ADVERTISEMENT

ಇನ್ನೊಂದು ಕೌಂಟರ್ ತೆರೆಯಲು ಆಗ್ರಹ

ಟಿಕೆಟ್ ಪಡೆಯಲು ನಿತ್ಯವೂ ಹೆಚ್ಚುತ್ತಿದೆ ಪ್ರಯಾಣಿಕರ ದಟ್ಟಣೆ, ಪರದಾಟ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:51 IST
Last Updated 22 ಏಪ್ರಿಲ್ 2017, 6:51 IST
ರಾಣೆಬೆನ್ನೂರು: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿರುವ ಏಕೈಕ ಕೌಂಟರ್‌ನಲ್ಲಿ  ಟಿಕೆಟ್ ಪಡೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ಇದು ಬೇಸಿಗೆ ರಜಾ ಸಮಯವಾದ್ದರಿಂದ ದಟ್ಟನೆ ಮತ್ತಷ್ಟು ಹೆಚ್ಚಿದೆ. 
 
ನಗರದ ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ 7.15ಕ್ಕೆ ಬೆಂಗಳೂರು–ಹುಬ್ಬಳ್ಳಿ ಪ್ಯಾಸೆಂಜರ್‌ ರೈಲು ಮತ್ತು ಧಾರವಾಡ–ಮೈಸೂರು ಇಂಟರ್ ಸಿಟಿ ರೈಲುಗಳು ಬಹುತೇಕ ಸಮಯ ರಾಣೆಬೆನ್ನೂರಿನಲ್ಲಿಯೇ ಏಕ ಕಾಲಕ್ಕೆ ದಾಟುತ್ತಿವೆ. ಇದರಿಂದ ಸಮಸ್ಯೆ ಉಲ್ಬಣಿಸಿದೆ.
 
‘ಮಹಿಳೆಯರಿಗೆ ಪ್ರತ್ಯೇಕ ಕೌಂಟರ್‌ ಇಲ್ಲ. ಟ್ರೇನ್‌ ಬರುವ ಬಗ್ಗೆ ಸೂಚನೆ ನೀಡಿದರೆ ಸಾಕು ಎಲ್ಲರೂ ಏಕಕಾಲಕ್ಕೆ ನುಗ್ಗುತ್ತಾರೆ. ಟಿಕೆಟ್‌ ಸಿಗುತ್ತದೆ ಇಲ್ಲವೋ ಎಂಬ ಆತಂಕ ಒಂದೆಡೆಯಾದರೆ, ಮಕ್ಕಳು–ಮರಿಗಳನ್ನು ಕಟ್ಟಿಕೊಂಡು ನಿಲ್ದಾಣದಿಂದ ಆಚೆ ಹೋಗುವ ತವಕ ಇನ್ನೊಂದಡೆ.
 
ಟಿಕೆಟ್‌ ಇಲ್ಲದೇ ಹಾಗೇ ಟ್ರೇನ್‌ ಹತ್ತಿ ಮುಂದಿನ ನಿಲ್ದಾಣದಲ್ಲಿ ಟಿಕೆಟ್‌ ತೆಗೆಸಿದ ಪ್ರಸಂಗಗಳು ಎದುರಾಗಿವೆ’ ಎಂದು ಹೆಸರು ಹೇಳಲು ಇಚ್ಛಿಸಿದ ಮಹಿಳಾ ಪ್ರಯಾಣಿಕರೊಬ್ಬರು ತಿಳಿಸಿದರು.
 
ಖಾಸಗಿ ಕೌಂಟರ್ ಇತ್ತು: ‘ನಿಲ್ದಾಣದ ಹೊರಗಡೆ ಒಂದು ಖಾಸಗಿ ಟಿಕೆಟ್ ಕೌಂಟರ್‌ ಪ್ರಾರಂಭವಾಗಿತ್ತು. ಹೆಚ್ಚಿನ ಜನರು ಅಲ್ಲಿಯೇ ಟಿಕೆಟ್‌ ಬುಕಿಂಗ್‌ ಮಾಡುವುದು, ಟಿಕೆಟ್‌ ಪಡೆಯುವುದು ಮಾಡುತ್ತಿದ್ದರು. ಆದರೆ, ಖಾಸಗಿಯವರು ಒಂದೆರಡು ರೂಪಾಯಿ ಹೆಚ್ಚಿನ ಹಣ ಪಡೆಯುತ್ತಿದ್ದರು.
 
ಈ ಕುರಿತು ಕೆಲವರು ರೈಲ್ವೆ ಇಲಾಖೆಗೆ ದೂರು ಸಲ್ಲಿಸಿದ್ದರು. ಹೀಗಾಗಿ ಇತ್ತೀಚೆಗೆ ರೈಲ್ವೆ ಇಲಾಖೆ ಅವರ ಪರವಾನಿಗೆ ಅಮಾನತು ಮಾಡಿದೆ. ಇದರಿಂದ ಮಹಿಳೆಯರಿಗೆ, ವಯೋವೃದ್ಧರಿಗೆ ಟಿಕೆಟ್‌ ಪಡೆಯುವುದು ಮತ್ತಷ್ಟು ತೊಂದರೆಯಾಗಿದೆ’ ಎನ್ನುತ್ತಾರೆ  ಪ್ರೊ.ಸುಧಾ ಪಾಟೀಲ.
 
‘ಒಂದೇ ಕೌಂಟರ್ ಇರುವುದರಿಂದ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಟಿಕೆಟ್‌ ಪಡೆಯಲು ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ನಗರದ ರೈಲ್ವೆ ನಿಲ್ದಾಣದಲ್ಲಿ ಇನ್ನೊಂದು ಟಿಕೆಟ್‌ ಕೌಂಟರ್‌ ತೆರೆಯಬೇಕು’ ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಕುಂದಾಪುರ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.
****
ಸಹಕಾರ ಬೇಕು..
‘ಇಲ್ಲಿಯ ನಿಲ್ದಾಣಕ್ಕೆ ಒಂದೇ ಟಿಕೆಟ್‌ ಕೌಂಟರ್‌ಗೆ ಮಂಜೂರಾತಿ ಇದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿ ದ್ದರಿಂದ ಇನ್ನೊಂದು ಕೌಂಟರ್‌ ತೆರೆಯುವಂತೆ ಮೈಸೂರಿನಲ್ಲಿರುವ ನೈರುತ್ಯ ರೈಲ್ವೆ ವಾಣಿಜ್ಯ ಕಚೇರಿಗೆ ಪತ್ರ ಬರೆಯಲಾಗಿದೆ.
 
ಸದ್ಯ ಪ್ರಯಾಣಿಕರ ದಟ್ಟನೆ ನಿಯಂತ್ರಿ ಸಲು ರಿಸರ್ವೇಶನ್ ಕೌಂಟರ್‌ ನಲ್ಲೂ ಟಿಕೆಟ್‌ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಅಲ್ಲಿಯ ತನಕ ಪ್ರಯಾಣಿಕರು ಸಹಕರಿಸಬೇಕು’ ಎಂದು ಹಾವೇ ರಿಯ ಮುಖ್ಯ ವಾಣಿಜ್ಯ ನಿರೀಕ್ಷಕ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.