ADVERTISEMENT

ಕಾರ್ಮಿಕರಲ್ಲಿ ಉತ್ಸಾಹ ತುಂಬುವ ಯತ್ನ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:28 IST
Last Updated 24 ಮೇ 2017, 9:28 IST
ಅಕ್ಕಿಆಲೂರ ಬಳಿಯ ಇನಾಂಯಲ್ಲಾಪುರದಲ್ಲಿ ಮಂಗಳವಾರ ನಡೆದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಶಾಸಕ ಮನೋಹರ ತಹಶೀಲ್ದಾರ್ ಶ್ರಮದಾನದಲ್ಲಿ ತೊಡಗಿರುವುದು
ಅಕ್ಕಿಆಲೂರ ಬಳಿಯ ಇನಾಂಯಲ್ಲಾಪುರದಲ್ಲಿ ಮಂಗಳವಾರ ನಡೆದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಶಾಸಕ ಮನೋಹರ ತಹಶೀಲ್ದಾರ್ ಶ್ರಮದಾನದಲ್ಲಿ ತೊಡಗಿರುವುದು   

ಅಕ್ಕಿಆಲೂರ: ಇಲ್ಲಿಗೆ ಸಮೀಪದ ಕಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇನಾಂಯಲ್ಲಾಪುರ ಗ್ರಾಮದ ಬೆಂಡೆಗಟ್ಟಿ ಕೆರೆಯಲ್ಲಿ ಮಂಗಳವಾರ ನಡೆದ ಹೂಳೆತ್ತುವ ಕಾಮಗಾರಿಯಲ್ಲಿ ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ, ಶಾಸಕ ಮನೋಹರ ತಹಶೀಲ್ದಾರ್ ಸೇರಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಶ್ರಮದಾನ ಮಾಡಿ ಗಮನ ಸೆಳೆದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೋಜಗಾರ್ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಖಾತ್ರಿ ಯೋಜನೆಯ ಅನುಷ್ಠಾನದ ಕುರಿತು ಸ್ಥಳೀಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು.

ಕೆಲಸ ನಿರ್ವ ಹಿಸುತ್ತಿದ್ದ ಕೂಲಿ ಕಾರ್ಮಿಕರ ಬಳಿ ತೆರಳಿ ಅವರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿದರು. ಕೆರೆ– ಕಟ್ಟೆಗಳ ಹೂಳೆತ್ತುವ ಜೊತೆಗೆ ಕೆರೆಗಳ ಏರಿ ಸುಧಾರಣೆಗೂ ಮುಂದಾಗುವಂತೆ ಸಂಬಂಧಿಸಿದ ಅಧಿ ಕಾರಿಗಳಿಗೆ ಸೂಚನೆ ನೀಡಿದರು. ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚು ಹೆಚ್ಚು ಸೃಷ್ಟಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗುದ್ದಲಿ, ಹಾರೆ ಹಿಡಿದು ಕಾರ್ಮಿಕರ ಜೊತೆ ಶ್ರಮದಾನ ಮಾಡಿದರು.

ADVERTISEMENT

ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ, ಕಲ್ಲಾಪುರ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ತೃಪ್ತಿಕರವಾಗಿದೆ. ಯೋಜನೆಯಡಿ ಇದುವರೆಗೂ ₹ 80 ಲಕ್ಷಕ್ಕಿಂತ ಹೆಚ್ಚು ಅನುದಾನ ಬಳಕೆ ಮಾಡಿರುವುದು ಅಭಿನಂದನಾರ್ಹ.

ದುಡಿಯುವ ಜನರಿಗೆ ಉದ್ಯೋಗ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಉದ್ದೇಶ ನೀಗುವ ಜೊತೆಗೆ ನೈಸರ್ಗಿಕ ಸಂಪತ್ತು ಸಹ ಪುನಶ್ಚೇತನಗೊಳ್ಳಲು ಸಾಧ್ಯವಿದೆ ಎಂದು ನುಡಿದ ಅವರು ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ನೀಡುವ ವೇತನ ವನ್ನು ಇದೀಗ ₹ 246ಕ್ಕೆ ಹೆಚ್ಚಿಸಲಾಗಿದೆ.

ಬರ ಅಂಥಲ್ಲಿ 100 ದಿನಗಳ ಬದಲಿಗೆ 150 ದಿನ ಕೆಲಸ ಒದಗಿಸಲಾಗುತ್ತಿದೆ ಎಂದರು. ಸರ್ಕಾರದ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಹಿನ್ನೆಲೆಯಲ್ಲಿ ಕಲ್ಲಾಪುರ ಗ್ರಾಮ ಪಂಚಾಯ್ತಿ ಬಯಲು ಶೌಚ ಮುಕ್ತವಾಗಿದ್ದು, ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಮುಂದಿನ ದಿನಗಳಲ್ಲಿ ಹೊಗೆ ಮುಕ್ತ ಗ್ರಾಮ ಪಂಚಾ ಯಿತಿಯನ್ನಾಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಗಮನ ನೀಡಿದರೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದೆ ಎಂದರು.

ಶಾಸಕ ಮನೋಹರ ತಹಶೀಲ್ದಾರ್ ಮಾತನಾಡಿ, ದುಡಿಯುವ ಕೈಗಳಿಗೆ ಕೆಲಸ ದೊರಕಿಸಬೇಕೆನ್ನುವ ಆಶಯ ದೊಂದಿಗೆ ಕೇಂದ್ರದ ಹಿಂದಿನ ಯುಪಿಎ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸಿದೆ. ವಲಸೆ ತಡೆಯುವ ನಿಟ್ಟಿನಲ್ಲಿ ಖಾತ್ರಿ ಯೋಜನೆ ಉಪಯುಕ್ತ ವಾಗಿದೆ ಎಂದು ನುಡಿದ ಅವರು ರಾಜ್ಯ ದಲ್ಲಿ ಸತತ 3 ವರ್ಷಗಳಿಂದ ಬರ ಆವರಿ ಸಿದೆ. ಆದರೂ ಕೂಡ ಕುಡಿಯುವ ನೀರು ಮತ್ತು ಮೇವಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಬಿ. ಆಂಜನಪ್ಪ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಈ ಬಾರಿ ಸರ್ಕಾರಿ ಶಾಲೆಗಳ ಆವರಣ ಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಹೊಂಡ, ತಡೆಗೋಡೆ ನಿರ್ಮಾಣದ ಮೂಲಕ ಜಲಮೂಲಗಳ ಪುನಶ್ಚೇತನಕ್ಕೆ ಗ್ರಾಮ ಪಂಚಾಯ್ತಿಗಳು ಮುಂದಾಗಬೇಕಿದೆ. ಪಂಚಾಯ್ತಿ ಆಡಳಿತ ಮಂಡಳಿ ಸದಸ್ಯರು ಮತ್ತು ಪಿಡಿಒ ಉತ್ಸಾಹದಿಂದ ಕೆಲಸ ನಿರ್ವಹಿಸಿದರೆ ಸಾರ್ವಜನಿಕರಿಗೆ ಸರ್ಕಾ ರದ ಸೌಲಭ್ಯ ತಲುಪಲಿವೆ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನೀರ್‌ ಅಹ್ಮದ ಗೊಂದಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೆಗಣ್ಣಿ, ಸದಸ್ಯರಾದ ರಾಘವೇಂದ್ರ ತಹಶೀಲ್ದಾರ್, ಟಾಕನಗೌಡ ಪಾಟೀಲ, ರಾಜೇಶ್ವರಿ ಕಲ್ಲೇರ, ತಾ.ಪಂ ಅಧ್ಯಕ್ಷ ಎಸ್.ಬಿ.ಪೂಜಾರ, ಸದಸ್ಯ ತಿಪ್ಪಣ್ಣ ದೊಡ್ಡ ಕೋವಿ, ತಹಶೀಲ್ದಾರ್ ಶಕುಂತಲಾ ಚೌಗಲಾ, ತಾ.ಪಂ. ಇಓ ಪುಟ್ಟಪ್ಪನವರ ಇದ್ದರು.

* * 

ಕೆರೆ ಸೇರಿ ಇತರ ಜಲಮೂಲ ಸಂರಕ್ಷಣೆಯಲ್ಲಿ ತೊಡಗುವುದು ಕೂಲಿ ಕೆಲಸ ಅಲ್ಲ. ಅದು ದೇಶ ಸಂರಕ್ಷಣೆಯ ಕೆಲಸ. ನಾಳಿನ ಬದುಕಿಗೆ ಜಲಮೂಲಗಳ ಸಂರಕ್ಷಣೆ ಅನಿವಾರ್ಯ
ಡಾ.ಎಂ.ವಿ.ವೆಂಕಟೇಶ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.