ADVERTISEMENT

‘ಸಂಸ್ಕೃತಿಯ ಬೇರಿಗೆ ಸತ್ವ ತುಂಬಿ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2014, 6:29 IST
Last Updated 3 ನವೆಂಬರ್ 2014, 6:29 IST
ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಸಂಭ್ರಮದ ಅಂಗವಾಗಿ ಭಾನುವಾರ ಹಾಸನದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾ ಕವಿಗೋಷ್ಠಿ’ಯನ್ನು ಉದ್ಘಾಟಿಸಿ ಲೇಖಕಿ ಬಾನು ಮುಷ್ತಾಕ್‌ ಮಾತನಾಡಿದರು. ಉಷಾ ಕೃಷ್ಣಮೂರ್ತಿ, ಸ.ಉಷಾ ಹಾಗೂ ರೂಪಾ ಹಾಸನ ಚಿತ್ರದಲ್ಲಿದ್ದಾರೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಸಂಭ್ರಮದ ಅಂಗವಾಗಿ ಭಾನುವಾರ ಹಾಸನದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾ ಕವಿಗೋಷ್ಠಿ’ಯನ್ನು ಉದ್ಘಾಟಿಸಿ ಲೇಖಕಿ ಬಾನು ಮುಷ್ತಾಕ್‌ ಮಾತನಾಡಿದರು. ಉಷಾ ಕೃಷ್ಣಮೂರ್ತಿ, ಸ.ಉಷಾ ಹಾಗೂ ರೂಪಾ ಹಾಸನ ಚಿತ್ರದಲ್ಲಿದ್ದಾರೆ   

ಹಾಸನ: ‘ಇಂದಿನ ವೇಗದ ಜಗತ್ತು ನಮ್ಮ ಕಲೆ, ಸಂಸ್ಕೃತಿ, ಸಂಬಂಧಗಳನ್ನು ನಾಶಮಾಡುತ್ತಿದೆ. ಕಲೆ ಸಂಸ್ಕೃತಿಯ ಬೇರುಗಳಿಗೆ ಜೀವಸತ್ವ ನೀಡುವ ಕೆಲಸವನ್ನು ಸಾಹಿತಿಗಳು ಮಾಡಬೇಕು’ ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಸಂಭ್ರಮದ ಅಂಗವಾಗಿ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಕಾವ್ಯ ಸಪ್ತಾಹ –2014’ರ ಅಡಿ ಭಾನುವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೆ ಶೋಷಕ ವ್ಯವಸ್ಥೆಯ ವಿರುದ್ಧದ ಧ್ವನಿ ಹಾಸನದಿಂದಲೇ ಮೊಳಗಿತ್ತು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ನಮ್ಮನ್ನು ಮುನ್ನಡೆಸುತ್ತ ಬಂದ ವ್ಯವಸ್ಥೆ ನಮ್ಮ ಕಣ್ಣಮುಂದೆ ಕುಸಿಯುತ್ತಿದೆ. ಮಾಧ್ಯಮ ಲೋಕವೂ ಉದ್ಯಮಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಕಾಗುತ್ತಿದೆ. ಪ್ರಾಮಾಣಿಕ ಪತ್ರಕರ್ತರು ವ್ಯವಸ್ಥೆಯ ಒಳಗಿನ ಉಸಿರುಗಟ್ಟಿಸುವ ವಾತಾವರಣದಲ್ಲಿ ಕಣ್ಣೀರಿಡುತ್ತಿದ್ದಾರೆ.

ವೈದ್ಯಕೀಯ ಕ್ಷೇತ್ರ, ನ್ಯಾಯಾಂಗ ಮುಂತಾದ ಎಲ್ಲ ವ್ಯವಸ್ಥೆಗಳೂ ಕುಸಿಯುತ್ತಿವೆ. ಸಂವೇದನೆಯ ಸೂಕ್ಷ್ಮತೆಯನ್ನು ಉಳಿಸುವುದೇ ಇಂದಿನ ದೊಡ್ಡ ಸವಾಲಾಗಿದೆ. ಮಾರುಕಟ್ಟೆ ಸಂಸ್ಕೃತಿಯ ಜತೆ ಕನ್ನಡದ ಕವಿಗಳು ಮುಖಾಮುಖಿ­ಯಾಗುತ್ತಿಲ್ಲ ಎಂಬುದು ಬೇಸರದ ವಿಚಾರ’ ಎಂದು ಬಾನು ಮುಷ್ತಾಕ್‌ ಹೇಳಿದರು.

ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಸಾಹಿತ್ಯ ಅಕಾಡೆಮಿ ಸದಸ್ಯೆ ರೂಪಾ ಹಾಸನ, ‘ನಮ್ಮ ಸಂವೇದನೆಗಳು ಮತ್ತು ಸೂಕ್ಷ್ಮತೆ­ಗಳನ್ನು ಕೊಲ್ಲುವ ಸನ್ನಿವೇಶಗಳು ಆಗಾಗ ಎದುರಾಗು­ತ್ತಿವೆ. ಇದರಿಂದಾಗಿ ಸಂವೇದನೆ­ಗಳನ್ನು ಕಲ್ಲು­ಮಾಡ-­ಬೇಕಾದ ಅನಿವಾರ್ಯತೆ ಇದೆ. ಎಂಥ ಸ್ಥಿತಿ ಬಂದರೂ ಸೂಕ್ಷ್ಮ ಸಂವೇದನೆಗಳನ್ನು ಜೀವಂತ­ವಾಗಿ­ಡುವುದು ಜವಾಬ್ದಾರಿ’ ಎಂದರು.
ಪ್ರೊ.ಸ.ಉಷಾ ಅಧ್ಯಕ್ಷತೆ ವಹಿಸಿದ್ದರು. 20 ಕವಿಗಳು ಕವನಗಳನ್ನು ಓದಿದರು. ವೇದಾವತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.