಂದಿನ ಸರ್ಕಾರ ಹಾಗೂ ವಿಶ್ವವಿದ್ಯಾಲಯ ರಾಜ್ಯದಲ್ಲಿ ಪಶುವೈದ್ಯ ಪದವೀಧರರ ಕೊರತೆ ನೀಗಿಸಲು ಹೆಚ್ಚುವರಿಯಾಗಿ ಶಿವಮೊಗ್ಗ ಹಾಗೂ ಹಾಸನದಲ್ಲಿ ಪಶು ವೈದ್ಯಕೀಯ ವಿದ್ಯಾಲಯಗಳನ್ನು ಪ್ರಾರಂಭಿಸಿತು.
 
2011ರಿಂದ ಪ್ರತಿವರ್ಷ ಇವೆರಡೂ ಜಿಲ್ಲೆಗಳಿಂದ 140 ವಿದ್ಯಾರ್ಥಿಗಳು ಪದವಿ ಗಳಿಸುತ್ತಾರೆ. ರಾಜ್ಯದಲ್ಲಿನ ಪಶು ವೈದ್ಯರ ಕೊರತೆ ಸರಿಪಡಿಸಿದೆ. ಪ್ರಸ್ತುತ 4 ಪಶು ವೈದ್ಯಕೀಯ ಮಹಾವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಪ್ರತ ವರ್ಷ ಕನಿಷ್ಠ 240 ವಿದ್ಯಾರ್ಥಿಗಳು ಪದವಿ ಪಡೆದು ಹೊರ ಬರುತ್ತಿದ್ದಾರೆ ಎಂದು ತಿಳಿಸಿದರು. 
 
ಬೀದರ್ ವಿಶ್ವವಿದ್ಯಾಲಯದ ವ್ಯಾಪ್ತಿಯ 4 ಕಾಲೇಜುಗಳನ್ನು ಹೊರತುಪಡಿಸಿ, ಗದಗ, ಅಥಣಿ, ಶಿರಾ, ಕೊಪ್ಪಳ ಹಾಗೂ ಪುತ್ತೂರುಗಳಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ಪಶು ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಹಾಗೂ ಭಾರತೀಯ ಪಶು ವೈದ್ಯಕೀಯ ಪರಿಷತ್ (ವಿಸಿಐ) ನಿಯಮಾನುಸಾರ ಮೂಲ ಸೌಕರ್ಯ ಒದಗಿಸಲು ಸಾವಿರಾರು ಕೋಟಿ ಅನುದಾನದ ಅಗತ್ಯವಿದೆ. ಇದು ಸರ್ಕಾರಕ್ಕೆ ಅನಗತ್ಯ ಹೊರೆಯಾಗಲಿದೆ ಎಂದರು.
 
ಪಶು ವೈದ್ಯಕೀಯ ಕಾಲೇಜುಗಳಿಂದ ಹೊರ ಬಂದು ನಿರುದ್ಯೋಗಿಗಳಾಗುತ್ತಿರುವುದು ಸಹ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ಹಾಲಿ ಇರುವ ಕಾಲೇಜುಗಳನ್ನೇ ಬಲಪಡಿಸಿ ಹೆಚ್ಚಿನ ಸೌಕರ್ಯ ಕಲ್ಪಿಸಿದರೆ ಪರಿಣಾಮಕಾರಿ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆ ನಡೆಸಬಹುದು ಎಂದು ಹೇಳಿದರು.
 
ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಬೆಂಗಳೂರು, ಬೀದರ್, ಶಿವಮೊಗ್ಗ ಹಾಗೂ ಹಾಸನ ಪಶು ವೈದ್ಯಕೀಯ ಕಾಲೇಜುಗಳಲ್ಲಿ ಭಾರತೀಯ ಪಶು ವೈದ್ಯಕೀಯ ಪರಿಷತ್ತಿನ ನಿಬಂಧನೆ ಅನುಸಾರ  ಕಾಲೇಜುಗಳು ಹೊಂದಿರಬೇಕಾದ ಸೌಲಭ್ಯದಲ್ಲಿ ನ್ಯೂನತೆಗಳಿವೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. ಹಲವು ವಿಭಾಗಗಳಲ್ಲಿ ಗುತ್ತಿಗೆ ಆಧಾರದ ಶಿಕ್ಷಕರಿಂದ ಬೋಧನೆ ಮಾಡಲಾಗುತ್ತಿದೆ. ಇನ್ನು ಬೋಧಕೇತರ ಸಿಬ್ಬಂದಿಯ ಪೈಕಿ ಶೇ 75-80ರಷ್ಟು ಹೊರಗುತ್ತಿಗೆ ನೌಕರರಿದ್ದಾರೆ. 
 
ಈಗಾಗಲೇ ಎಂ.ಎಸ್ಸಿ, ಪಿಎಚ್‌.ಡಿ ಪದವಿ ಹೊಂದಿರುವ ನೂರಾರು ಪಶು ವೈದ್ಯಕೀಯ ಪದವೀಧರರು ರಾಜ್ಯದಲ್ಲಿದ್ದಾರೆ. ಹಾಲಿ ಖಾಲಿ ಇರುವ ಹುದ್ದೆಗಳನ್ನು ಅವರನ್ನೇ ನೇಮಕ ಮಾಡಬೇಕು. ರಾಜ್ಯದಲ್ಲಿ ಪಶುಸಂಗೋಪನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ 650 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ನಿರೀಕ್ಷೆಯಲ್ಲಿದ್ದು, ಈಗಾಗಲೇ 900ಕ್ಕೂ ಹೆಚ್ಚುವ ಪದವೀಧರ ಪಶು ವೈದ್ಯರು ಉದ್ಯೋಗಕ್ಕಾಗಿ ಕಾಯುವಂತಾಗಿದೆ. ಆದ್ದರಿಂದ ಹೊಸದಾಗಿ ಪಶು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಬಾರದು ಎಂದು ಒತ್ತಾಯಿಸಿದರು. ಹರೀಶ್, ಅಭಿಲಾಷ್, ನಾಗೇಶ್, ಅಖಿಲೇಶ್, ಆದರ್ಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 
* ಅಗತ್ಯಕ್ಕಿಂತ ಹೆಚ್ಚು ಪಶು ವೈದ್ಯಕೀಯ ಮಹಾವಿದ್ಯಾಲಯಗಳನ್ನು ಹೊಂದಿರುವ ರಾಜ್ಯಗಳಲ್ಲಿ ಪಶು ವೈದ್ಯರ ಸ್ಥಿತಿ ಶೋಚನೀಯವಾಗಿದೆ
ವಿಜಯ್, ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.