ADVERTISEMENT

₹ 5ಕ್ಕೆ 20 ಲೀಟರ್‌ ಶುದ್ಧ ನೀರು

ಬಾಯಾರಿಕೆ ನೀಗಿಸಲು ಮುಂದಾದ ಸಂಘ– ಸಂಸ್ಥೆಗಳು, ರಾಜಕೀಯ ಮುಖಂಡರು

ಕೆ.ಎಸ್.ಸುನಿಲ್
Published 2 ಜನವರಿ 2017, 10:51 IST
Last Updated 2 ಜನವರಿ 2017, 10:51 IST

ಹಾಸನ: ಬೇಸಿಗೆಗೂ ಮುನ್ನವೇ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಪ್ರಸ್ತುತ ಐದು ದಿನಕ್ಕೊಮ್ಮೆ ನಗರಸಭೆ ನೀರು ಪೂರೈಕೆ ಮಾಡುತ್ತಿದೆ. ಇದರ ನಡುವೆ ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ಗಮನದಲ್ಲಿಟ್ಟುಕೊಂಡು ಜನರ ಮನ ಗೆಲ್ಲಲು ಹೊಸ ಯೋಜನೆ ಆರಂಭಿಸಿದ್ದಾರೆ. ಕಸ ಸಂಗ್ರಹ ಆಟೊ, ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಯೋಜನೆ ಚಾಲನೆ ಪಡೆದುಕೊಂಡಿವೆ.

ಕೆಲ ತಿಂಗಳ ಹಿಂದೆ ನಗರದಲ್ಲಿ ಕಸ ವಿಲೇವಾರಿಗಾಗಿ ತಮ್ಮ ಭಾವಚಿತ್ರ ಇರುವ 8 ಆಟೊಗಳನ್ನು ಬಿಜೆಪಿಯ ಜೆ.ಪ್ರೀತಂ ಗೌಡ ನಿಯೋಜನೆ ಮಾಡಿದರು. ನಂತರ ಕುಡಿಯುವ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲು ಶುರು ಮಾಡಿದರು.

ಅದೇ ಪಕ್ಷದ ತಾಲ್ಲೂಕು ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ‘ಸಹರ ಜನ ಸೇವಾ’ ಟ್ರಸ್ಟ್ ಮೂಲಕ ನಗರದ 35 ವಾರ್ಡ್‌ಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಲು ಮುಂದಾಗಿದ್ದಾರೆ.

ಪ್ರಾಯೋಗಿಕವಾಗಿ ವಿದ್ಯಾನಗರ, ದಾಸರಕೊಪ್ಪಲು ಹಾಗೂ ಗೌರಿಕೊಪ್ಪಲಿನಲ್ಲಿ ₹ 5ಕ್ಕೆ 20 ಲೀಟರ್‌ ಶುದ್ಧ ನೀರು ಸರಬರಾಜು ಮಾಡಲಾ ಗುತ್ತಿದೆ. ಇದಕ್ಕಾಗಿ ಸಾಲಗಾಮೆ ರಸ್ತೆ ತೇಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವನಹಳ್ಳಿಯಲ್ಲಿ ಶುದ್ಧ ನೀರು ಉತ್ಪಾದನಾ ಘಟಕ ತೆರೆಯ ಲಾಗಿದೆ.   ನಾಲ್ಕು ಕೊಳವೆಬಾವಿ ಕೊರೆಸಲಾಗಿದ್ದು, ದಿನಕ್ಕೆ 1 ಲಕ್ಷ ಲೀಟರ್‌ ಶುದ್ಧಿಕರಿಸಿದ ನೀರನ್ನು ಟ್ಯಾಂಕರ್‌ ಮೂಲಕ ವಾರ್ಡ್‌ಗಳಲ್ಲಿ ತೆರೆಯಲಾಗಿರುವ ಘಟಕಗಳಿಗೆ ಪೂರೈಸಲಾಗುತ್ತಿದೆ.

‘ಆರಂಭದಲ್ಲಿ ಕೊಳವೆಬಾವಿ ಮೂಲಕ ನಿತ್ಯ 1 ಲಕ್ಷ ಲೀಟರ್ ನೀರು ಸಂಗ್ರಹಿಸಿ ಶುದ್ಧೀಕರಿಸಲಾಗುವುದು. ಮಂದಿನ ದಿನಗಳಲ್ಲಿ 2 ಲಕ್ಷ ನೀರು ಸಂಗ್ರಹಿಸುವ ಉದ್ದೇಶ ಇದೆ. ನಗರದ 35 ವಾರ್ಡ್‌ಗಳಲ್ಲೂ 2 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಕಂಟೇನರ್‌ ಇಡಲಾಗುವುದು.

ಮುಖ್ಯ ಘಟಕದಿಂದ ಕಂಟೇನರ್‌ಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ.  ಬಾಕ್ಸ್‌ಗೆ ₹ 5 ನಾಣ್ಯ ಹಾಕಿದರೆ 20 ಲೀಟರ್‌ ಶುದ್ಧ ನೀರು ಪಡೆಯಬಹುದು. ಒಟ್ಟು ₹ 1.5 ಕೋಟಿ ವೆಚ್ಚದ ಯೋಜನೆ ಗೆ ಸ್ವಂತ ಹಣ ವಿನಿಯೋಗಿಸಿದ್ದೇನೆ ಹೊರತು ಯಾವುದೇ ನೆರವು ಪಡೆದಿಲ್ಲ. ಸಾರ್ವಜನಿಕರಿಗೆ ನೀರಿನ ದಾಹ ನೀಗಿಸಲು ಈ ಕೆಲಸ ಆರಂಭಿಸಿದ್ದೇನೆ’ ಎನ್ನುತ್ತಾರೆ  ಅಗಿಲೆ ಯೊಗೀಶ್.

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಆದರೆ, ಅದಕ್ಕೂ ಶುದ್ಧ ನೀರು ಪೂರೈಕೆಗೂ ಯಾವುದೇ ಸಂಬಂಧ ಇಲ್ಲ. ಒಂದು ಟ್ಯಾಂಕ್‌ ನೀರು ಸರಬರಾಜಿನ ವೆಚ್ಚ ₹ 400. ಯಾವುದೇ ಲಾಭ ಇಲ್ಲ. ಕೆಲ ದಿನಗಳ ಬಳಿಕ ₹ 5ಕ್ಕೆ 14 ಲೀಟರ್‌ ಶುದ್ಧ ಕುಡಿಯುವ ನೀರು ನೀಡಲಾ ಗುವುದು.

ಈ ಯೋಜನೆ ಯಶಸ್ವಿ ಯಾದರೆ ಹಾಸನ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿಗೂ ವಿಸ್ತರಿಸಲಾ ಗುವುದು’ ಎಂದು ತಿಳಿಸಿದರು. ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವಲ್ಲಿ ಜೆಡಿಎಸ್‌ ಸಹ ಹಿಂದೆ ಬಿದ್ದಿಲ್ಲ. ಕ್ಷೇತ್ರ ಶಾಸಕ ಎಚ್‌.ಎಸ್‌.ಪ್ರಕಾಶ್‌ ಅವರು ಟ್ಯಾಂಕರ್‌ ಮೂಲಕ ನಗರದ ಜನತೆಗೆ ನೀರು ಪೂರೈಸುವ ವ್ಯವಸ್ಥೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.