ADVERTISEMENT

ಒಳಚರಂಡಿ ಕಾಮಗಾರಿ ಕಳಪೆ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಮೇ 2017, 7:19 IST
Last Updated 21 ಮೇ 2017, 7:19 IST

ಬ್ಯಾಡಗಿ: ‘ಪಟ್ಟಣದ ಹಂಸಭಾವಿ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ(ಯುಜಿಡಿ) ಕಾಮಗಾರಿ ಕಳಪೆಯಾಗಿದೆ’ ಎಂದು ಆರೋಪಿಸಿದ ಬಿಜೆಪಿ ಸದಸ್ಯ ಮುರಿಗೆಪ್ಪ ಶೆಟ್ಟರ ಶನಿವಾರ ನಡೆದ ಪುರಸಭೆ ಸಾಮಾನ್ಯ ಸಭೆಯಿಂದ ಹೊರ ನಡೆದರು.

‘ಒಟ್ಟು ₹64.49 ಕೋಟಿ ವೆಚ್ಚದಲ್ಲಿ ಉದ್ದೇಶಿತ 82.20 ಕಿ.ಮೀ ಒಳಚರಂಡಿ ಕಾಮಗಾರಿಗಳಲ್ಲಿ ಗುಣಮಟ್ಟವಿಲ್ಲದ ಸಾಮಗ್ರಿಗಳನ್ನು ಬಳಸಲಾಗಿದ್ದು, ಕಳಪೆಯಿಂದ ಕೂಡಿದೆ. ಕ್ಯೂರಿಂಗ್‌ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ಅವರು ದೂರಿದರು.

ಶೆಟ್ಟರ್ ಆರೋಪಕ್ಕೆ ಕಾಂಗ್ರೆಸ್‌ ಸದಸ್ಯ ಮಂಜುನಾಥ ಭೋವಿ ಹಾಗೂ ಬಿಜೆಪಿ ಸದಸ್ಯ ಮಲ್ಲನಗೌಡ ಭದ್ರಗೌಡ್ರ ದನಿಗೂಡಿಸಿದರು. ‘ಕಾಮಗಾರಿಯಿಂದ ಕಡಿಮೆ ವ್ಯಾಸದ ಪೈಪ್‌ಗಳನ್ನು ಬಳಸಲಾಗುತ್ತಿದೆ. ಜೊತೆಗೆ ಕಳಪೆ ಗುಣಮಟ್ಟದ ಇಟ್ಟಿಗೆ, ಸಿಮೆಂಟ್‌, ಕಬ್ಬಿಣ ಹಾಗೂ ಮಣ್ಣು ಮಿಶ್ರಿತ ಮರಳನ್ನು ಬಳಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಈ ಕುರಿತು ಹಲವು ಬಾರಿ ಸಭೆಯ ಗಮನಕ್ಕೆ ತರಲಾಗಿದೆ. ಆದರೂ ಕಾಮಗಾರಿ ಯಾವುದೇ ಆತಂಕವಿಲ್ಲದೇ ಮುಂದುವರೆದಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್ ಡಿ.ಮಂಜುನಾಥ, ‘ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿಯೇ ತರಲಾಗುತ್ತಿದೆ. ಇನ್ನು, ಮನೆಗಳಿಂದ ನೀರು ಹರಿಯುವಿಕೆಗೆ ತಕ್ಕಂತೆ 180ಮಿ.ಮಿ.ನಿಂದ 450ಮಿ.ಮೀ ವ್ಯಾಸದ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ.  ಕ್ಯೂರಿಂಗ್‌ ವ್ಯವಸ್ಥಿತವಾಗಿ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ಸ್ಟೇಷನ್ ರಸ್ತೆಯ ವಿಜಯನಗರ ಬಡಾವಣೆಯಲ್ಲಿರುವ ಸಿಸ್ಟರ್ನ್‌ ಟ್ಯಾಂಕ್‌ ಸೋರುತ್ತಿದೆ ಎಂದು ಸದಸ್ಯರು ಆರೋಪಿಸಿದರು. ‘ತುಂಗಭದ್ರಾ ನದಿಗೆ ಮುದೆನೂರ ಬಳಿ ಬ್ಯಾರೇಜ್‌ ನಿರ್ಮಿಸಲು ₹51ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಬಾಂದಾರ ನಿರ್ಮಾಣದ ಬಳಿಕ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಬಗೆ ಹರಿಯಲಿದೆ’ ಎಂದು ಮುಖ್ಯಾಧಿಕಾರಿ ಬಸವರಾಜ ನಾಗಲಾಪುರ ಸಭೆಗೆ ಮಾಹಿತಿ ನೀಡಿದರು.

ಅಧ್ಯಕ್ಷ ಬಸವಣ್ಣೆಪ್ಪ ಛತ್ರದ, ಉಪಾಧ್ಯಕ್ಷೆ ಸುಧಾ ಕಳ್ಳಿಹಾಳ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಮ್ಮ ಬೇವಿನಮಟ್ಟಿ, ಸದಸ್ಯರಾದ ದ್ರಾಕ್ಷಾಯಣಿ ಪಾಟೀಲ, ಯಲ್ಲಮ್ಮ ದಾವಣಗೆರೆ, ರಾಮಣ್ಣ ಕೋಡಿಹಳ್ಳಿ, ದುರ್ಗೇಶ ಗೋಣೆಮ್ಮನವರ, ಬಸವರಾಜ ಹಂಜಿ, ಶಾಂತಮ್ಮ ಕುರಕುಂದಿ, ರಾಜಾಸಾಬ ಕನವಳ್ಳಿ, ನಾರಾಯಣಪ್ಪ ಭಜಂತ್ರಿ, ನೀಲವ್ವ ದೊಡ್ಮನಿ, ನಜೀರ್‌ಅಹಮ್ಮದ ಶೇಖ, ಯೂಮನೂರಪ್ಪ ಉಜನಿ, ಪ್ರಶಾಂತ ಯಾದವಾಡ, ಮುಕ್ತಿಯಾರ್‌ ಮುಲ್ಲಾ, ಅಬ್ದುಲ್‌ಮುನಾಫ್‌ ಎರೆಶೀಮಿ, ರೋಹಿಣಿ ಹುಣಸಿಮರದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.