ADVERTISEMENT

ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಎಎಸ್‌ಐ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 20:07 IST
Last Updated 22 ಆಗಸ್ಟ್ 2017, 20:07 IST

ಹಿರೇಕೆರೂರ (ಹಾವೇರಿ ಜಿಲ್ಲೆ):  ತಾಲ್ಲೂಕಿನ ಹಂಸಭಾವಿ ಪೊಲೀಸ್‌ ಠಾಣೆಯ ಸಹಾಯಕ ಸಬ್‌ ಇನ್ಸ್‌ಪೆಕ್ಟರ್ ಮೆಹಬೂಬಿ ವೈ. ಅಸಾದಿ, ತಮ್ಮ ಮನೆಯಲ್ಲಿ ಮಂಗಳವಾರ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸರ್ಕಲ್ ಇನ್‌ಸ್ಪೆಕ್ಟರ್ ಸಂಗನಾಥ ಜಿ.ಆರ್‌. ಅವರ ಮಾತಿನಿಂದ ಮನನೊಂದು ನಿದ್ರೆ ಮಾತ್ರೆ ಸೇವಿಸುತ್ತಿರುವುದಾಗಿ ಮೊದಲೇ ಪತ್ರ ಬರೆದಿಟ್ಟಿದ್ದ ಅಸಾದಿ, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದು ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ದೂರುದಾಖಲಾಗಿಲ್ಲ.
ಪಟ್ಟಣದಲ್ಲಿ ಬೆಳಿಗ್ಗೆ ನಡೆದ ರೈತರ ಪ್ರತಿಭಟನೆ ಬಂದೋಬಸ್ತ್‌ಗೆ ಅಸಾದಿ ತಡವಾಗಿ ಬಂದಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಸರ್ಕಲ್ ಇನ್‌ಸ್ಪೆಕ್ಟರ್, ‘ಇಲ್ಲೇನು ಶಾಪಿಂಗ್‌ಗೆ ಬಂದಿದ್ದೀರಾ? ಅಧೀನ ಸಿಬ್ಬಂದಿ ಎಲ್ಲಿ? ನಿಮಗೇನು ಜವಾಬ್ದಾರಿ ಇಲ್ಲವೇ?’ ಎಂದಿದ್ದಾರೆ. ಎಲ್ಲರ ಎದುರಿನಲ್ಲೇ ಈ ರೀತಿ ಕೇಳಿದ್ದಕ್ಕೆ ಅಸಾದಿ ನೊಂದುಕೊಂಡಿದ್ದರು ಎನ್ನಲಾಗಿದೆ.

ಈ ಘಟನೆ ಬಳಿಕ ಸಮೀಪದಲ್ಲಿಯೇ ಇದ್ದ ತಮ್ಮ ಮನೆಗೆ ತೆರಳಿದ ಅಸಾದಿ ನಿದ್ರೆ ಮಾತ್ರೆ ಸೇವಿಸಿದ್ದಾರೆ. ಇದನ್ನು ಕಂಡ ಪತಿ, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು. ಅಲ್ಲಿಂದ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ADVERTISEMENT

ತಿಂಗಳ ಹಿಂದೆಯಷ್ಟೇ ಇವರು ಹಿರೇಕೆರೂರು ಠಾಣೆಯಿಂದ ಹಂಸಭಾವಿಗೆ ವರ್ಗವಾಗಿದ್ದರು.‘ಸರ್ಕಲ್‌ ಇನ್ಸ್‌ಪೆಕ್ಟರ್ ಮಾತಿನಿಂದ ನೊಂದು ನಿದ್ರೆ ಮಾತ್ರೆ ಸೇವಿಸಿದ್ದಾಗಿ ಅಸಾದಿ ತಿಳಿಸಿದ್ದಾರೆ. ಸದ್ಯ ಅಪಾಯದಿಂದ ಪಾರಾಗಿದ್ದಾರೆ’ ಎಂದು ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ಕುರಿತು ನಮ್ಮ ಕುಟುಂಬದ ಹಿರಿಯರು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇವೆ. ಆದರೆ, ಸದ್ಯ ಯಾವುದೇ ದೂರು ದಾಖಲಿಸುವುದಿಲ್ಲ’ ಎಂದು ಸಹೋದರಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ರಜಿಯಾ ಅಸಾದಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.