ADVERTISEMENT

ಹುಣಸಿನಕೆರೆಯಲ್ಲಿ ವಲಸೆ ಹಕ್ಕಿಗಳ ನಿನಾದ

₹ 2.5 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಯೋಜನೆ-– ಶಾಸಕ ಪ್ರಕಾಶ್‌

ಕೆ.ಎಸ್.ಸುನಿಲ್
Published 9 ಜನವರಿ 2017, 8:30 IST
Last Updated 9 ಜನವರಿ 2017, 8:30 IST
ಹಾಸನದ ಹುಣಸಿನಕೆರೆಯಲ್ಲಿ ಬೀಡು ಬಿಟ್ಟಿರುವ ವಲಸೆ ಹಕ್ಕಿಗಳು
ಹಾಸನದ ಹುಣಸಿನಕೆರೆಯಲ್ಲಿ ಬೀಡು ಬಿಟ್ಟಿರುವ ವಲಸೆ ಹಕ್ಕಿಗಳು   

ಹಾಸನ: ನಗರದ ಹುಣಸಿನಕೆರೆಯಲ್ಲಿ ಈಗ ವಲಸೆ ಹಕ್ಕಿಗಳ ನಿನಾದ ಕೇಳಿ ಬರುತ್ತಿದೆ.  ಎತ್ತರದಲ್ಲಿ ಹಾರಾಡುವ, ದೂರದವರೆಗೂ ವಲಸೆ ಹೋಗುವ ಹಕ್ಕಿಗಳು ಇಲ್ಲಿನ ಕೆರೆಗೆ ಕಾಲಿಟ್ಟಿವೆ.

ನವೆಂಬರ್‌ ತಿಂಗಳಿನಿಂದಲೇ ವಿವಿಧ ಜಾತಿಯ ನೂರಾರು ಹಕ್ಕಿಗಳ ವಲಸೆ ಶುರುವಾಗಿದ್ದು, ಆಹಾರ ಹಾಗೂ ಸಂತಾನೋತ್ಪತ್ತಿಗಾಗಿ ಬರುವ ವಿವಿಧ ಪಕ್ಷಿಗಳು ಪಕ್ಷಿಪ್ರಿಯರು ಮತ್ತು ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿವೆ. ನಿತ್ಯ ಪಕ್ಷಿಪ್ರಿಯರು, ಮಕ್ಕಳು, ಹಿರಿಯರು ಭೇಟಿ ನೀಡಿ ಹಕ್ಕಿಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದು, ಛಾಯಾ ಗ್ರಾಹಕರು ಕ್ಯಾಮೆರಾಗಳಲ್ಲಿ ಪಕ್ಷಿಗಳನ್ನು ಸೆರೆ ಹಿಡಿಯತ್ತಿದ್ದಾರೆ.

ಬಣ್ಣದ ಕೊಕ್ಕರೆ, ಕಂದು ಬಾತು, ಬಾಯ್ಕಳಕ, ಗ್ರೇಟ್‌ ಇಂಡಿಯನ್‌ ಕಾರ್ಮೊರಾಂಟ್‌, ಲಿಟಲ್‌ ಎಗ್ರೇಟ್‌, ಕ್ಯಾಟಲ್‌ ಎಗ್ರೇಟ್‌, ಗ್ರೇ ಹೆರಾನ್‌, ನೈಟ್‌ ಹೆರಾನ್‌  ಸೇರಿದಂತೆ ಅಂದಾಜು 15 ಜಾತಿಯ ಹಕ್ಕಿಗಳು ಸಹಸ್ರ ಸಂಖ್ಯೆಯಲ್ಲಿ ಬಂದಿವೆ.

ಟಿಬೆಟ್‌, ಸೈಬೀರಿಯಾ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಕಂಡು ಬರುವ ಈ ಪಕ್ಷಿಗಳು, ಸಾಮಾನ್ಯವಾಗಿ ಚಳಿಗಾಲದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬರುತ್ತವೆ. ಅಕ್ಟೋಬರ್‌ನಿಂದ ವಿಪರೀತ ಪ್ರಮಾಣದಲ್ಲಿ ಹಿಮ ಸುರಿಯಲು ಶುರುವಾಗುತ್ತದೆ. ಕೊರೆವ ಚಳಿಯಿಂದ ರಕ್ಷಣೆ ಬಯಸಿ ಹಾಗೂ ಆಹಾರ ಹುಡುಕಿ ಸಾವಿರಾರು ಕಿ.ಮೀ ದೂರ ಕ್ರಮಿಸುವ ಮೂಲಕ ಇಲ್ಲಿಗೆ ಬರುತ್ತವೆ. ಮಾರ್ಚ್‌ನಲ್ಲಿ ಮೂಲ ವಾಸಸ್ಥಳಗಳಿಗೆ ವಾಪಸ್‌ ಹೋಗುತ್ತವೆ.

ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುವ ವಲಸೆ ಹಕ್ಕಿಗಳನ್ನು ಹಲವರು ಬೇಟೆಯಾಡಿ ತಿನ್ನುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಪರಿಸರ ಪ್ರೇಮಿಗಳು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಿ, ಸುತ್ತಲೂ ಬೇಲಿ ಹಾಕುವ ಕಾರ್ಯ ನಡೆಯುತ್ತಿದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಪರಿಸರ ಪ್ರೇಮಿ ಬಿ.ಆರ್.ದೇಸಾಯಿ, ‘ಹುಣಸಿನಕೆರೆಗೆ ಪ್ರತಿ ವರ್ಷ ದೇಶ, ವಿದೇಶಗಳಿಂದ ಸಾವಿರಾರು ಪಕ್ಷಿಗಳು ಬರುತ್ತವೆ. ಪರಿಸರ ಮತ್ತು ಅರಣ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಕೆರೆಗೆ ಚರಂಡಿ ನೀರು ಹರಿದು ನೀರು ಕಲುಷಿತಗೊಳ್ಳುತ್ತಿದೆ. ಹೀಗಾಗಿ, ಹಕ್ಕಿಗಳು ಇಲ್ಲಿಂದ ಬೇಗ  ಹೊರಟು ಹೋಗುತ್ತವೆ. ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಪಶು ವೈದ್ಯಕೀಯ ಕಾಲೇಜು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಎಚ್.ಎಸ್.ಪ್ರಕಾಶ್ ಅವರು, ‘ಆಧುನೀಕರಣದಿಂದಾಗಿ ಕೆರೆಗಳು ಕಣ್ಮರೆಯಾಗುತ್ತಿವೆ. ಭವಿಷ್ಯದ ಹಿತದೃಷ್ಟಿ ಯಿಂದ ನೈಸರ್ಗಿಕ ಸಂಪನ್ಮೂಲ ಕಾಪಾಡುವುದು ಎಲ್ಲರ ಜವಾಬ್ದಾರಿ. ಕೆರೆ ಅಭಿವೃದ್ಧಿಗೆ ₹ 2.50 ಕೋಟಿ ಮೀಸಲಿಡಲಾಗಿದೆ. ಕೆರೆ ಸಮೀಪ ಉದ್ಯಾನ, ಮಕ್ಕಳ ಆಟಿಕೆ ಸಾಮಗ್ರಿ, ಶಾಶ್ವತ ಕುಡಿಯುವ ನೀರು ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಇನ್ನೂ  ಒಂದೂವರೆ ಕೋಟಿ ಕಾಮಗಾರಿ ಟೆಂಡರ್‌ ಕರೆಯಲಾಗುವುದು’  ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.