ADVERTISEMENT

₹ 13 ಸಾವಿರ ಕೋಟಿ ಖರ್ಚು ಮಾಡಲು ಹುಚ್ಚು ಹಿಡಿದಿಲ್ಲ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 10:01 IST
Last Updated 5 ಜನವರಿ 2018, 10:01 IST

ಅರಸೀಕೆರೆ:ರಾಜ್ಯದ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ₹ 13 ಸಾವಿರ ಕೋಟಿ ಖರ್ಚು ಮಾಡಲು ನನಗೆ ಹುಚ್ಚು ಹಿಡಿದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಗುರುವಾರ ವಿರೋಧಪಕ್ಷಗಳಿಗೆ ತಿರುಗೇಟು ನೀಡಿದರು.

ಸರ್ಕಾರದ ಸಾಧನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ‘ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಸಮಸ್ಯೆ ಹೋಗಲಾಡಿಸಲು ಯೋಜನೆಯನ್ನು ಕಾರ್ಯಗತ ಮಾಡಿಯೇ ಸಿದ್ಧ’ ಎಂದು ಘೋಷಿಸಿದರು.

‘ಕೆಲವರು ಈ ಯೋಜನೆ ವೈಜ್ಞಾನಿಕವಾಗಿಲ್ಲ. ನೀರು ಕೊಡಲು ಆಗುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರ ಮಾತು ನಂಬಬೇಡಿ’ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರನ್ನು ಕುಟುಕಿದರು.

ADVERTISEMENT

‘ಈಗಾಗಲೇ ₹ 2 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯಿಂದ ನೀರು ಪೂರೈಕೆ ವಿಳಂಬವಾಗಿದೆ. ಮೇ ತಿಂಗಳಲ್ಲಿ ನೀರು ಮೇಲೆತ್ತುವ ಕಾರ್ಯಾರಂಭವಾಗಲಿದೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ’ಬಿಜೆಪಿ ಕಾರ್ಯಕರ್ತ ದೀಪಕ್ ರಾವ್‌ ಕೊಲೆ ಪ್ರಕರಣ ಸಂಬಂಧ ಗೃಹ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಹತ್ಯೆ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಕೋಮುಗಲಭೆ ಹಿನ್ನೆಲೆಯಲ್ಲಿ ಕೃತ್ಯ ನಡೆದಿದ್ದರೆ ಸೂಕ್ತ ಪರಿಹಾರ ನೀಡಲಾಗುವುದು’ ಎಂದರು.

ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಪರ್ರೀಕರ್‌ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ನಾಟಕ ಆಡುತ್ತಿದ್ದಾರೆ. ಕುಡಿಯುವ ನೀರು ಕೊಡುವ ಬದ್ಧತೆ ಇದ್ದರೆ ನ್ಯಾಯಮಂಡಳಿ ಮುಂದೆ ಇಷ್ಟು ನೀರು ಕೊಡುತ್ತೇವೆ ಎಂದು ಪರ್ರೀಕರ್‌ ಪ್ರಮಾಣಪತ್ರ ಸಲ್ಲಿಸಲಿ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.