ADVERTISEMENT

ವ್ಯಾಸಂಗದ ಜತೆಗೆ ಕಲೆ, ಸಾಹಿತ್ಯ ಅರಿಯಿರಿ

ಕಾರೆಕೆರೆ ಕೃಷಿ ಕಾಲೇಜಿನಲ್ಲಿ ದಶಮಾನೋತ್ಸವ ಹಾಗೂ ‘ಸೊಗಡು’ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 10:52 IST
Last Updated 23 ಜನವರಿ 2017, 10:52 IST
ವ್ಯಾಸಂಗದ ಜತೆಗೆ ಕಲೆ, ಸಾಹಿತ್ಯ ಅರಿಯಿರಿ
ವ್ಯಾಸಂಗದ ಜತೆಗೆ ಕಲೆ, ಸಾಹಿತ್ಯ ಅರಿಯಿರಿ   

ಹಾಸನ: ಪದವೀಧರ ವಿದ್ಯಾರ್ಥಿಗಳು ಪಠ್ಯವಿಷಯ ಅಧ್ಯಯನ ಜತೆಗೆ ನಾಡಿನ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಅಧ್ಯಯನ ಕೈಗೊಂಡರೆ ಬದುಕಿನ ಉತ್ತುಂಗ ಶಿಖರ ತಲುಪಲು ಸಹಕಾರಿ ಆಗುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಎಚ್. ಶಿವಣ್ಣ ಅಭಿಪ್ರಾಯಪಟ್ಟರು.

ನಗರ ಹೊರ ವಲಯದ ಕಾರೆಕೆರೆ ಕೃಷಿಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಅಂತರ ಕೃಷಿ ಮಹಾವಿದ್ಯಾಲಯಗಳ ಯುವಜನೋತ್ಸವ ‘ಸೊಗಡು’ ಸಮಾರೋಪ ಹಾಗೂ ಕಾಲೇಜು ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯುವಕರು ದೇಶದ ಅಮೂಲ್ಯ ಸಂಪತ್ತು. ದೇಶದ ಅಭಿವೃದ್ಧಿಯಲ್ಲಿ ಯುವಕರು ತೊಡಗಬೇಕು. ಸಾಂಸ್ಕೃತಿಕ ಪರಿಧಿ ವಿಸ್ತರಣೆಗೆ ಇಂತಹ ಕಾರ್ಯಕ್ರಮಗಳು ಹೆಚ್ಚಬೇಕು ಎಂದರು.

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಪಿ. ಮೋಹನ್, ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಲು ‘ಸೊಗಡು’ ಉತ್ತಮ ವೇದಿಕೆಯಾಗಿದೆ. ಕಲೆಯನ್ನು ಗೌರವಿಸುವ ಔದಾರ್ಯ ಎಲ್ಲರದ್ದಾಗಬೇಕು ಎಂದರು.

ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಡಾ. ಎ.ಎಸ್. ಕುಮಾರಸ್ವಾಮಿ, ಡಾ. ಕೆ.ಕೆಂಚಯ್ಯ, ಮಹಾಬಲೇಶ್ವರ ಹೆಗಡೆ ಹಾಗೂ ಡಾ.ಎಲ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. 

ಹಾಸನ ಕಾಲೇಜಿಗೆ ಸಮಗ್ರ ಪ್ರಶಸ್ತಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ನಡೆದ ಅಂತರ ಕೃಷಿ ಮಹಾವಿದ್ಯಾಲಯಗಳ ಯುುವಜನೋತ್ಸವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯಕ್ಕೆ  ಸಮಗ್ರ ಪ್ರಶಸ್ತಿ ದೊರೆತಿದೆ.

ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯ ದ್ವಿತೀಯ ಹಾಗೂ ಬೆಂಗಳೂರು ಕಾಲೇಜು ತೃತೀಯ ಸ್ಥಾನ ಪಡೆಯಿತು. ಭಾರತೀಯ ಲಘು ಸಂಗೀತ, ಸಮೂಹ ಗಾಯನ, ವ್ಯಂಗ್ಯ ಚಿತ್ರ ರಚನೆ, ಸ್ಥಳದಲ್ಲಿ ಚಿತ್ರ ರಚನೆ, ಮಣ್ಣಿನ ಆಕೃತಿ ರಚನೆ, ಏಕಾಂಕ ನಾಟಕ, ರಸಪ್ರಶ್ನೆ, ಏಕಪಾತ್ರಾಭಿನಯ ಹೀಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.