ADVERTISEMENT

ಹೆದ್ದಾರಿಯಲ್ಲಿ ರೈತನ ಶವವಿಟ್ಟು ಪ್ರತಿಭಟನೆ

ಜನರಿಗಾಗಿ ಜೈಲಿಗೆ ಹೋಗಲೂ ಸಿದ್ಧ: ಶಾಸಕ ಎಚ್‌.ಕೆ.ಕುಮಾರಸ್ವಾಮಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:44 IST
Last Updated 13 ಮಾರ್ಚ್ 2017, 6:44 IST

ಸಕಲೇಶಪುರ: ಕಾಡಾನೆ ದಾಳಿಗೆ ಸಿಕ್ಕಿ ಮೃತಪಟ್ಟ ಕುದುರಂಗಿ ಗ್ರಾಮದ ರಮೇಶ್‌ ಆಚಾರ್‌ ಅವರ ಮೃತದೇಹವನ್ನು ಭಾನುವಾರ ಪಟ್ಟಣದ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಟ್ಟು ಶಾಸಕ ಎಚ್‌.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ  ಜನಪ್ರತಿನಿಧಿಗಳು, ಗ್ರಾಮಸ್ಥರು  ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಒಂದು ತಿಂಗಳಲ್ಲಿ ಆಲೂರು– ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಡಾನೆ ದಾಳಿಗೆ ಮೂವರು ಬಲಿಯಾಗಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಆನೆಗಳು ಕಾಡು ಬಿಟ್ಟು  ವಿವಿಧ ಗ್ರಾಮಗಳಲ್ಲಿ ಅಲೆದಾಡುತ್ತಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ, ಆಸ್ತಿ ಹಾನಿ ಮಾಡಿವೆ. ಜನರು ಮನೆಯಿಂದ ಹೊರ ಬರಲು, ತೋಟ, ಗದ್ದೆ, ರಸ್ತೆಗಳಲ್ಲಿ ನಡೆದಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ತೋಟ, ಗದ್ದೆಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎಂಬ ನಂಬಿಕೆ ಕಳೆದುಕೊಂಡು ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದು ಪಟಾಕಿ ಸಿಡಿಸಿ ಆನೆ ಓಡಿಸಿದರೆ ಅವುಗಳು ಗಾಬರಿ ಹಾಗೂ ಸಿಟ್ಟಿನಿಂದ ಪಕ್ಕದ ಗ್ರಾಮಕ್ಕೆ ನುಗ್ಗುತ್ತಿವೆ. ಎದುರು ಬಂದವರ ಮೇಲೆ ದಾಳಿ ಮಾಡಿ ಬಲಿ ಪಡೆಯುತ್ತಿವೆ. ಇದರಿಂದಾಗಿ ಆನೆಗಳ ಕಾಟದಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೀವಕ್ಕೂ ಕುತ್ತು ಬಂದಿದೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ತಮ್ಮ ಸಿಟ್ಟು ಹೊರ ಹಾಕಿದರು.

ಸಾವಿನೊಂದಿಗೆ ಸರ್ಕಾರ ಚೆಲ್ಲಾಟ: ‘ಆನೆಗಳ ಉಪಟಳ ತಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.  ಪೊಲೀಸರು ನಮ್ಮನ್ನು ಬಂಧಿಸಿದರೂ ಹೆದರುವುದಿಲ್ಲ, ಜನರಿಗಾಗಿ ಜೈಲಿಗಷ್ಟೇ ಅಲ್ಲ; ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧ’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳಿದರು.

ಒಂದೇ ತಿಂಗಳಲ್ಲಿ ಆಲೂರಿನಲ್ಲಿ ರಂಗೇಗೌಡ, ಸಕಲೇಶಪುರ ತಾಲ್ಲೂಕಿನಲ್ಲಿ ಬಾಬೂ ಪೂಜಾರಿ, ರಮೇಶ್‌ ಆಚಾರ್‌ ಮೂವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಸೋಮಶೇಖರ್ ಎಂಬುವವರು ಆನೆ ದಾಳಿಯಿಂದ ಅಂಗ ವೈಕಲ್ಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಸಾವು ಬದುಕಿನೊಂದಿಗೆ ನರಳುತ್ತಿದ್ದಾರೆ. ಕುಟುಂಬದ ಮುಖ್ಯಸ್ಥನ ಸಾವಿಗೆ ಸರ್ಕಾರ ₹ 5 ಲಕ್ಷ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಇದರಿಂದ ಯಾವುದೇ ಶಾಶ್ವತ ಪರಿಹಾರ ಆಗುವುದಿಲ್ಲ. ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡುವುದೊಂದೇ ಶಾಶ್ವತ ಪರಿಹಾರ ಎಂದರು.

ಆಲೂರು ತಾಲ್ಲೂಕು ನಾಗಾವರದಲ್ಲಿ ಶಾಶ್ವತ ಆನೆ ಕ್ಯಾಂಪ್‌ ಆಗಬೇಕು. ಹೊಂಗಡಹಳ್ಳ, ಅತ್ತಿಹಳ್ಳಿ ಭಾಗದಲ್ಲಿ ಕೂಡಲೇ ಆನೆ ಕಾರಿಡಾರ್‌ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಕಳೆದ ಒಂದೂವರೆ ವರ್ಷದಿಂದ ಕಾಡಾನೆ ದಾಳಿಯಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು. ಊರಿಗೆ ಬರುವ ಆನೆಗಳನ್ನು ಕಾಡಿಗೆ ಅಟ್ಟಲು ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಬೇಕು. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಕನಿಷ್ಠ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಶಾಸಕರು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂ. ಸದಸ್ಯ ಸುಪ್ರದೀಪ್ತ ಯಜಮಾನ್‌, ಯುವ ಜನತಾದಳ ಅಧ್ಯಕ್ಷ ಸ.ಬ. ಭಾಸ್ಕರ್‌, ತಾ.ಪಂ. ಉಪಾಧ್ಯಕ್ಷ ಯಡೇಹಳ್ಳಿ ಆರ್‌ ಮಂಜುನಾಥ್‌, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ಮಂಜುನಾಥ್‌, ಸದಸ್ಯೆ ಚಂದ್ರಮತಿ, ಎಪಿಎಂಸಿ ಸದಸ್ಯ ಬಾಗರಹಳ್ಳಿ ಪುಟ್ಟಸ್ವಾಮಿಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್‌ ಆಳ್ವ, ಹಾಸನ ಜಿಲ್ಲಾ ಪ್ಲಾಂಟರ್‍ಸ್ ಸಂಘದ ಪ್ರಧಾನ ಕಾರ್ಯದರ್ಶಿ ಹೆಬ್ಬಸಾಲೆ ಪ್ರಕಾಶ್‌, ವಿಶ್ವಕರ್ಮ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.

ಅಧಿಕಾರಿಗಳ ಭೇಟಿ: ಸ್ಥಳಕ್ಕೆ ಡಿಎಫ್‌ಓ ಮಂಜುನಾಥ್‌, ಎಸಿಎಫ್‌ ರಮೇಶ್‌ಬಾಬು, ಆರ್‌ಎಫ್‌ಓ ಮೋಹನ್‌್, ಪಿಎಸ್‌ಐ ಜಗದೀಶ್‌  ಹಾಗೂ ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಯುವವರೆಗೂ ಆಸ್ಪತ್ರೆಯಲ್ಲಿಯೇ ಇದ್ದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಗ್ರಾಮಸ್ಥರನ್ನು ಸಮಾಧಾನಪಡಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡರು.

ಆರ್‌ಎಫ್‌ಒ ವಿರುದ್ಧ ದೂರು: ತಾಲ್ಲೂಕಿನ ಯಸಳೂರು ಗ್ರಾಮದ ರವಿತೇಜ್‌ ಅವರ ತೋಟಕ್ಕೆ ಕಾಡಾನೆಗಳು ನುಗ್ಗಿ ಅಡಿಕೆ ಬಾಳೆ ಹಾಗೂ ಕಾಫಿ ಗಿಡಗಳನ್ನು ನಾಶ ಮಾಡಿವೆ. ಈ ಬಗ್ಗೆ ರವಿತೇಜ್‌ ಅವರು ಯಸಳೂರು ಆರ್‌ಎಫ್‌ಒ ಮರಿಸ್ವಾಮಿ ಅವರಿಗೆ ದೂರವಾಣಿ ಮೂಲಕ ತೋಟಕ್ಕೆ ಕಾಡಾನೆಗಳು ಬಂದಿವೆ ಎಂದು ಮಾಹಿತಿ ನೀಡುತ್ತಿದ್ದಂತೆಯೇ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ರವಿತೇಜ್‌ ಆರೋಪಿಸಿದ್ದಾರೆ.

ಆರ್‌ಎಫ್‌ ಒ ವಿರುದ್ಧ ದೂರು ನೀಡುವುದಲ್ಲದೆ ಬೆಳೆಗಾರರ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರವಿತೇಜ ತಿಳಿಸಿದ್ದಾರೆ.

20 ಕಾಡಾನೆ ಸ್ಥಳಾಂತರಿಸಲು ಸರ್ಕಾರಕ್ಕೆ ಪ್ರಸ್ತಾವ: ಸುಗಾರ
ಸಕಲೇಶಪುರ:
ಮಾನವ ಸಂಘರ್ಷಕ್ಕೆ ಇಳಿದಿರುವ ಸುಮಾರು 20 ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುಗಾರ ಹೇಳಿದರು.

ಕಾಡಾನೆ ಸಮಸ್ಯೆ ಅಧ್ಯಯನಕ್ಕಾಗಿ ಭಾನುವಾರ ತಾಲ್ಲೂಕಿಗೆ ಭೇಟಿ ನೀಡಿದ್ದ ಅವರು, ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹಾಗೂ ಅರಣ್ಯ ಇಲಾಖೆಯ ಇತರ ಅಧಿಕಾರಿಗಳೊಂದಿಗೆ ಮುಕ್ತ ಚರ್ಚೆ ಸಂದರ್ಭದಲ್ಲಿ ಮಾತನಾಡಿದರು.
 
ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದೂ ಸೇರಿದಂತೆ ಸುಮಾರು 20 ಪುಂಡಾನೆಗಳನ್ನು ಹಿಡಿಯುವುದು ಅನಿವಾರ್ಯವಾಗಿದೆ. ದಿನದಿಂದ ದಿನಕ್ಕೆ ಆನೆ ದಾಳಿಯಿಂದ ಪ್ರಾಣಹಾನಿ ಸಂಖ್ಯೆ ಹೆಚ್ಚುತ್ತಲೇ ಇದೆ. ಸಮಸ್ಯೆ ಗಂಭೀರತೆಯನ್ನು ಸರ್ಕಾರಕ್ಕೆ ವರದಿಯಲ್ಲಿ ತಿಳಿಸಲಾಗುವುದು. ಕಾಡಾನೆ ಸಮಸ್ಯೆ  ಶಾಶ್ವತ ಪರಿಹಾರಕ್ಕೆ ಶಕ್ತಿ ಮೀರಿ ಯತ್ನಿಸಲಾಗುವುದು ಎಂದರು.

ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ಕಾಡಾನೆಗಳನ್ನು ಹಿಡಿಯುವಂತೆ ವಿಧಾನಸಭೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು. ಸಂಬಂಧಪಟ್ಟ ಸಚಿವರು ಮುಖ್ಯಮಂತ್ರಿ ಗಮನಕ್ಕೂ ಸಹ ಈಗಾಗಲೇ ತರಲಾಗಿದೆ ಎಂದರು. ಹೊಂಗಡಹಳ್ಳ, ಅತ್ತಿಹಳ್ಳಿ ಭಾಗದಲ್ಲಿ ಸರ್ಕಾರಿ ಹಾಗೂ ಹಿಡುವಳಿ ಸೇರಿದಂತೆ ಸುಮಾರು 22 ಸಾವಿರ ಎಕರೆ ಪ್ರದೇಶದಲ್ಲಿ ಆನೆ ಕಾರಿಡಾರ್‌ ನಿರ್ಮಾಣ ಮಾಡುವ ಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೇಂದ್ರ ಪರಿಸರ ಸಚಿವಾಲಯಕ್ಕೆ ಕಳುಹಿಸಿದೆ. ಅಗತ್ಯ ಬಿದ್ದರೆ ದೆಹಲಿಯ ಪರಿಸರ ಸಚಿವಾಲಯಕ್ಕೂ ಸಹ ಭೇಟಿ ನೀಡಿ ಆದಷ್ಟು ಬೇಗ ಅನುಮತಿ ನೀಡುವಂತೆ ಒತ್ತಡ ತರಲಾಗುವುದು ಎಂದರು.

ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ. ಸಿಂಗ್‌, ಡಿಎಫ್‌ಓ ಮಂಜುನಾಥ್‌, ಎಸಿಎಫ್‌ ರಮೇಶ್‌ಬಾಬು,  ಆರ್‌ಎಫ್‌ಓ ಮೋಹನ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.