ADVERTISEMENT

ಕಚೇರಿಯಲ್ಲಿ ಖಾಲಿ ಮತಪೆಟ್ಟಿಗೆಗಳು!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 7:15 IST
Last Updated 13 ನವೆಂಬರ್ 2017, 7:15 IST

ಹಾವೇರಿ: ಸತ್ತು ಬಿದ್ದ ಬೆಕ್ಕಿನ ಮರಿಗಳು, ಜೇಡರ ಬಲೆ, ಕಚೇರಿಯ ಪಡಸಾಲೆಯಲ್ಲಿಯೇ ಮುರಿದ ಕುರ್ಚಿ, ಮೇಜು, ಕಡತಗಳು ಹಾಗೂ ಹಳೇ ಮತ ಪೆಟ್ಟಿಗೆಗಳ ರಾಶಿ...
ಇದು ಭೂತ ಬಂಗಲೆಯ ದೃಶ್ಯಗಳಲ್ಲ. ನಗರದ ರೈಲ್ವೆ ನಿಲ್ದಾಣದ ಎದುರಿನ ಮಿನಿ ವಿಧಾನಸೌಧದಲ್ಲಿ ಕಂಡು ಬಂದ ಚಿತ್ರಣ.

‘ಕಂದಾಯ ಇಲಾಖೆಯ ಕಚೇರಿಗಳು ಇಲ್ಲಿರುವ ಕಾರಣ ಸಾವಿರಾರು ನಾಗರಿಕರು ಪ್ರತಿನಿತ್ಯ ಬರುತ್ತಾರೆ. ವಿವಿಧ ವಿಭಾಗಗಳ ಸಿಬ್ಬಂದಿ ಇಲ್ಲಿಯೇ ಕಾರ್ಯ ನಿರ್ವಹಿಸುತ್ತಾರೆ. ಸ್ವಚ್ಛ ಭಾರತದ ಮಂತ್ರ ಜಪಿಸುವ ಅಧಿಕಾರಿಗಳು ಅವರ ಕಚೇರಿಯ ಸುತ್ತ ಗಮನಹರಿಸುತ್ತಿಲ್ಲ’ ಎಂದು ಗುತ್ತಲ ಪಟ್ಟಣದ ನಿವಾಸಿ ಮಂಜುಸಿಂಗ್‌ ಹೊಳಲ ತಿಳಿಸಿದರು.

‘ಕಚೇರಿಯ ಪಡಸಾಲೆಯಲ್ಲಿ ಉಪಯೋಗಕ್ಕೆ ಬಾರದೇ ಮುರಿದ ಕಬ್ಬಿಣದ ಕುರ್ಚಿಗಳು, ಕಟ್ಟಿಗೆಯ ಮೇಜು, ವಿವಿಧ ಯೋಜನೆಗಳ ಮಾಹಿತಿ ನೀಡುವ ಫಲಕಗಳು, ಗೋಣಿ ಚೀಲ, ಕಸ ತುಂಬಿದ ಗೊಬ್ಬರದ ಚೀಲ, ಕಂಪ್ಯೂಟರ್‌ ಬಿಡಿ ಭಾಗಗಳು, ರಟ್ಟಿನ ಪೆಟ್ಟಿಗೆ, ಖಾಲಿ ನೀರಿನ ಬಾಟಲ್‌ಗಳು ಹಾಗೂ ಟ್ರಜುರಿಗಳು ಬಿದ್ದಿವೆ. ಹೀಗಾಗಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ ಎಂದು ಅವರು ದೂರಿದರು.

ADVERTISEMENT

ಬೆಕ್ಕಿನ ಕಳೇಬರ: ಕಚೇರಿಯ ಮೊದಲ ಅಂತಸ್ತಿನ ಮೆಟ್ಟಿಲುಗಳ ಮೇಲೆ ಸತ್ತು ಬಿದ್ದ ಮೂರ್ನಾಲ್ಕು ಬೆಂಕಿನ ಮರಿಗಳ ಕಳೇಬರಗಳು ಇವೆ. ಇವುಗಳ ದುರ್ವಾಸನೆ ಜೊತೆಗೆ
ಗೋಡೆ ಹಾಗೂ ಮೂಲೆ ಮೂಲೆಗಳಲ್ಲಿ ಗುಟ್ಕಾ ತಿಂದು ಉಗುಳಿದ್ದರಿಂದ ಕಚೇರಿ ಗಬ್ಬೆದ್ದು ನಾರುತ್ತಿವೆ ಎಂದು ಕಚೇರಿಗೆ ಭೇಟಿ ನೀಡಿದ ಕರ್ಜಗಿ ಗ್ರಾಮದ ಮಹಿಳೆಯೊಬ್ಬರು
ತಿಳಿಸಿದಳು.

ಅಸ್ತವ್ಯಸ್ತ ದಾಖಲೆಗಳ ಕೋಟ್ಟಿ: ಕಡತ ಹಾಗೂ ಇತರ ದಾಖಲೆಗಳ ದಾಸ್ತಾನಿಗೆ ಇಲ್ಲಿ ಸೂಕ್ತ ವ್ಯವಸ್ಥೆಯೇ ಇಲ್ಲ. ಹೀಗಾಗಿ ಹಳೇ ದಾಖಲೆಗಳನ್ನು ಕೊಠಡಿಗಳಲ್ಲಿ ಗಂಟು ಕಟ್ಟಿ ಇಡಲಾಗಿದೆ. ವ್ಯರ್ಥ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. ಹಳೇ ಮತ ಪೆಟ್ಟಿಗೆಗಳನ್ನು ಹಾಗೂ ನಿರುಪಯುಕ್ತ ವಸ್ತುಗಳನ್ನು ಕಚೇರಿಯ ಆವರಣದಲ್ಲಿ ಇಡಲಾಗುತ್ತಿದೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಅಪಾಯಕ್ಕೆ ಆಹ್ವಾನ: ‘ಕಚೇರಿಯ ಪಡಸಾಲೆಯಲ್ಲಿಯೇ ವಿದ್ಯುತ್‌ ಮೀಟರ್ ಹೊಂದಿದೆ. ಆದರೆ, ಅದರ ಕಿಟಕಿ, ವಯರ್‌ಗಳು ಕಿತ್ತುಹೋಗಿವೆ. ಆಕಸ್ಮಿಕವಾಗಿ ಯಾರಿಗಾದರೂ ಸ್ಪರ್ಶವಾದರೆ ಅಪಾಯ ಖಚಿತ’ ಎನ್ನುತ್ತಾರೆ ಇಲ್ಲಿನ ತಬ್ಸುಲ್‌ ಬೇಗಾನವರ.

ಕಸದ ತೊಟ್ಟಿ: ಕಚೇರಿ ಮೂಲೆ ಮೂಲೆಗಳಲ್ಲಿ ಗುಟ್ಕಾ ಚೀಟಿಗಳು, ಲೋಟಗಳು, ಹಾಗೂ ರಾಶಿಯಷ್ಟು ಕಸ ಬಿದ್ದಿವೆ. ತಮ್ಮ ಮನೆಗಳನ್ನು ಈ ರೀತಿಯಾಗಿ ಇಡುತ್ತಾರೆಯೇ? ಎಂದು ಅವರು ಪ್ರಶ್ನಿಸಿದರು.

ಪ್ರವೀಣ ಸಿ. ಪೂಜಾರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.