ADVERTISEMENT

15ರೊಳಗೆ ಬೆಳೆ ವಿಮೆ ನೋಂದಣಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 9:23 IST
Last Updated 8 ಜುಲೈ 2017, 9:23 IST

ಹಾಸನ: ‘ಕೆಲವೊಂದು ಮಳೆ ಆಶ್ರಿತ ಬೆಳೆಗಳಿಗೆ ವಿಮೆ ಪಾವತಿಸಲು ಜುಲೈ 15 ಕಡೆ ದಿನವಾಗಿದ್ದು, ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಅಗತ್ಯ ಸಹಕಾರ ನೀಡಬೇಕು’ ಎಂದು ಕೃಷಿ, ಕಂದಾಯ, ಬ್ಯಾಂಕ್, ವಿಮಾ ಕಂಪೆನಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿ.ಚೈತ್ರಾ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಅವರು ಸಭೆ ನಡೆಸಿದರು ಕೃಷಿ ಇಲಾಖೆ ಮಾರ್ಗಸೂಚಿಯಂತೆ ಹೆಸರು, ಎಳ್ಳು, ನೆಲಗಡಲೆ, ಅಲಸಂದೆ, ಹತ್ತಿ, ಆಲೂಗೆಡ್ಡೆ  ಬೆಳೆಗಳಿಗೆ ವಿಮಾ ಕುರಿತು ಪಾವತಿಸಲು ಜುಲೈ15 ಕಡೆ ದಿನ.

ಹಾಗಾಗಿ ಅತ್ಯಂತ ಕಡಿಮೆ ಅವಧಿ ಇರುವುದರಿಂದ ಬ್ಯಾಂಕ್‌ಗಳಲ್ಲಿ  ಸಾಲ ಪಡೆದಿರುವ ಹಾಗೂ ಸಾಲ ಪಡೆಯುವ ರೈತರಿಂದ ವಿಮಾ ಕಂತು ಕಟ್ಟಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

ಜುಲೈ 15 ರೊಳಗೆ ಗಡುವಿನ ವ್ಯಾಪ್ತಿಗೆ ಬರುವ ಬೆಳೆಗಳು, ಜುಲೈ 31 ಹಾಗೂ ಆಗಸ್ಟ್ ತಿಂಗಳಲ್ಲಿ ಯಾವ ಬೆಳೆಗಳಿಗೆ ವಿಮಾ ಕಂತು ಎಷ್ಟು ಪಾವತಿಸಬೇಕೆಂಬ ಬಗ್ಗೆ  ಮಾಧ್ಯಮಗಳು, ಬ್ಯಾಂಕ್‌ಗಳ ಮೂಲಕ ಹಾಗೂ ಕೃಷಿ ಅನುವುಗಾರರ ನೆರವಿನಿಂದ  ರೈತರಲ್ಲಿ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜುಲೈ 15 ರವರೆಗೆ ಬ್ಯಾಂಕ್‌ಗಳಲ್ಲಿ ವಿಮೆ ಕಂತು ಪಾವತಿಸಿಕೊಳ್ಳಿ, ಬೆಳೆ ವಿಮಾ ನಮೂದಿಸಿ ಕಂಪ್ಯೂಟರ್ ಆರ್.ಟಿ.ಸಿ. ಒದಗಿಸಲು ಎಲ್ಲಾ ತಾಲ್ಲೂಕು ಕಚೇರಿ  ಹಾಗೂ ನಾಡ ಕಚೇರಿಗಳಲ್ಲಿ ವಿಳಾಸ ಹೆಚ್ಚುವರಿ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ.

ಮಳೆ ಆಶ್ರಿತ ಬೆಳೆಗಳ ವಿಮಾ ಕಂತುಗಳನ್ನು ಮೊದಲು ಕಟ್ಟಿಸಿಕೊಳ್ಳಿ, ಸಾಲ ಮಾಡುವ ರೈತರಿಗೆ ಬ್ಯಾಂಕ್‌ಗಳಲ್ಲಿ  ವಿಮಾ ಕಂತು ಕಟ್ಟಿಸಿಕೊಳ್ಳಲಾಗುತ್ತಿದೆ ಇವರೊಂದಿಗೆ ಸಾಲ ಮಾಡದಿರುವ ರೈತರಿಂದಲೂ ವಿಮಾ ಕಂತು ಕಟ್ಟಿಸುವ ಬಗ್ಗೆ ಗಮನ ಹರಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.

ವಿಮೆ ಹಣ ತಲುಪಿಲ್ಲ: ಕಳೆದ ವರ್ಷ ಬೇಲೂರು ತಾಲ್ಲೂಕಿನ ಹಳೇಬೀಡು, ಅರಸೀಕೆರೆ ತಾಲ್ಲೂಕಿನ ಬಾಣಾವಾರ ಗ್ರಾಮಗಳಲ್ಲಿ ರೈತರಿಗೆ ಸಮರ್ಪಕವಾಗಿ ವಿಮಾ ಹಣ ದೊರೆತಿಲ್ಲ. ಈ ರೀತಿ ಈ ವರ್ಷವೂ ಯೂನಿವರ್ಸಲ್ ವಿಮಾ ಕಂಪೆನಿಯವರು ರೈತರಿಗೆ ಸುಲಭವಾಗಿ ಸಿಗಬೇಕು. ಬ್ಯಾಂಕ್‌ಗಳು ಹೆಚ್ಚುವರಿ ಸಿಬ್ಬಂದಿ ನೇಮಿಸಿ ರೈತರಿಂದ ವಿಮೆ ಕಂತು ಕಟ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಜಂಟಿ ಕೃಷಿ ನಿರ್ದೇಶಕ ರಾಮಚಂದ್ರಯ್ಯ, ತಾಲ್ಲೂಕಿನಲ್ಲಿ ಸದರಿ ಯೋಜನೆಯಡಿ ಮುಖ್ಯ ಬೆಳೆಗಳನ್ನು ಹಾಗೂ ಇತರೆ ಬೆಳೆಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸಲಾಗುವುದು ಎಂದರು. ವಿವಿಧ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.