ADVERTISEMENT

ಇಬ್ರಾಹಿಂಪುರದ ‘ಜೈ ಜವಾನ್, ಜೈ ಕಿಸಾನ್’

​ಪ್ರಜಾವಾಣಿ ವಾರ್ತೆ
Published 14 ಮೇ 2017, 9:20 IST
Last Updated 14 ಮೇ 2017, 9:20 IST

ಗಡಿ ಕಾಯುವ ಸೈನಿಕರು ಮತ್ತು ಆಹಾರ  ನೀಡುವ ರೈತರನ್ನು ಇಡೀ ದೇಶವೇ ಹೆಮ್ಮೆಯಿಂದ ‘ಜೈ ಜವಾನ್, ಜೈ ಕಿಸಾನ್’ ಎಂದು ಗೌರವಿಸುತ್ತದೆ. ಒಬ್ಬರು ದೇಶಕ್ಕೆ ಭದ್ರತೆ ನೀಡಿದರೆ, ಮತ್ತೊಬ್ಬರು ಹಸಿವು ನೀಗಿಸಿ ನೆಮ್ಮದಿಯಿಂದ ಬದುಕುವಂತೆ ಮಾಡಿದ್ದಾರೆ.

‘ದೇಶಸೇವೆ’ಯ ಈ ಎರಡು ಶ್ರೇಷ್ಠ ಕಾಯಕದ ಜೊತೆ ‘ಬರ’ದಿಂದ ಬಳಲಿದ ಜನತೆಗೆ ಉಚಿತವಾಗಿ ನೀರು ನೀಡುತ್ತಿರುವ ಸಾಧಕರು ಶಿಗ್ಗಾವಿ ತಾಲ್ಲೂಕಿನ ಇಬ್ರಾಹಿಂಪುರದ ಸಹದೇವಪ್ಪ ಹೊನ್ನಣ್ಣನವರ.

ಸಹದೇವಪ್ಪ ಹೊನ್ನಣ್ಣನವರ ಸುಮಾರು 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಸಿಕ್‌ನಲ್ಲಿ ಸಿಪಾಯಿಯಾಗಿ, ಪಂಜಾಬ್‌ನ ಚಂಡೀಗಢದಲ್ಲಿ ನಾಯಕ್‌ ಆಗಿ, ಮಧ್ಯಪ್ರದೇಶದ ಬಿರಾದ್ದೀನ್‌, ಹೈದರಾಬಾದ್‌ ಮತ್ತು ರಾಜಸ್ತಾನ ಅಜಂನಲ್ಲಿ ಸೇವೆ ಸಲ್ಲಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಜೀವದ ಹಂಗು ತೊರೆದು ಹೋರಾಡಿ ದಿಟ್ಟತನ ತೋರಿದ್ದಾರೆ. ಆದರೆ, ಸೈನ್ಯದ ನಿವೃತ್ತಿಯ ಬಳಿಕ ಸುಮಾರು ನಾಲ್ಕೂವರೆ ವರ್ಷ ಟೆಲಿಕಾಂ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರ. ಆ ಬಳಿಕ ಊರಿಗೆ ಬಂದ ಸಹದೇವಪ್ಪ ಅವರು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ADVERTISEMENT

ರೈತ ಸಹದೇವಪ್ಪ ಅವರದ್ದು ಅವಿಭಕ್ತ ಕುಟುಂಬ. ಈ ಕುಟುಂಬಕ್ಕೆ ಒಟ್ಟು 30ಎಕರೆ ಜಮೀನಿದೆ. ಅದರಲ್ಲಿ 5ಎಕರೆ ಗೋವಿನ ಜೋಳ, 5ಎಕರೆ ಶೇಂಗಾ, 10 ಎಕರೆ ಹತ್ತಿ ಬೆಳೆದಿದ್ದಾರೆ. ಈ ಬೆಳೆಯ ನೀರಾವರಿಗಾಗಿ  ಹೊಲದಲ್ಲಿನ ಕೊಳವೆ ಬಾವಿಯನ್ನು ಅವಲಂಬಿಸಿದ್ದಾರೆ. ಗ್ರಾಮದ ಇತರೆಡೆಗಿಂತ ಇವರ ಹೊಲದ ಕೊಳವೆಬಾವಿಯಲ್ಲಿ ನೀರು ಚೆನ್ನಾಗಿದೆ. 

ಆದರೆ, ಈ ಬಾರಿ  ‘ಬರ’ದ ತೀವ್ರತೆಗೆ ಗ್ರಾಮದ ಜನತೆ ಕುಡಿಯುವ ನೀರಿಗೆ ಅವಲಂಬಿಸಿದ ಮೂರು ಕೊಳವೆಬಾವಿಗಳೂ ಬತ್ತಿ ಹೋಗಿವೆ. ಜನರ ಸಮಸ್ಯೆಗೆ ಸ್ಪಂದಿಸಿದ ಸಹದೇವಪ್ಪ ತಮ್ಮ ಬೆಳೆಯನ್ನೂ ಲೆಕ್ಕಿಸದೇ, 4 ಇಂಚು ನೀರು ಹೊಂದಿದ ಒಂದು ಕೊಳವೆಬಾವಿಯನ್ನು ಗ್ರಾಮದ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ನೀಡಿದ್ದಾರೆ. ಇದರಿಂದ 1,100 ಜನಸಂಖ್ಯೆಯ ಗ್ರಾಮವು ‘ಬರ’ದ ಬವಣೆಯಿಂದ ತಾತ್ಕಾಲಿಕವಾಗಿ ಪಾರಾಗಿದೆ.

‘ನಮ್ಮಲ್ಲಿ 3 ಕೊಳವೆಬಾವಿಗಳಿದ್ದು, ಈ ಬಾರಿ ಬರದ ತೀವ್ರತಗೆ ಸಂಪೂರ್ಣ ಬತ್ತಿ ಹೋಗಿವೆ. ಹೊಸದಾಗಿ ಹಾಕಿರುವ ಒಂದು ಕೊಳವೆಬಾವಿಯಲ್ಲಿ ಸ್ವಲ್ಪ ನೀರಿದೆ. ರೈತ ಸಹದೇವಪ್ಪ ಅವರು ಸ್ವಂತ ಖರ್ಚಿನಲ್ಲಿ ನೀರು ನೀಡುವ ಮೂಲಕ  ಇಡೀ ಗ್ರಾಮಸ್ಥರ ಪಾಲಿಗೆ ಭಗೀರಥ ಎನಿಸಿಕೊಂಡಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ ಅಂಗಡಿ ಶ್ಲಾಘಿಸಿದರು.

‘ನಮ್ಮ ಗ್ರಾಮದಲ್ಲಿ 20 ರಿಂದ 25 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ರೈತ ಸಹದೇವಪ್ಪ ಅವರು  ನೀರು ನೀಡಲು ಆರಂಭಿಸಿದ ಬಳಿಕ ನಮಗೆ ನಿತ್ಯ ನೀರು ಸಿಗುತ್ತಿದೆ. ಗ್ರಾಮಸ್ಥರು ಅವರಿಗೆ ಕೃತಜ್ಞರಾಗಿದ್ದೇವೆ’ ಎಂದು ಗ್ರಾಮಸ್ಥ ಪ್ರಕಾಶ ಕುರಗೋಡಿ ಸಂತಸ ವ್ಯಕ್ತಪಡಿಸುತ್ತಾರೆ.

‘ಜನ ಕುಡಿಯುವ ನೀರಿಗೆ ಕಷ್ಟಪಡುವ ಸಂದರ್ಭದಲ್ಲಿ ನಾನೊಬ್ಬ ಬಿತ್ತನೆ ಮಾಡಿ ಅಧಿಕ ಬೆಳೆ ಪಡೆದ ಶ್ರೀಮಂತನಾಗುವ ಕೆಟ್ಟ ಆಸೆ ಇಲ್ಲ. ಸಮಾಜ ನೆಮ್ಮದಿಯಿಂದ ಇದ್ದರೆ ನಾವೂ ನೆಮ್ಮದಿಯಿಂದ ಇರಲು ಸಾಧ್ಯ. ಆದರೆ, ಯಾರೂ ಹನಿ ನೀರನ್ನು ವ್ಯರ್ಥ ಮಾಡಬಾರದು’ ಎಂದು ರೈತ ಸಹದೇವಪ್ಪ ಹೊನ್ನಣ್ಣವರ ಹೇಳುತ್ತಾರೆ. ಸಹದೇವಪ್ಪ ಹೊನ್ನಣ್ಣವರಿಗೆ ಇಡೀ ಗ್ರಾಮವೇ ‘ಜೈ ಜವಾನ್‌, ಜೈ ಕಿಸಾನ್’ ಎಂದು ಸಲಾಂ ಹಾಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.