ADVERTISEMENT

ಹಾಸನ–ಬೇಲೂರು ಪಾದಯಾತ್ರೆ ಇಂದು ಆರಂಭ

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಜ. 1ರಂದು ಜಕಣಾಚಾರಿ ಸ್ಮರಣಾ ದಿನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:10 IST
Last Updated 28 ಡಿಸೆಂಬರ್ 2016, 5:10 IST

ಹಾಸನ: ವಿಶ್ವಕರ್ಮ ಸಮುದಾಯದ ಆರಾಧ್ಯ ದೈವ ಅಮರಶಿಲ್ಪಿ ಜಕಣಾಚಾರಿ ಅವರ 4ನೇ ರಾಜ್ಯಮಟ್ಟದ ಸಂಸ್ಮರಣಾ ದಿನಾಚರಣೆಯನ್ನು ಜ. 1ರಂದು ಬೇಲೂರಿನ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕಾರ್ಯಕ್ರಮದ ಪ್ರಯುಕ್ತ ಪಾದಯಾತ್ರೆ ಹಮ್ಮಿ ಕೊಂಡಿದ್ದು, ಡಿ. 28ರಂದು ಬೆಳಿಗ್ಗೆ 11 ಕ್ಕೆ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಮೈದಾನ ದಿಂದ ಚಾಲನೆ ನೀಡಲಾಗುವುದು. ವಿಶ್ವಕರ್ಮ ಸಮುದಾಯ ದೇಶಕ್ಕೆ ನೀಡಿದ ಕೊಡುಗೆಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಲಮಾಣಿ ಹಾಗೂ ಯೋಜನಾ ಮಂಡಳಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

28ರ ಮಧ್ಯಾಹ್ನ 2.30ಕ್ಕೆ ವಿಜಯ ನಗರ ಕ್ರಾಸ್, 29ರ ಬೆಳಿಗ್ಗೆ 9ಕ್ಕೆ ಆರೇಕಲ್ ಹೊಸಳ್ಳಿ, ಮಧ್ಯಾಹ್ನ 2 ಗಂಟೆಗೆ ಕಲ್ಕೆರೆ, ರಾತ್ರಿ 9ಕ್ಕೆ ಹಗರೆ, ಡಿ. 30ರ ಮಧ್ಯಾಹ್ನ 2 ಗಂಟೆಗೆ ಸವಾಸೆ ಹಳ್ಳಿ, ಮಲ್ಲಾಪುರ ಮಾರ್ಗವಾಗಿ ಡಿ. 31ರ ರಾತ್ರಿ 7 ಕ್ಕೆ ಯಾತ್ರೆಯು ಬೇಲೂರು ತಲುಪಲಿದೆ ಎಂದರು.

ಜ. 1ರಂದು ನಡೆಯುವ ಕಾರ್ಯಕ್ರಮದಲ್ಲಿ ಅರೇಮಾದನಹಳ್ಳಿ ಕ್ಷೇತ್ರದ ಶಿವಸುಜ್ಞಾನತೀರ್ಥ ಸ್ವಾಮೀಜಿ, ಕಾಳಹಸ್ತೇಂದ್ರ ಸ್ವಾಮೀಜಿ ಭಾಗವಹಿಸು ವರು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸುವರು.

ಸಂಸದ ಎಚ್.ಡಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ವೈ.ಎನ್. ರುದ್ರೇಶ್‌ ಗೌಡ ಧ್ವಜಾರೋಹಣ ನೆರವೇರಿಸುವರು. ಉಸ್ತುವಾರಿ ಸಚಿವ ಎ. ಮಂಜು, ಶಾಸಕ ಸಿ.ಟಿ.ರವಿ, ಪತ್ರಕರ್ತ ರವಿ ಹೆಗಡೆ, ಬಿ. ಸರೋಜಾದೇವಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಸವಣ್ಣ ಕಾಲ್ಪನಿಕ ವ್ಯಕ್ತಿಯೇ ?: ವಿಶ್ವದ ಶಿಲ್ಪಕಲೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ವಿಶ್ವಕರ್ಮರು ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲು ಸಾಧ್ಯವಾಗಿಲ್ಲ ಎಂದು ಅಸ ಮಾಧಾನ ವ್ಯಕ್ತಪಡಿಸಿದ ನಂಜುಂಡಿ,  ಜಕಣಾಚಾರಿ ಕಾಲ್ಪನಿಕ ವ್ಯಕ್ತಿ ಎನ್ನುವ ಸಂಶೋಧಕರು ಬಸವಣ್ಣ ಅವರನ್ನು ಕೂಡ ಕಾಲ್ಪನಿಕ ಎನ್ನಬಹುದಲ್ಲ ಎಂದು ಪ್ರಶ್ನಿಸಿದರು.

ಬೇಲೂರಿನ ಚನ್ನಕೇಶವ ದೇವಸ್ಥಾನವನ್ನು ಶಿಲ್ಪಕಲೆಗಳಿಂದ ನಿರ್ಮಾಣ ಮಾಡಿದ ಅಮರಶಿಲ್ಪಿ ಜಕಣಾಚಾರಿಯವರ ಪ್ರತಿಮೆಯನ್ನು ಅದೇ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲು ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.

ಅರೇಮಾದನಹಳ್ಳಿ ಮಠದ ಶಿವಸುಜ್ಞಾನಮೂರ್ತಿ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ನಗರಸಭೆ ಸದಸ್ಯ ಪ್ರಸನ್ನ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.