ADVERTISEMENT

ಕೃಷಿ ಭೂಮಿಗೆ 21 ಪೋಷಕಾಂಶ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 9:24 IST
Last Updated 20 ಏಪ್ರಿಲ್ 2017, 9:24 IST

ರಟ್ಟೀಹಳ್ಳಿ: ಸಾವಯವ ಅಥವಾ ನೈಜ ಕೃಷಿಗೆ ಸಾಮಾನ್ಯವಾಗಿ ಭೂಮಿಯಲ್ಲಿ 21 ಪೋಷಕಾಂಶಗಳ ಅಗತ್ಯವಿದೆ ಎಂದು ಎಂದು ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞ ಅಶೋಕ ನುಡಿದರು.ಸಮೀಪದ ದೊಡ್ಡಗುಬ್ಬಿ ಗ್ರಾಮದಲ್ಲಿ ಮಂಗಳವಾರ ನಡೆ ಹಿರೇಕೆರೂರ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದೊಡ್ಡಗುಬ್ಬಿ ಗ್ರಾಮದ ಕೃಷಿ ಸಾಧಕಿ ಜಯಮ್ಮ ಚನ್ನ­ಗೌಡ್ರ ಮತ್ತು ಕಡೂರ ಗ್ರಾಮದ ಪ್ರಗತಿಪರ ಕೃಷಿಕ ಶಂಕರಗೌಡ ಶಿರಂಗಂಬಿ ಇವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಇಂದು ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ಭೂಮಿಗೆ ಅಗತ್ಯಕ್ಕಿಂತ ಹೆಚ್ಚಿನ ಪೋಷಕಾಂಶ ಸೇರಿಸುತ್ತಿದ್ದೇವೆ. ಹೀಗಾಗಿ ಭೂಮಿ ತನ್ನ ನೈಜತೆಯನ್ನು ಕಳೆದುಕೊಂಡಿದೆ. ಸಾವ­ಯವ ಗೊಬ್ಬರ, ಜೀವಾಮೃತ ಬಳಸುವ ಮೂಲಕ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳ­ಬಹುದು. ರೈತರು ತಮ್ಮ ಜಮೀನಿನ ಮಣ್ಣಿನ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸುತ್ತಿರಬೇಕು. ಇದ­ರಿಂದ ಭೂಮಿಗೆ ಬೇಕಾಗುವ ಪೋಷ­ಕಾಂಶಗಳ ಅಗತ್ಯತೆ ಅರಿಯಬ­ಹುದಾಗಿದೆ. ಬೆಳೆಗಳ ಬದ­ಲಾ­­ವ­ಣೆ­­­ಯಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದರು.

ದೊಡ್ಡಗುಬ್ಬಿ ಗ್ರಾಮದ ಕೃಷಿ ಸಾಧಕಿ ಜಯಮ್ಮ ಚನ್ನಗೌಡ್ರ ಪ್ರಶ್ತಿ ಸ್ವೀಕರಿಸಿ ಮಾತನಾಡಿ  ‘ರೈತರು ಕೇವಲ ವಾಣಿಜ್ಯ ಬೆಳೆಗಳ ಬಗ್ಗೆ ಹೆಚ್ಚಿನ ಗಮನ ನೀಡದೆ ಸಿರಿಧಾನ್ಯಗಳ ಬಗ್ಗೆ ವಿಶೇಷ ಕಾಳಜಿ­ವಹಿಸಿದರೆ ಲಾಭ ನಿರೀಕ್ಷಿಸ­ಬಹುದು. ಸಾವಯವ ವಿಧಾನದಲ್ಲಿ ತಕ್ಷಣ ಲಾಭ ನಿರೀಕ್ಷೆ ಮಾಡಬಾರದು. ಮಾರುಕಟ್ಟೆ­ಯಲ್ಲಿ ಸಾವಯವ ಬೆಳೆಗಳಿಗೆ ಹೆಚ್ಚಿನ ಬೆಲೆಯಿದೆ. ಇದಕ್ಕಾಗಿಯೇ ಗ್ರಾಹಕರಿ­ದ್ದಾರೆ’ ಎಂದರು.

ADVERTISEMENT

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಂಪ್ಪನವರ ಮಾತ­ನಾಡಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಅಗ್ಗದ ಯೋಜನೆ ಹಮ್ಮಿಕೊ­ಳ್ಳಬಾರದು. ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಬೆಲೆಯನ್ನು ನಿಗದಿ ಮಾಡಿ ಹೆಚ್ಚಿನ ಲಾಭ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.

ಕಡೂರ ಗ್ರಾಮದ ಪ್ರಗತಿಪರ ಕೃಷಿಕ ಶಂಕರಗೌಡ ಶಿರಂಗಂಬಿ ಮಾತ­ನಾಡಿದರು. ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹಪ್ಪ ನಡುವಿನಮನಿ, ರುದ್ರಗೌಡ ಸಾವುಕಾರ, ಮಲ್ಲೇಶಪ್ಪ ಶಿರಿಗೇರಿ, ನಾಗಪ್ಪ ಬಿದರಿ, ಮಾದೇಗೌಡ ಮಾಜಿ­ಗೌಡ್ರ, ಪ್ರಭು ಯತ್ತಿನಹಳ್ಳಿ, ಗಣೇಶಪ್ಪ ಮಾಜಿಗೌಡ್ರ, ಕೃಷಿ ಇಲಾಖೆಯ ಶಿಲ್ಪಾ ಬಣಕಾರ, ಮಂಗಳಾ ಹುಲ್ಲತ್ತಿ, ಹನು­ಮಂತಗೌಡ ಗುಬ್ಬಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.