ADVERTISEMENT

ವಿಶೇಷ ತರಗತಿ ಆಯೋಜನೆಗೆ ರೇವಣ್ಣ ಸೂಚನೆ

ಎಸ್‌ಎಸ್‌ಎಲ್‌ಸಿ, ಪಿಯು ಫಲಿತಾಂಶ ಸುಧಾರಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 6:10 IST
Last Updated 29 ಜನವರಿ 2015, 6:10 IST

ಹೊಳೆನರಸೀಪುರ: ಈ ಬಾರಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆಗೆ ಎರಡು ತಿಂಗಳು ಮುಂಚೆ ವಿದ್ಯಾರ್ಥಿಗಳಿಗೆ ಸಂಜೆ ವೇಳೆ ವಿಶೇಷ ತರಗತಿ ನಡೆಸಬೇಕು ಎಂದು ಶಾಸಕ ಎಚ್‌.ಡಿ. ರೇವಣ್ಣ ಶಿಕ್ಷಣ ಇಲಾಖೆಯ ಅಧಿಕಾರಿಗೆ ಸೂಚಿಸಿದರು. ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಅವರು ಮಾತನಾಡಿದರು.

ಇದಕ್ಕೆ ಸಂಬಂಧಿಸಿ ಮುಂದಿನ ವಾರ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆ ನಡೆಸುತ್ತೇನೆ. ಸಭೆಗೆ ತಪ್ಪದೆ ಎಲ್ಲರೂ ಹಾಜರಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದರು.

ತಾಲ್ಲೂಕಿನ ಶ್ರೀರಾಮ ದೇವರ ಉತ್ತರ ಮತ್ತು ದಕ್ಷಿಣ ನಾಲೆಗಳ ಹೂಳನ್ನು ತೆಗೆಸಿ ನಾಲೆಗಳಲ್ಲಿ ಸಮರ್ಪಕವಾಗಿ ನೀರು ಹರಿಯುವಂತೆ ಗಮನಿಸಬೇಕು ಎಂದು ನೀರಾವರಿ ಇಲಾಖೆಯ ಎಂಜಿಯರುಗಳಿಗೆ ಅವರು ಸೂಚಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಭಾನುಪ್ರಕಾಶ್‌ ಅವರಿಗೆ ಯಾವ ನಾಲೆಗಳಲ್ಲಿ ಹೂಳು ತುಂಬಿದೆ ಎಂಬ ವಿವರ ನೀಡುವಂತೆ ತಿಳಿಸಿದರು.

ಪ್ರತೀ ವರ್ಷ ಬೇಸಿಗೆಯಲ್ಲಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ತಾಲ್ಲೂಕು ಪಂಚಾಯಿತಿ ಸದಸ್ಯರು ಈ ಕುರಿತು ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪರೀಕ್ಷಾ ವೇಳೆಯಲ್ಲಿ ನಿರಂತರ ವಿದ್ಯುತ್‌ ಸರಬರಾಜಿಗೆ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ವಿದ್ಯುತ್‌್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ‘ಸೆಸ್ಕ್‌’ ಎಇಇ ಶಿವಕುಮಾರ್‌ ನಿರಂತರ ಜ್ಯೋತಿ ಯೋಜನೆ ಅಡಿಯಲ್ಲಿ ಎಲ್ಲ ಗ್ರಾಮಗಳಿಗೆ ನಿರಂತರವಾಗಿ ವಿದ್ಯುತ್‌ ನೀಡುವ ವ್ಯವಸ್ಥೆಗೆ ಚಾಲನೆ ನೀಡಿದ್ದೇವೆ. ಇದರ ನಂತರ ದಿನಕ್ಕೆ ೨೦ ಗಂಟೆ ವಿದ್ಯುತ್‌ ನೀಡಬಹುದು ಎಂದು ಮಾಹಿತಿ ನೀಡಿದರು.

ಮರಳು ನೀತಿ ತೀವ್ರ ಅಸಮಾಧಾನ: ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿರುವ ಜಿಲ್ಲಾಡಳಿತ ಹೊಳೆನರಸೀಪುರ ತಾಲ್ಲೂಕಿನಲ್ಲಿ ಮರಳು ತೆಗೆಯದಂತೆ ನಿರ್ಬಂಧ ವಿಧಿಸಿದೆ. ಇದಕ್ಕೆ ಯಾರು ಹೊಣೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಕೋದಂಡರಾಮಯ್ಯ ಅವರನ್ನು ಪ್ರಶ್ನಿಸಿದ ಶಾಸಕ ಈ ಬಗ್ಗೆ ಶಾಸನ ಸಭೆಯಲ್ಲಿ ಪ್ರಶ್ನಿಸುತ್ತೇನೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾ ಅಧಿಕಾರಿ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ‘ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀವು ಯಾವುದೇ ಅಭಿವೃದ್ಧಿ ಕೆಲಸ ಮಾಡಿಸಲಿಲ್ಲ. ಯಾವುದೇ ಫಾರಂ ನಿರ್ಮಿಸಲಿಲ್ಲ. ದಿನಾ ಸಂಜೆ ಮೈಸೂರಿಗೆ ಹೋಗಿ ಬೆಳಿಗ್ಗೆ ೧೧ ಗಂಟೆಗೆ ಬಂದ್ರೆ ಕೆಲಸ ಎಲ್ಲಾಗುತ್ತೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಪಿಡಿಒಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ.
ಈ ಕುರಿತು ಚರ್ಚಿಸಲು ಶೀಘ್ರವೇ ಪಂಚಾಯಿತಿ ಕಾರ್ಯದರ್ಶಿ ಹಾಗೂ ಪಿಡಿಒಗಳ ಸಭೆ ಕರೆಯುತ್ತೇನೆ ಸಭೆಯಲ್ಲಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

‘ವಿದ್ಯುತ್‌ ಉಪಕರಣ ಖರೀದಿಲ್ಲಿ ಅವ್ಯವಹಾರ ನಡೆಯುತ್ತಿದೆ. ಪದಾರ್ಥಗಳನ್ನು ಖರೀದಿಸದೆ ಬೋಗಸ್‌ಬಿಲ್‌ ನೀಡುತ್ತಿದ್ದಾರೆ’ ಎಂದು ಕೆಲ ಸದಸ್ಯರು ದೂರಿದಾಗ ಈ ಬಗ್ಗೆ ಪರಿಶೀಲಸಿ ವರದಿ ನೀಡಿ ಎಂದು ಅಧಿಕಾರಿಗಳಿಗೆ ರೇವಣ್ಣ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿ.ಆರ್‌. ಮಂಜುನಾಥ್‌, ಉಪಾಧ್ಯಕ್ಷೆ ಆಯಿಷಾ ಅಜುಂ, ಕಾರ್ಯನಿರ್ವಾಹಣಾ ಅಧಿಕಾರಿ ತಮ್ಮಣ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.