ADVERTISEMENT

19ಕ್ಕೆ ಹೇಮಾವತಿ ಸ್ವಚ್ಛತಾ ಆಂದೋಲನ

ಸಾರ್ವಜನಿಕರಿಗೆ ಅರಿವು ಮೂಡಿಸಲು ನದಿ ಹಬ್ಬ ಆಚರಣೆ: ಮರಿ ಜೋಸೆಫ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 6:27 IST
Last Updated 11 ಫೆಬ್ರುವರಿ 2017, 6:27 IST

ಹಾಸನ: ಜಿಲ್ಲೆಯ ಜೀವನಾಡಿ ಹೇಮಾವತಿ ನದಿ ಸ್ವಚ್ಛಗೊಳಿಸುವ ಆಂದೋಲನವನ್ನು ಫೆ. 19ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕು ವೇದಿಕೆ ಜಿಲ್ಲಾ ಸಂಚಾಲಕ ಮರಿ ಜೋಸೆಫ್‌ ತಿಳಿಸಿದರು.


ಹೇಮಾವತಿ, ಯಗಚಿ ನದಿ ಪಶ್ಚಿಮಘಟ್ಟಗಳಲ್ಲಿ ಹುಟ್ಟಿ ಚಿಕ್ಕಮಗಳೂರು, ಹಾಸನ, ತುಮಕೂರು ಮತ್ತು ಮೈಸೂರು ಜಿಲ್ಲೆ ಜನರ ಬದುಕನ್ನು ಹಸನಾಗಿಸಿವೆ. ಪ್ರಸ್ತುತ ಹೇಮಾವತಿ ನದಿಯಿಂದ ನಗರಕ್ಕೆ 60 ಲಕ್ಷ ಲೀಟರ್‌ ನೀರು ಬಳಸಿಕೊಳ್ಳಲಾಗುತ್ತಿದ್ದು, ಶುದ್ಧೀಕರಣಕ್ಕೆ ಆದ್ಯತೆ ನೀಡುತ್ತಿಲ್ಲ. ನದಿಗೆ  ಪ್ಲಾಸ್ಟಿಕ್‌ ಬಾಟಲ್‌ ಬಿಸಾಡುವುದು, ದಂಡೆಯಲ್ಲಿ ಶವ ಸಂಸ್ಕಾರ ಮಾಡುವುದು, ಮಾಟ ಮಂತ್ರದಿಂದಾಗಿ ಸುಮಾರು 15 ಕಿ.ಮೀ ನದಿ ನೀರು ಮಲೀನಗೊಂಡಿದೆ. ಈ ನೀರನ್ನು ಕುಡಿಯಲು ಮತ್ತು ಕೃಷಿಗೆ ಬಳಸುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತೇವೆ  ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.


ಸಮಗ್ರ ಫೌಂಡೇಷನ್‌ ಅಧ್ಯಕ್ಷ ಡೇವಿಡ್‌ ಕುಮಾರ್‌ ಮಾತನಾಡಿ, ಮಳೆ ಇಲ್ಲದೆ ಶೇಕಡಾ 65ರಷ್ಟು ನೀರಿನ ಮೂಲ ಬತ್ತಿ ಹೋಗಿದೆ. ನಗರದ 10 ಕೆರೆ ಪೈಕಿ 9ರಲ್ಲಿ ನೀರು ಇಲ್ಲ. ಮುಂದಿನ ದಿನಗಳಲ್ಲಿ ಜಲಕ್ಷಾಮ ಉಂಟಾಗಲಿದೆ ಎಂದರು.

ADVERTISEMENT


ಸಮಗ್ರ ಫೌಂಡೇಷನ್‌, ಮಾನವ ಹಕ್ಕು ವೇದಿಕೆ, ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ, ಪ್ರಗತಿಪರ ಸಂಘಟನೆಗಳು ಮತ್ತು ಸ್ವಯಂ ಸೇವಕರ ಸಹಯೋಗದೊಂದಿಗೆ ಶೆಟ್ಟಿಹಳ್ಳಿ ಹಳೇ ದೇವಾಲಯದ ಬಳಿ ನದಿ ಆವರಣದಲ್ಲಿನ ಕಸ, ಪ್ಲಾಸ್ಟಿಕ್‌ ಸ್ವಚ್ಛಗೊಳಿಸುವುದು, ಸಾರ್ವಜನಿಕರು ಮತ್ತು ಪ್ರವಾಸಿಗರಲ್ಲಿ ನದಿ, ಪರಿಸರ ಕುರಿತು ಅರಿವು ಮೂಡಿಸುವುದು, ನದಿ ಹಬ್ಬದ ಆಚರಣೆಯೊಂದಿಗೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಜಾನಪದ ಕಲೆ ಪ್ರೋತ್ಸಾಹಿಸುವುದು, ನದಿ ಸಂರಕ್ಷಣಾ ಸಮಿತಿ ರಚಿಸಿ ಸ್ಥಳೀಯರ ಮೂಲಕ ನದಿ ಪುನಶ್ಚೇತನ ಹಾಗೂ ನದಿ ಹಿನ್ನೀರಿನ ಪ್ರದೇಶಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಉಳಿಸಲು ಶ್ರಮಿಸಲಾಗುವುದು ಎಂದು ವಿವರಿಸಿದರು.


ವರ್ಷದಲ್ಲಿ ಐದು ಬಾರಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುವುದು. ನದಿ ದಂಡೆ ಬಳಿ ಪ್ರವಾಸಿಗರು ನಡೆಸುವ ಪಾನಗೋಷ್ಠಿಗೆ ಕಡಿವಾಣ ಹಾಕಬೇಕು. ನದಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ದಲಿತ ಮುಖಂಡ ಸತೀಶ್‌, ಸುನಿತಾ ಮೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.