ADVERTISEMENT

ಕುಡಿವ ನೀರಿನ ಘಟಕಗಳ ದುರಸ್ತಿಗೆ ಸೂಚನೆ

ಪ್ರತಿ ಗ್ರಾಮಗಳ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಶಾಸಕ ಓಲೇಕಾರ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 13:15 IST
Last Updated 27 ಮೇ 2018, 13:15 IST

ಹಾವೇರಿ: ‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಹದಗೆಟ್ಟ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಾರದೊಳಗೆ ದುರಸ್ತಿ ಮಾಡಿಸಬೇಕು’ ಎಂದು ಶಾಸಕ ನೆಹರು ಓಲೇಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ನಡೆದ ‘ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಅವರು ಮಾತನಾಡಿದರು.

ವಿವಿಧ ಯೋಜನೆ, ಅನುದಾನ ಹಾಗೂ ಸಹಕಾರಿ ಸಂಘಗಳಿಂದ ಅನುಷ್ಠಾನಕ್ಕೆ ಬಂದ ಶುದ್ಧ ಕುಡಿಯುವ ನೀರಿನ ಘಟಕಗಳ ಪರಿಸ್ಥಿತಿ ಹಾಗೂ ಅವುಗಳ ದುರಸ್ತಿ ಜವಾಬ್ದಾರಿಗಳ ಕುರಿತು ಪ್ರತಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ
ಅಧಿಕಾರಿ ಹಾಗೂ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕರು ಚರ್ಚಿಸಿದರು.

ADVERTISEMENT

‘ತಾಲ್ಲೂಕಿನಲ್ಲಿ ಒಟ್ಟು 117 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳ ಪೈಕಿ ಕೆಲವು ನಮ್ಮ ಇಲಾಖೆ, ಇನ್ನು ಕೆಲವು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಕೆಆರ್‌ಡಿಸಿಎಲ್‌ ಮೂಲಕ ಅನುಷ್ಠಾನಕ್ಕೆ ಬಂದಿವೆ. ಆದರೆ, ಕೆಆರ್‌ಡಿಸಿಎಲ್‌ ಮೂಲಕ ಅನುಷ್ಠಾನಕ್ಕೆ ಬಂದ ಶುದ್ಧ ಕುಡಿಯುವ ನೀರಿನ ಘಟಕಗಳು, ಪದೇ ಪದೇ ದುರಸ್ತಿಯಾಗುತ್ತಿವೆ ಎಂದು ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ‘ಕೆಆರ್‌ಡಿಸಿಎಲ್‌ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಠಾನಕ್ಕೆ ಅನುಮತಿ ನೀಡಬಾರದು ಎಂದು ಸೂಚನೆ ನೀಡಲಾಗಿತ್ತು. ಅದಾಗ್ಯೂ ಅವರಿಗೆ ನೀಡಿದ್ದೇಕೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಲಾಖಾ ಅಧಿಕಾರಿಗಳು, ಕೆಆರ್‌ಡಿಸಿಎಲ್‌ ಅವರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಠಾನಕ್ಕೆ ಸರ್ಕಾರದಿಂದಲೇ ಅನುಮತಿ ನೀಡಲಾಗಿದೆ ಎಂದರು.

ತಾಲ್ಲೂಕಿನಲ್ಲಿ ಈ ಬಾರಿ 182 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, 14 ಗ್ರಾಮಗಳು ತೀವ್ರವಾಗಿ ನೀರಿನ ಸಮಸ್ಯೆ ಎದುರಿಸುತ್ತಿವೆ. ಈ ಪಟ್ಟಿ ಪ್ರತಿ ವಾರ ಬದಲಾಗುತ್ತದೆ ಎಂದರು.

ಶಾಸಕರಾದ ನೆಹರು ಓಲೇಕಾರ ಹಾಗೂ ವಿರೂಪಾಕ್ಷಪ್ಪ ಬಳ್ಳಾರಿ ಅವರು ಸಭೆಯ ಆರಂಭದಲ್ಲಿ ಅಧಿಕಾರಿಗಳ ಪರಿಚಯ ಮಾಡಿಕೊಂಡರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಉಪಾಧ್ಯಕ್ಷೆ ನಾಗಮ್ಮಬಂಕಾಪುರ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದರಾಜ ಕಲಕೋಟಿ, ತಾಲ್ಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪ್ರಕಾಶ, ಕಾರ್ಯ ನಿರ್ವಹಣಾಧಿಕಾರಿ ಅಶೋಕ ಪಾಟೀಲ, ತಹಶೀಲ್ದಾರ್‌ ನವೀನ ಹುಲ್ಲೂರ ಇದ್ದರು.

ಪತಿ ದರ್ಬಾರ್!
ಸಭೆಗೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಲಕ್ಷ್ಮವ್ವ ಗೊರವರ ಬದಲಾಗಿ, ಅವರ ಪತಿ ಮಾರುತಿ ಗೊರವರ ಹಾಜರಾಗಿದ್ದು, ಕುಡಿಯುವ ನೀರು ಮತ್ತಿತರ ವಿಚಾರಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಪತ್ನಿಯ ಅಧಿಕಾರ ಪತಿ ಚಲಾಯಿಸುವುದು ತಪ್ಪು. ಆದರೆ, ಅವರೇ ನೇರವಾಗಿ ಬಂದು ಕುಳಿತುಕೊಂಡಿದ್ದಾರೆ. ಶಾಸಕರ ಅಧ್ಯಕ್ಷತೆ ಸಭೆಯ ಕಾರಣ ನಾವು ಮಾತನಾಡಲು ಬರುವುದಿಲ್ಲ. ಇನ್ನು ಮುಂದೆ ಯಾರೂ ಅಧಿಕಾರ ದುರುಪಯೋಗ ಪಡಿಸದ ರೀತಿಯಲ್ಲಿ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಾನು ಹೊಸದಾಗಿ ಬಂದಿದ್ದೇನೆ. ಹೀಗಾಗಿ ಗೊಂದಲ ಉಂಟಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಇ.ಒ. ಅಶೋಕ ಬಿ. ಪಾಟೀಲ್ ತಿಳಿಸಿದರು.

**
ತಾಲ್ಲೂಕಿನ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ಸಮಗ್ರ ಮಾಹಿತಿಯನ್ನು ನೀಡಬೇಕು. ಪರಿಶೀಲನೆ ನಡೆಸಲಾಗುವುದು
ನೆಹರು ಓಲೇಕಾರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.