ADVERTISEMENT

ವಿಷದ ಬಾಟಲಿ ಹಿಡಿದು ನೌಕರರ ಪ್ರತಿಭಟನೆ

ವೈಡಿಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅಧೀಕ್ಷಕರಿಂದ ಜಾತಿನಿಂದನೆ, ಹಲ್ಲೆ: ದೂರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 10:04 IST
Last Updated 13 ಜುಲೈ 2017, 10:04 IST

ಬೇಲೂರು: ಸಂಬಳದ ಇನ್‌ಕ್ರಿಮೆಂಟ್‌ ಬಿಲ್‌ ಮಾಡಿಕೊಡುವಂತೆ ಕೇಳಿದ ಇಬ್ಬರು ಡಿ.ದರ್ಜೆ ನೌಕರರ ಮೇಲೆ ಇಲ್ಲಿನ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧೀಕ್ಷಕ ಕೇಶವ ಕಿರಣ ಅವರು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಅಧೀಕ್ಷಕ ನೀಡುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಡಿ. ದರ್ಜೆ ನೌಕರರಾದ ಶಿವಯ್ಯ ಮತ್ತು ಅಣ್ಣಪ್ಪ ಬುಧವಾರ ಕಾಲೇಜು ಮುಂಭಾಗ ಕುಟುಂಬ ಸದಸ್ಯರೊಂದಿಗೆ ಧರಣಿ ನಡೆಸಿದರಲ್ಲದೆ, ವಿಷ ಕುಡಿಯುವುದಾಗಿ ವಿಷದ ಬಾಟಲಿ ಹಿಡಿದು ಬೆದರಿಕೆಯೊಡ್ಡಿದರು. ಅವರನ್ನು ಪ್ರಾಂಶುಪಾಲ ಜಯಣ್ಣಗೌಡ ಸಮಾಧಾನಗೊಳಿಸಿದರು. ಘಟನೆಗೆ ಸಂಬಂಧಿಸಿ ಇಬ್ಬರೂ ನೌಕರರು  ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ವಿವರ: ಘಟನೆಯ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದ ಡಿ.ದರ್ಜೆ ನೌಕರರಾದ ಶಿವಯ್ಯ ಮತ್ತು ಅಣ್ಣಪ್ಪ, ‘ನಾವು 25 ವರ್ಷಗಳಿಂದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು 2015ರ ಜನವರಿ 1ರಂದು ಮುಂಬಡ್ತಿ ದೊರಕಿದೆ. ಮುಂಬಡ್ತಿ ಅವಧಿ ಸೇರಿದಂತೆ ಒಟ್ಟು ಎರಡು ಇನ್‌ಕ್ರಿಮೆಂಟ್‌ ನೀಡಬೇಕಿದೆ.

ADVERTISEMENT

ಇದಕ್ಕೆ ಸಂಬಂಧಿಸಿ ನಮಗೆ ತಲಾ ₹ 20 ಸಾವಿರ ಪಾವತಿಸಬೇಕಿದೆ. ಇದರ ಬಿಲ್‌ ಮಾಡುವಂತೆ ಕಾಲೇಜಿನ ಅಧೀಕ್ಷಕ ಕೇಶವ ಕಿರಣ ಅವರನ್ನು ಕೋರಿದಾಗ ಅವರು ತಲಾ ₹ 2 ಸಾವಿರ ನೀಡುವಂತೆ ಕೇಳಿದರು. ನಮ್ಮ  ಹಣ ಪಡೆಯಲು ನಾವೇಕೆ ಲಂಚ ನೀಡಬೇಕು ಎಂದು ಪ್ರಶ್ನಿಸಿದ್ದರಿಂದ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದು ದೂರಿದರು.

‘ಎರಡು ವರ್ಷಗಳಿಂದ ಇನ್‌ಕ್ರಿಮೆಂಟ್‌ ಬಿಲ್‌ ಮಾಡಿಕೊಟ್ಟಿಲ್ಲ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅಳಲು ತೋಡಿಕೊಂಡರು.

‘ಜುಲೈ 11ರಂದು ಸಂಜೆ 4.45ಕ್ಕೆ ಕೇಶವ ಕಿರಣ್‌ ಅವರನ್ನು ಭೇಟಿಯಾಗಿ ಇಂಕ್ರಿಮೆಂಟ್‌ ಬಿಲ್‌ ಮಾಡುವಂತೆ ಪುನಃ ಕೇಳಿದಾಗ ₹ 2ಸಾವಿರ ಕೊಟ್ಟರೆ, ಬಿಲ್ ಮಾಡುವುದಾಗಿ’ ಹೇಳಿದರು.

‘ಹಣ ಕೊಡುವುದಿಲ್ಲ ಎಂದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದರು. ನಮ್ಮ ಮೇಲೆ ಹಲ್ಲೆ ಮಾಡಿದರು’ ಎಂದು ವಿವರಿಸಿದರು. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

***

20ಕ್ಕೂ ಹೆಚ್ಚು ನೋಟಿಸ್‌!

ಬೇಲೂರು: ‘ಅಧೀಕ್ಷಕ ಕೇಶವ ಕಿರಣ್‌ ಬಗ್ಗೆ ಮೊದಲಿನಿಂದಲೂ ಹಲವು ದೂರುಗಳಿವೆ’ ಎಂದು ಪ್ರಾಂಶುಪಾಲ ಜಯಣ್ಣಗೌಡ ಅವರು ಪ್ರತಿಕ್ರಿಯಿಸಿದ್ದಾರೆ.
‘ಅವರು ಕಾಲೇಜಿನಲ್ಲಿ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಡಿ.ದರ್ಜೆ ನೌಕರರ ಇನ್‌ಕ್ರಿಮೆಂಟ್‌ ಬಿಲ್‌ ಮಾಡಿಕೊಡುವಂತೆ ಈ ಹಿಂದೆಯೇ ಸೂಚಿಸಲಾಗಿದೆ. ನೋಟಿಸ್‌ ನೀಡಲಾಗಿದೆ. ಆದರೂ ಬಿಲ್‌ ಮಾಡಿಲ್ಲ. ಇವರ ಕರ್ತವ್ಯ ಲೋಪದ ಬಗ್ಗೆ 20ಕ್ಕೂ ಹೆಚ್ಚು ನೋಟಿಸ್‌ ನೀಡಲಾಗಿದೆ. ಜಂಟಿ ನಿರ್ದೇಶಕರು, ಆಯುಕ್ತರು ಮತ್ತು ಸ್ಥಳೀಯ ಶಾಸಕರಿಗೂ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.