ADVERTISEMENT

ಸಿ.ಎಂರಿಂದ ಗೋಸುಂಬೆ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 7:08 IST
Last Updated 8 ನವೆಂಬರ್ 2017, 7:08 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಹಾಸನ: ‘ನಾಲ್ಕೂವರೆ ವರ್ಷಗಳಿಂದ ಕುಂಭಕರ್ಣ ನಿದ್ರೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಮನೆಗೆ ಹೋಗುವ ವೇಳೆ ಸಾಧನಾ ಪರ್ವ ಅಂತ ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

‘ಕಾಂಗ್ರೆಸ್‌ ಸರ್ಕಾರದ ಸಾಧನೆ ಏನು ಎಂಬುದನ್ನು ತೋರಿಸಿ, ಬೆಂಗಳೂರು ಮುಳುಗಿಸಿದ್ದು ಸಾಧನೆನಾ?, ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವುದು ಸಾಧನೆನಾ?, ಎಸಿಬಿ ಸಂಪೂರ್ಣ ದುರ್ಬಳಕೆ ಮಾಡಿಕೊಂಡಿರುವುದಾ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಿದ್ದೀರಾ. ಹೀಗೆ ಆದರೆ ಕಾಂಗ್ರೆಸ್ ಪಕ್ಷ, ಪರಮೇಶ್ವರ್ ಸಹ ನಿಮ್ಮ ಜೊತೆಗೆ ಇರುವುದಿಲ್ಲ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತ ಪತ್ರ ಹೊರಡಿಸಲು ಆಗ್ರಹಿಸಿದ ಅವರು, ಜಾತಿಗಣತಿ ವರದಿ ಯಾವಾಗ ಬಿಡುಗಡೆ ಮಾಡುತ್ತೀರಾ ಎಂದು ಪಶ್ನಿಸಿದರು. ಬಿಜೆಪಿ ಐದು ವರ್ಷದ ಅವಧಿಯಲ್ಲಿ ₹46,190 ಕೋಟಿ ಸಾಲ ಮಾಡಿದ್ದರೆ, ಕಾಂಗ್ರೆಸ್‌ ಸರ್ಕಾರ ₹ 1,28,361 ಕೋಟಿ ಸಾಲ ಮಾಡಿದೆ. ಪ್ರತಿ ವ್ಯಕ್ತಿಯ ಮೇಲೆ ₹ ₹ 21,293 ಸಾಲದ ಹೊರೆ ಹೊರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಹತ್ಯೆಯಾಗಿ ಇಷ್ಟು ದಿನ ಕಳೆದರೂ ಹಂತಕರನ್ನು ಬಂಧಿಸುವಲ್ಲಿ ವಿಫಲವಾಗಿದೆ. ಲಿಂಗಾಯತ ಮತ್ತು ವೀರಶೈವರ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಅಪರಾಧ ಸಂಖ್ಯೆ ಹೆಚ್ಚಳವಾಗುತ್ತಿದೆ. ನಾಲ್ಕು ವರ್ಷದಲ್ಲಿ 21 ಸಾವಿರ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. 3,998 ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿವೆ. ಬೆಂಗಳೂರು ನಗರ ಒಂದರಲ್ಲೇ 1,25,000 ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ ಎಂದು ಕಿಡಿಕಾರಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮುಖ್ಯಮಂತ್ರಿ ಸೇರಿದಂತೆ ಸಚಿವರು ಹೋದ ಕಡೆಯೆಲ್ಲೆಲ್ಲಾ ಚುನಾವಣೆ ಪ್ರಣಾಳಿಕೆ ಭರವಸೆ ಈಡೇರಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇದು ಶುದ್ಧ ಸುಳ್ಳು. ಈ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಈ ಸರ್ಕಾರ ನುಡಿದಂತೆ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ಇತರರಿಗೆ ಗೌರವ ಕೊಡದೇ ಸಿ.ಎಂ ಸ್ಥಾನದ ಜವಾಬ್ದಾರಿ ಮರೆತು ಅಯೋಗ್ಯರಂತೆ ಮಾತನಾಡುತ್ತಿದ್ದಾರೆ. ಇನ್ನಾದರೂ ಹಿರಿಯರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.